ಸರ್ಕಾರಿ ಶಾಲೆಗಳ ಬಗ್ಗೆ ಕೀಳಿರಿಮೆ ಸಲ್ಲ: ನ್ಯಾ.ನರೇಂದ್ರ ಪ್ರಸಾದ್

KannadaprabhaNewsNetwork |  
Published : Jan 22, 2024, 02:17 AM IST
ನರಸಿಂಹರಾಜಪುರ ತಾಲೂಕಿನ ಮುತ್ತಿನಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಾರ್ಷಿಕೋತ್ಸವ  ಸಮಾರಂಭದಲ್ಲಿ ಬೆಂಗಳೂರಿನ ಹೈಕೋರ್ಟ ನ್ಯಾಯಾಧೀಶ ಜಸ್ಜೀಸ್ ಎಚ್‌.ಟಿ.ನರೇಂದ್ರ ಪ್ರಸಾದ್‌ ಹಾಗೂ ಎಚ್‌.ನರಸಿಂಹಯ್ಯ ರಾಜ್ಯ ಪ್ರಶಸ್ತಿ ಪುರಸ್ಕೃತ  ಎಚ್.ಟಿ.ರಾಜೇಂದ್ರ ಅವರನ್ನು ಸನ್ಮಾನಿಸಲಾಯಿತು | Kannada Prabha

ಸಾರಾಂಶ

ಮುತ್ತಿನಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಾರ್ಷಿಕೋತ್ಸವ ಸಮಾರಂಭದಲ್ಲಿ ಬೆಂಗಳೂರಿನ ಹೈಕೋರ್ಟ್ ನ್ಯಾಯಮೂರ್ತಿ ಜಸ್ಟೀಸ್ ಎಚ್.ಟಿ.ನರೇಂದ್ರಪ್ರಸಾದ್ ಮಾತನಾಡಿ, ಸರ್ಕಾರಿ ಶಾಲೆ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಾ ಇರುತ್ತದೆ. ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳು ಇಂದು ಅನೇಕ ಉನ್ನತ ಹುದ್ದೆ ಅಲಂಕರಿಸಿದ್ದಾರೆ ಎಂದರು.

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಸರ್ಕಾರಿ ಶಾಲೆಗಳ ಬಗ್ಗೆ ಕೀಳಿರಿಮೆ ಬೇಡ ಎಂದು ಬೆಂಗಳೂರಿನ ಹೈಕೋರ್ಟ್ ನ್ಯಾಯಮೂರ್ತಿ ಜಸ್ಟೀಸ್ ಎಚ್.ಟಿ.ನರೇಂದ್ರಪ್ರಸಾದ್ ಹೇಳಿದರು.

ಅವರು ತಾಲೂಕಿನ ಮುತ್ತಿನಕೊಪ್ಪ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ನಾನು ನರಸಿಂಹರಾಜಪುರ ತಾಲೂಕಿನ ಮಡಬೂರಿನ ಸರ್ಕಾರಿ ಶಾಲೆಯಲ್ಲಿ ಓದಿದ್ದೇನೆ. ಮುತ್ತಿನಕೊಪ್ಪ ಸರ್ಕಾರಿ ಶಾಲೆಯಲ್ಲೂ ಪರೀಕ್ಷೆ ಬರೆದಿದ್ದೇನೆ. ಸರ್ಕಾರಿ ಶಾಲೆ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಾ ಇರುತ್ತದೆ. ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳು ಇಂದು ಅನೇಕ ಉನ್ನತ ಹುದ್ದೆ ಅಲಂಕರಿಸಿದ್ದಾರೆ. ಪೋಷಕರು ಸರ್ಕಾರಿ ಶಾಲೆ ಬಗ್ಗೆ ಕೀಳಿರಿಮೆ ಬಿಡಬೇಕು. ನಾನೂ ಕೂಡ ಸರ್ಕಾರಿ ಶಾಲೆಯಲ್ಲಿ ಓದಿ ಉನ್ನತ ಹುದ್ದೆಯಲ್ಲಿದ್ದೇನೆ. ಆದ್ದರಿಂದ ನನ್ನನ್ನು ನೋಡಿ ಸರ್ಕಾರಿ ಶಾಲೆ ಮಕ್ಕಳಿಗೆ ಆತ್ಮಸ್ಥೈರ್ಯ ಬರಲಿ ಎಂದು ನಾನು ಇಂದಿನ ಕಾರ್ಯಕ್ರಮಕ್ಕೆ ಬಂದಿದ್ದೇನೆ ಎಂದರು.

ಮಕ್ಕಳಿಗೆ ಪರೀಕ್ಷೆ ಬರೆಯಲು ಭಯ ಇರುತ್ತದೆ. ಅದನ್ನು ಮೊದಲು ತೊಡೆದು ಹಾಕಬೇಕು. ಈ ಶಾಲೆಗೆ ದೈಹಿಕ ಶಿಕ್ಷಕರಿಲ್ಲದರ ಬಗ್ಗೆ ಶಾಸಕರು ಗಮನ ಹರಿಸಬೇಕು. ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಕಾಣುತ್ತಿದೆ. ಗ್ರಾಮೀಣ ಭಾಗದ ಮಕ್ಕಳಿಗೆ ಅಗಾಧ ಪ್ರತಿಭೆಗಳಿರುತ್ತವೆ. ಅದನ್ನು ಹೊರ ಹಾಕಲು ಸೂಕ್ತ ವೇದಿಕೆ ನಾವು ಕಲ್ಪಿಸಿಕೊಡಬೇಕು. ಈ ಶಾಲೆ ಮಕ್ಕಳು ಕ್ರೀಡಾ ಕೂಟಗಳಲ್ಲಿ ಸಾಧನೆಯನ್ನು ಮಾಡಿದ್ದಾರೆ. ಅವರಿಗೆ ಸೂಕ್ತ ತರಬೇತುದಾರರು ಬೇಕಾಗಿದ್ದಾರೆ ಎಂದರು.

ಮುಖ್ಯ ಅತಿಥಿಯಾಗಿದ್ದ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಹಿಂದೆ ಉನ್ನತ ಶಿಕ್ಷಣವಿಲ್ಲದೆ, ಯಾವುದೇ ಸಾಧನೆ ಮಾಡದೇ ಬದುಕಬಹುದಾಗಿತ್ತು. ಆದರೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯೆ ಇಲ್ಲದಿದ್ದರೆ ಏನನ್ನೂ ಸಾಧಿಸಲು ಸಾಧ್ಯವೇ ಇಲ್ಲ. ಶಿಕ್ಷಣ ಈಗ ಎಲ್ಲರ ಜೀವನಕ್ಕೂ ಅತ್ಯವಶ್ಯಕವಾಗಿದೆ. ಬದುಕನ್ನು ಕಲ್ಪಿಸಿಕೊಳ್ಳಲು ಬಹಳಷ್ಟು ಕ್ಷೇತ್ರಗಳಿವೆ. ಆದರೆ, ಮನುಷ್ಯನಿಗೆ ಕನಿಷ್ಠ ಶಿಕ್ಷಣದ ಅನಿವಾರ್ಯತೆ ಇದೆ. ಈ ಶಾಲೆಗಳಿಗೆ ನಾನು ಬಹಳಷ್ಟು ಅನುದಾನ ನೀಡಿದ್ದೇನೆ. ಮುತ್ತಿನಕೊಪ್ಪ ಶಾಲೆಗೆ ಕೆಪಿಎಸ್ ಮಂಜೂರು ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಸಮಾರಂಭ ಉದ್ಘಾಟಿಸಿದ ಎಚ್.ನರಸಿಂಹಯ್ಯ ರಾಜ್ಯ ಪ್ರಶಸ್ತಿ ಪುರಸ್ಕೃತ ಎಚ್.ಟಿ.ರಾಜೇಂದ್ರ ಮಾತನಾಡಿ, ನಾನೂ ಕೂಡ ಸರ್ಕಾರಿ ಶಾಲೆಯಲ್ಲಿಯೇ ಓದಿದ್ದೇನೆ. ಮುತ್ತಿನಕೊಪ್ಪ ಗ್ರಾಪಂ ಸದಸ್ಯನಾಗಿ ನಾನು ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಿ ಜಿಪಂ ಸದಸ್ಯನೂ ಆಗಿದ್ದೆ. ಮುತ್ತಿನಕೊಪ್ಪದ ಜನರ ಋಣ ತೀರಿಸಲು ಸಾಧ್ಯವೇ ಇಲ್ಲ. ಮನುಷ್ಯನಿಗೆ ಏನೇ ವಿದ್ಯಾಭ್ಯಾಸವಿದ್ದರೂ ಕೂಡ ಪ್ರಾಮಾಣಿಕತೆ ಹಾಗೂ ಕರ್ತವ್ಯ ನಿಷ್ಠೆ ಬಹಳ ಮುಖ್ಯವಾಗಿದೆ. ಶಾಲೆಗಳು ಎಲ್ಲಾ ಧರ್ಮೀಯರನ್ನೂ ಒಗ್ಗೂಡಿಸುತ್ತದೆ ಎಂದರು.

ಜಿಲ್ಲಾ ಡಯೆಟ್ ಉಪನ್ಯಾಸಕ ಎಸ್.ಸಿ.ಶಂಕರಪ್ಪ ಮಾತನಾಡಿ, ಈ ಶಾಲೆ 1920ರಲ್ಲಿ ಪ್ರಾರಂಭವಾಗಿದೆ. ಶಾಲೆಯಲ್ಲಿ 124 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳು ಉತ್ತಮ ಶಿಕ್ಷಣ ಜೊತೆಗೆ ಶಿಸ್ತನ್ನು ಕಲಿಸುತ್ತದೆ. ಚುನಾಯಿತ ಜನಪ್ರತಿನಿಧಿಗಳ, ಶಾಲಾಭಿವೃದ್ಧಿ ಸಮಿತಿ, ಪೋಷಕರ, ಸಾರ್ವಜನಿಕರ ಸಹಕಾರದಿಂದ ಇಂದು ಸರ್ಕಾರಿ ಶಾಲೆಗಳು ಅತ್ಯುತ್ತಮವಾಗಿ ನಡೆಯುತ್ತಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸಿ.ಎಲ್.ಮನೋಹರ್, ಅತಿಥಿಯಾಗಿದ್ದ ಜಮೀನ್ದಾರ್ ಡಾ.ಕೆ.ಪಿ.ಅಂಶುಮಂತ್ ಮಾತನಾಡಿದರು. ಇದೇ ವೇಳೆ ಬೆಂಗಳೂರಿನ ಹೈಕೋರ್ಟ್ ನ್ಯಾಯಮೂರ್ತಿ ಎಚ್.ಟಿ. ನರೇಂದ್ರಪ್ರಸಾದ್ ಹಾಗೂ ಅವರ ಸಹೋದರ ಎಚ್.ಟಿ.ರಾಜೇಂದ್ರ, ಶಾಸಕ ಟಿ.ಡಿ.ರಾಜೇಗೌಡ ಅವರನ್ನು ಸನ್ಮಾನಿಸಲಾಯಿತು.

ಸಭೆಯಲ್ಲಿ ಮುತ್ತಿನಕೊಪ್ಪ ಗ್ರಾಪಂ ಉಪಾಧ್ಯಕ್ಷ ಎಂ.ಎಸ್.ನರೇಂದ್ರ, ಸದಸ್ಯರುಗಳಾದ ಮಹಮ್ಮದ್‌ ಫಯಾಜ್, ಪುಷ್ಪಾ, ಲಿಸ್ಸಿಸೆಬಾಸ್ಟಿನ್, ಜಮೀನ್ದಾರ್ ಕಣಿವೆ ವಿನಯ್, ಮುತ್ತಿನಕೊಪ್ಪ ಪಿಯು ಕಾಲೇಜಿನ ಪ್ರಾಂಶುಪಾಲ ಶಶಿಧರ, ಸಿಆರ್‌ಪಿ ಗೀತಾ, ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಹರ್ಷ,ಮುಖ್ಯ ಶಿಕ್ಷಕಿ ಗೀತಾ, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ವಾರ್ಷಿಕೋತ್ಸದ ಅಂಗವಾಗಿ ಮಕ್ಕಳಿಗಾಗಿ ನಡೆದ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಹಾಗೂ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!