ಕನ್ನಡಪ್ರಭ ವಾರ್ತೆ ಮಳವಳ್ಳಿ
ಅಭಿವೃದ್ಧಿಯ ಅರ್ಥ ಗೊತ್ತಿಲ್ಲದವರು ಅಭಿವೃದ್ಧಿಯ ಬಗ್ಗೆ ಮಾತನಾಡಬಾರದು. ಬಾಯಿ ಚಪಲಕ್ಕೆ ಮಾತನಾಡುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಅವರು ಮಾಜಿ ಶಾಸಕ ಡಾ.ಕೆ.ಅನ್ನದಾನಿ ಆರೋಪಗಳಿಗೆ ತಿರುಗೇಟು ನೀಡಿದರು.ಮಳವಳ್ಳಿ ತಾಲೂಕಿನ ಅಭಿವೃದ್ಧಿಯ ಬಗ್ಗೆ ಹಿಂದಿನಿಂದಲೂ ಸವಾಲು ಹಾಕಿಕೊಂಡೆ ಬಂದಿದ್ದೇನೆ. ಅದನ್ನು ಸ್ವೀಕರಿಸಲು ಸಿದ್ಧರಿಲ್ಲ. ಕೊನೆಯ ಪಕ್ಷ ತಮ್ಮ ಅವಧಿಯಲ್ಲಿ ಮಳವಳ್ಳಿ ತಾಲೂಕಿನಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳ ಸಾಕ್ಷಿ ಗುಡ್ಡಗಳನ್ನು ತೋರಿಸುವುದಿಲ್ಲ. ಟೀಕೆ ಮಾಡುವುದೇ ಅವರ ಕಾಯಕವಾಗಿದೆ. ಅಂತಹವರಿಗೆಲ್ಲ ಉತ್ತರ ಕೊಡಲಾಗುವುದಿಲ್ಲ ಎಂದರು.
ಮಳವಳ್ಳಿ ತಾಲೂಕಿನ ನೀರಾವರಿ ಪ್ರದೇಶದ ಅಭಿವೃದ್ಧಿಗೆ ಏನೆಲ್ಲಾ ಯೋಜನೆಗಳನ್ನು ಜಾರಿಗೊಳಿಸಿದ್ದೇನೆ ಎನ್ನುವುದು ತಾಲೂಕಿನ ಜನರಿಗೆ ಗೊತ್ತಿದೆ. ಇದೀಗ ತಾಲೂಕಿನ ವಿ.ಸಿ.ನಾಲಾ ಆಧುನೀಕರಣ ಕಾಮಗಾರಿಗೆ 200 ಕೋಟಿ ರು. ಹಣ ಬಿಡುಗಡೆಗೊಳಿಸಿ ಟೆಂಡರ್ ಪ್ರಕ್ರಿಯೆ ನಡೆಸಲಾಗುತ್ತಿದೆ. ಕೆರೆಗಳನ್ನು ತುಂಬಿಸಿ ಏತ ನೀರಾವರಿ ಯೋಜನೆಗಳನ್ನು ಜಾರಿಗೊಳಿಸುವ ಪ್ರಯತ್ನದಲ್ಲಿದ್ದೇನೆ. ಬಿ.ಜಿ.ಪುರ ಹೋಬಳಿ ಹಾಗೂ ಹಲಗೂರು ಹೋಬಳಿ 20 ವರ್ಷದ ಹಿಂದೆ ಹೇಗಿತ್ತು. ನೀರಾವರಿಯಲ್ಲಿ ಈಗ ಏನೆಲ್ಲಾ ಅಭಿವೃದ್ಧಿಯನ್ನು ಕಂಡಿದೆ. ಅದು ಯಾರ ಅವಧಿಯಲ್ಲಾಯಿತು ಎಂಬ ಬಗ್ಗೆ ಟೀಕೆ ಮಾಡುವವರು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಕುಟುಕಿದರು.ಬರಡಾಗಿದ್ದ ತಾಲೂಕಿಗೆ ನೀರಾವರಿ ಯೋಜನೆಗಳನ್ನು ಮೊದಲ ಬಾರಿ ರೂಪಿಸಿ ಅನುಷ್ಠಾನಕ್ಕೆ ತಂದವನು ನಾನು. ಜೆಡಿಎಸ್ ಅವಧಿಯಲ್ಲಿ ಒಂದೇ ಒಂದು ನೀರಾವರಿ ಯೋಜನೆ ಜಾರಿಗೊಳಿಸಿದ್ದರೆ ಹೇಳಲಿ. ನಾನು ಅಧಿಕಾರದಲ್ಲಿದ್ದ ಸಮಯದಲ್ಲಿ ಹಂತ ಹಂತವಾಗಿ ನೀರಾವರಿ ಯೋಜನೆಗಳಿಗೆ ಮೊದಲ ಆದ್ಯತೆ ನೀಡಿ ಜನರಿಗೆ ನೀರು ಕೊಡುವ ಪ್ರಯತ್ನ ಮಾಡಿದ್ದೇನೆ. ಬರಡಾಗಿದ್ದ ಎಷ್ಟೋ ಕೃಷಿ ಪ್ರದೇಶಗಳು ಈಗ ಹಸಿರಿನಿಂದ ಕೂಡಿರುವುದಕ್ಕೆ ನನ್ನ ಅವಧಿಯಲ್ಲಿ ಜಾರಿಗೊಳಿಸಿದ ನೀರಾವರಿ ಯೋಜನೆಗಳು ಪ್ರಮುಖ ಕಾರಣವಾಗಿವೆ ಎಂದರು.
ವೈಯಕ್ತಿಕ ಕಾರಣಗಳಿಂದ ಆಗಿರುವ ಕೊಲೆಗಳಿಗೆ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದರೆ ಏನರ್ಥ. ಅಭಿವೃದ್ಧಿಯನ್ನು ಸಹಿಸಲಾಗದವರು ಟೀಕೆ ಮಾಡುವುದಕ್ಕೋಸ್ಕರವೇ ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ಸರ್ಕಾರಿ ಭೂಮಿಯನ್ನು ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಪರಭಾರೆ ಮಾಡಿದವರು ಯಾರು, ಹೆಣ್ಣು ಭ್ರೂಣ ಹತ್ಯೆ ಯಾರ ಅವಧಿಯಲ್ಲಿ ನಡೆದದ್ದು, ಹೀಗೆ ಮಾತನಾಡಬೇಕೆಂದರೆ ನಮಗೂ ತುಂಬಾ ವಿಷಯಗಳಿವೆ. ಅಭಿವೃದ್ಧಿಯ ಅರಿವಿಲ್ಲದವರಿಂದ ಮಾತ್ರ ಇಂತಹ ಮಾತುಗಳು ಹೊರಬರಲು ಸಾಧ್ಯ ಎಂದು ಟೀಕಿಸಿದರು.ದ್ವೇಷದ ರಾಜಕಾರಣ ನನ್ನ ಜಾಯಮಾನಕ್ಕೆ ಬಂದಿಲ್ಲ. ಅದನ್ನು ಮಾಡುವ ಅಗತ್ಯವೂ ನನಗಿಲ್ಲ. ತಾಲೂಕಿನ ಮತ್ತು ಜನರ ಅಭಿವೃದ್ಧಿಯೊಂದೇ ನನ್ನ ಮುಂದಿರುವ ಗುರಿ. ಅಭಿವೃದ್ಧಿಯನ್ನು ತಾವು ಮಾಡುವುದಿಲ್ಲ. ಮಾಡುವವರನ್ನು ನೋಡಿ ಸಹಿಸಲು ಆಗುವುದಿಲ್ಲ ಎಂದರೆ ನಾವೇನು ಮಾಡಲಾಗುವುದಿಲ್ಲ ಎಂದರು.