ಕನ್ನಡಪ್ರಭ ವಾರ್ತೆ ಮಂಗಳೂರು
ಸಾಹಿತ್ಯ ಕೃತಿಯೊಂದರ ವಿಮರ್ಶೆ ಎಂದರೆ ಪೂರ್ಣವಾಗಿ ಹೊಗಳುವುದು ಅಥವಾ ತೆಗಳುವುದು ಎಂಬ ಮನಸ್ಥಿತಿ ಈಗ ಬೆಳೆದು ಬಂದಿದೆ. ಈಗ ವಿಮರ್ಶೆ ಮಾಡಿದರೆ ಅದರಲ್ಲಿ ಜಾತಿ, ಮತ, ಧರ್ಮ, ರಾಜಕೀಯದ ದೃಷ್ಟಿ ಹುಡುಕುವ ಸ್ಥಿತಿ ಇದೆ. ಸಾಂಸ್ಕೃತಿಕ ಜಗತ್ತಿಗೆ ಇದು ಬಹುದೊಡ್ಡ ಅಪಾಯ ಎಂದು ಹಿರಿಯ ವಿದ್ವಾಂಸ, ವಿಶ್ರಾಂತ ಕುಲಪತಿ ಡಾ. ಬಿ.ಎ.ವಿವೇಕ ರೈ ಕಳವಳ ವ್ಯಕ್ತಪಡಿಸಿದರು.ಟಿ.ಎ.ಎನ್. ಖಂಡಿಗೆ ಬರೆದಿರುವ ‘ಬರಿಗಾಲ ನಡಿಗೆ’ ಕೃತಿಯನ್ನು ಭಾನುವಾರ ಮಂಗಳೂರಿನ ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಪಠ್ಯಪುಸ್ತಕ ಪರಿಷ್ಕರಣೆ ಹಿಂದೆ ಮಾಡುವಾಗ ಎಡ, ಬಲ ಎಂಬ ಸೂತ್ರವೇ ನಮಗೆ ಗೊತ್ತಿರಲಿಲ್ಲ. ವಿದ್ಯಾರ್ಥಿ ವಿಕಸನ ಮಾತ್ರ ನಮ್ಮ ಉದ್ದೇಶವಾಗಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಎಲ್ಲವನ್ನೂ ಪ್ರತ್ಯೇಕವಾಗಿ ವಿಭಜಿಸುವ ಸ್ಥಿತಿ ಉಂಟಾಗಿದೆ. ಹಾಸ್ಯ ಸಾಹಿತ್ಯ ಎಂಬುವುದಂತು ಈಗ ಬರುವುದೇ ಇಲ್ಲ. ಯಾಕೆಂದರೆ ಹಾಸ್ಯ ಮಾಡಿದರೆ ಸಮಸ್ಯೆ ಸೃಷ್ಟಿಯಾಗುವ ಭಯ ಇದೆ. ಇದೆಲ್ಲವೂ ವಿಮರ್ಶೆಯ ಮೇಲೆ ಪರಿಣಾಮ ಬೀರುವಂತಾಗಿದೆ ಎಂದು ಅವರು ವಿವರಿಸಿದರು.ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಎಂ ಉಜಿರೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ರಾಜಶೇಖರ ಹಳೆಮನೆ ಕೃತಿ ಅವಲೋಕಿಸಿದರು. ಕಾಸರಗೋಡು ಕನ್ನಡ ಲೇಖಕರ ಸಂಘದ ಅಧ್ಯಕ್ಷ ಡಾ.ರಮಾನಂದ ಬನಾರಿ ಶುಭಾಸಂಶನೆ ಮಾಡಿದರು.ಕೇರಳ ಗಡಿನಾಡ ಘಟಕ ಅಧ್ಯಕ್ಷ ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಎಸ್‌ಡಿಎಂ ಪ್ರಾಧ್ಯಾಪಕ ಕೆ.ಪುಷ್ಪರಾಜ್, ಲೇಖಕ ಟಿ.ಎ.ಎನ್ ಖಂಡಿಗೆ ಇದ್ದರು.ಆಕೃತಿ ಆಶಯ ಪಬ್ಲಿಕೇಶನ್ಸ್ ಪ್ರಕಾಶಕರಾದ ಕಲ್ಲೂರು ನಾಗೇಶ್ ಸ್ವಾಗತಿಸಿದರು. ಆಳ್ವಾಸ್ ಪ್ರಾಧ್ಯಾಪಕರಾದ ಡಾ.ಯೋಗೀಶ್ ಕೈರೋಡಿ ನಿರೂಪಿಸಿದರು.ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಶ್ರೀ ಧ.ಮಂ.ಕಾನೂನು ಮಹಾವಿದ್ಯಾಲಯ, ಆಕೃತಿ ಆಶಯ ಪಬ್ಲಿಕೇಶನ್ಸ್, ಕಾಸರಗೋಡು ಕನ್ನಡ ಲೇಖಕರ ಸಂಘ, ಕ.ಸಾ.ಪ ಕೇರಳ ಗಡಿನಾಡ ಘಟಕ ಕಾಸರಗೋಡು ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.