ಯಲ್ಲಾಪುರ: ಶಾಸಕ ಶಿವರಾಮ ಹೆಬ್ಬಾರ ಅವರ ಕುರಿತಾಗಿ ತಲಾಕ್ ಎನ್ನುವ ಶಬ್ದ ಬಳಸಿ ಅತ್ಯಂತ ಅಸಂಸದೀಯ ಪದಬಳಕೆ ಮಾಡಿದ ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಮತ್ತು ಅನನುಭವಿ, ನೈತಿಕತೆ ಇಲ್ಲದ ಬಿಜೆಪಿ ಮಂಡಲಾಧ್ಯಕ್ಷ ಹೇಳಿಕೆ ನೀಡಿರುವುದು ಖಂಡನೀಯ ಎಂದು ಹೆಬ್ಬಾರ ಅಭಿಮಾನಿ ಬಳಗದ ಮುರಳಿ ಹೆಗಡೆ, ಶಿರೀಷ್ ಪ್ರಭು, ಡಾ. ರವಿ ಭಟ್ಟ ತಿಳಿಸಿದರು.
ಶಾಸಕ ಹೆಬ್ಬಾರ ರಾಜೀನಾಮೆಗೆ ಆಗ್ರಹಿಸಿದ್ದಕ್ಕೆ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿ, ಶಾಸಕ ಶಿವರಾಮ ಹೆಬ್ಬಾರ ೨ ಸಲ ಕಾಂಗ್ರೆಸ್ಸಿನಿಂದಲೂ, ೨ ಸಲ ಬಿಜೆಪಿಯಿಂದಲೂ ಶಾಸಕರಾಗಿದ್ದಾರೆ. ನೇರವಾಗಿ ಕ್ಷೇತ್ರದ ಜನರಿಂದಲೇ ಮತ ಪಡೆದು, ಆಯ್ಕೆಯಾಗಿದ್ದಾರೆ. ಅವರ ರಾಜೀನಾಮೆ ಕೇಳುವ ಯಾವ ನೈತಿಕತೆಯೂ ಇವರಿಗೆ ಇಲ್ಲ. ಕೇವಲ ಜನರಲ್ಲಿ ಹೆಬ್ಬಾರರ ಬಗ್ಗೆ ತಪ್ಪು ಗ್ರಹಿಕೆ ಮೂಡಿಸುವ ಉದ್ದೇಶದಿಂದ ಇಂತಹ ಹೇಳಿಕೆಗಳು ಬರುತ್ತಿದೆ ಎಂದರು.ಶಾಂತಾರಾಮ ಸಿದ್ದಿಯವರು ಜನರಿಂದ ಆರಿಸಿ ಬಂದವರಲ್ಲ. ಸರ್ಕಾರದಿಂದ ನೇಮಿಸಲ್ಪಟ್ಟಿದ್ದಾರೆ. ಇವರ ನೇಮಕಾತಿಯಲ್ಲಿ ಹೆಬ್ಬಾರರ ಸಹಕಾರವೂ ಇದೆ ಎಂಬುದನ್ನು ಮರೆಯಬಾರದು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ೨೫೦೦೦ಕ್ಕಿಂತಲೂ ಅಧಿಕ ಮತ ಲೀಡ್ ಮೂಲಕ ಹೆಬ್ಬಾರ ಆರಿಸಿಬರಬೇಕಿತ್ತು. ಆದರೆ, ಕ್ಷೇತ್ರದಲ್ಲಿ ಕೆಲವು ಬಿಜೆಪಿಯ ಮುಖಂಡರು ನಿರಂತರ ಪ್ರಯತ್ನಪಟ್ಟು ವಿ.ಎಸ್. ಪಾಟೀಲರಿಗೆ ಮತ ಹಾಕುವಂತೆ ಮತದಾರರಿಗೆ ಒತ್ತಡ ಹೇರಿ, ಹೆಬ್ಬಾರರನ್ನು ಸೋಲಿಸುವಲ್ಲಿ ತೀವ್ರ ಪ್ರಯತ್ನಪಟ್ಟಿದ್ದರು. ಆದರೆ, ನಿಷ್ಠಾವಂತ ಕಾರ್ಯಕರ್ತರ ಮೂಲಕ ಮತದಾರರು ಹೆಬ್ಬಾರರನ್ನು ಗೆಲ್ಲಿಸಿದ್ದಾರೆ. ಬಿಜೆಪಿಯವರು ತಮ್ಮ ಪಕ್ಷ ತತ್ವ, ಸಿದ್ಧಾಂತ, ಶ್ರೇಷ್ಠತೆ, ಸಂಸ್ಕೃತಿ, ಮೌಲ್ಯ ಇವುಗಳನ್ನು ಹೊಂದಿದ ಪಕ್ಷ ಎಂದು ಹೇಳಿಕೊಳ್ಳುವ ಇವರಿಗೆ ತಲಾಕ್ ಎನ್ನುವ ಕೀಳುಮಟ್ಟದ ಶಬ್ದ ಹೇಗೆ ಬರುತ್ತದೆ ಎಂದು ಪ್ರಶ್ನಿಸಿದರು.
ತಾಪಂ ಮಾಜಿ ಉಪಾಧ್ಯಕ್ಷೆ ಸುಜಾತಾ ಸಿದ್ದಿ ಮಾತನಾಡಿ, ವಿಧಾನಪರಿಷತ್ ಸದಸ್ಯರಾಗಿ ನಮ್ಮ ಹಿಂದುಳಿದ ಸಮಾಜದ ಶಾಂತಾರಾಮ ಸಿದ್ದಿಯವರನ್ನು ನೇಮಿಸಿದಾಗ ನಾವೆಲ್ಲಾ ಹೆಮ್ಮೆ ಪಟ್ಟಿದ್ದೆವು. ಆದರೆ ಈವರೆಗೂ ಸಮಾಜಕ್ಕೆ ಯಾವುದೇ ರೀತಿಯ ಒಳಿತನ್ನು ಮಾಡಿಲ್ಲ. ಬಡವರ ಬಗ್ಗೆ ಕಾಳಜಿಯೂ ಇಲ್ಲ. ಆದರೆ, ಶಾಸಕ ಶಿವರಾಮ ಹೆಬ್ಬಾರ ಬಡವರ, ದೀನ- ದಲಿತರ ಪರವಾಗಿ ಸದಾ ಬೆನ್ನಿಗೆ ನಿಂತಿದ್ದಾರೆ ಎಂದರು.ಡಾ. ರವಿ ಭಟ್ಟ, ಪಪಂ ಮಾಜಿ ಅಧ್ಯಕ್ಷ ಶಿರೀಷ್ ಪ್ರಭು, ಕುಂದರಗಿಯ ದತ್ತು ನಾಯ್ಕ ಮಾತನಾಡಿದರು. ಪ್ರಮುಖರಾದ ಸುಬ್ಬಣ್ಣ ಕುಂಟೇಗಾಳಿ, ಎಂ.ಆರ್. ಹೆಗಡೆ ತಾರೇಹಳ್ಳಿ, ಸುಬ್ರಹ್ಮಣ್ಯ ಗಾಂವ್ಕರ, ಪಪಂ ಸದಸ್ಯರಾದ ಪುಷ್ಪಾ ನಾಯ್ಕ, ರವಿ ಪಾಟಣಕರ, ಸತೀಶ ನಾಯ್ಕ, ವಜ್ರಳ್ಳಿ ಗ್ರಾಪಂ ಅಧ್ಯಕ್ಷ ಭಗೀರತ ನಾಯ್ಕ, ಪ್ರಮುಖರಾದ ಸುನಂದಾ ದಾಸ್, ಗೋಪಾಲ ಸಿದ್ದಿ, ಆನಂದರಾಯ ಗೋಡಸಿಂಗಿ, ಮಾಚಣ್ಣ ಹಲಗುಮನೆ, ಮಂಜುನಾಥ ಹೆಗಡೆ, ಗಣಪತಿ ಗೌಡ ಮುಂತಾದವರು ಉಪಸ್ಥಿತರಿದ್ದರು.