- ಕೇಂದ್ರ ಸರ್ಕಾರ ವಿರುದ್ಧ ಅನಗತ್ಯ ಟೀಕೆ: ರೇಣುಕಾಚಾರ್ಯ ಆರೋಪ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಬಗ್ಗೆ ಸಚಿವ ಪ್ರಿಯಾಂಕ ಖರ್ಗೆ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. ಜವಾಬ್ದಾರಿಯುತ ಗ್ರಾಮೀಣಾಭಿವೃದ್ಧಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರಿಗೆ ಇದು ಶೋಭೆ ತರುವುದಿಲ್ಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.ಸೋಮವಾರ ತಮ್ಮ ನಿವಾಸದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಶ್ಚಿಮ ಬಂಗಾಳದಲ್ಲಿ ಸರಿಸುಮಾರು 90 ಲಕ್ಷ ನಕಲಿ ಮಾತದಾರರನ್ನು ಮತದಾರರ ಪಟ್ಟಿಯ ಪರಿಷ್ಕರಣೆ (ಎಸ್‌ಐಆರ್) ಫಲವಾಗಿ ಕೈಬಿಡಲಾಗಿದೆ. ಇದರ ಪರಿಣಾಮವಾಗಿ ಸಂವಿಧಾನದ ಆಶಯದಂತೆ ಈಗ ನೈಜ ಮತದಾರರಿಂದಾಗಿ ಆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಂತಾಗಿದೆ. ಇದು ಕಾಂಗ್ರೆಸ್‌ಗೆ ಸಹಿಸಲಾಗುತ್ತಿಲ್ಲ. ಈ ಕಾರಣಕ್ಕಾಗಿ ಸಚಿವ ಪ್ರಿಯಾಂಕ್ ಖರ್ಗೆ ಅನಗತ್ಯವಾಗಿ ಕೇಂದ್ರ ಸರ್ಕಾರವನ್ನು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಕಳೆದ 3 ವರ್ಷಗಳಿಂದ ಬಡವರಿಗೆ ಮನೆಗಳನ್ನು ಹಂಚಿಲ್ಲ, ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಇದೀಗ ಕಾಂಗ್ರೆಸ್‌ನವರಿಗೆ ಮುಂದಿನ ಚುನಾವಣೆಯಲ್ಲಿ ಸೋಲಿನ ಭೀತಿ ಕಾಡಲಾರಂಭಿಸಿದೆ. ಈ ಹಿನ್ನೆಲೆ ತಮ್ಮ ಸರ್ಕಾರದ ವೈಫಲ್ಯತೆಗಳನ್ನು ಮರೆಮಾಚಲು ಕೇಂದ್ರ ಸರ್ಕಾರದ ಕಡೆಗೆ ಬೊಟ್ಟು ಮಾಡಿ ತೋರಿಸುತ್ತಾ ಕಾಲಕಳೆಯುತ್ತಿದ್ದಾರೆ. ಸರ್ಕಾರದ ಸಾಧನ ಸಮಾವೇಶಗಳನ್ನು ಮಾಡುತ್ತಾ ಜನರ ಹಣ ಅಪವ್ಯಯ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ತಾ. ಅಧ್ಯಕ್ಷ ನಾಗರಾಜ್, ಮಾಜಿ ಅಧ್ಯಕ್ಷ ಜೆ.ಕೆ.ಸುರೇಶ್, ಶಿವಾನಂದ, ಕುಬೇಂದ್ರಪ್ಪ, ನೆಲಹೊನ್ನೆ ಮಂಜು, ಬಾಬು ಹೋಬಳದಾರ್, ಎಸ್.ಎಸ್.ಬೀರಪ್ಪ, ಬಡಾವಣೆ ರಂಗಪ್ಪ, ಮುಖಂಡರು ಉಪಸ್ಥಿತರಿದ್ದರು.
(ಕೋಟ್) ಪ್ರಸ್ತುತ ಕಾಂಗ್ರೆಸ್‌ನಲ್ಲಿ ಎರಡು-ಮೂರು ಸಚಿವರು ಪೈಪೋಟಿಗೆ ಬಿದ್ದವರಂತೆ ಕೇಂದ್ರದ ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸುವುದರಲ್ಲಿ ಕಾಲಹರಣ ಮಾಡುತ್ತಿದ್ದಾರೆ ಹೊರತು, ಅವರ ಖಾತೆಗಳ ಬಗ್ಗೆ, ಅಭಿವೃದ್ಧಿ ಬಗ್ಗೆ ಕಿಂಚ್ಚಿತ್ತೂ ಗಮನಹರಿಸುತ್ತಿಲ್ಲ.
- - -
ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸೋಮವಾರ ತಮ್ಮ ನಿವಾಸದಲ್ಲಿ ಎಸ್.ಐ.ಆರ್. ಜಾರಿ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.