ಬೆಳೆಹಾನಿ ಪರಿಹಾರ ವಿಳಂಬ, ರೈತಸಂಘ ಪ್ರತಿಭಟನೆ

KannadaprabhaNewsNetwork | Published : Sep 10, 2024 1:35 AM

ಸಾರಾಂಶ

ಅತಿವೃಷ್ಟಿ, ಅನಾವೃಷ್ಟಿಯಿಂದ ಬೆಳೆ ಕಳೆದುಕೊಂಡ ರೈತರಿಗೆ ಸಕಾಲಕ್ಕೆ ಪರಿಹಾರ ನೀಡದ ಸರಕಾರದ ಧೋರಣೆ ಖಂಡಿಸಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೂರಾರು ರೈತರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ಮಾಡಿ ನಂತರ ಭಗತ್ ಸಿಂಗ್ ವೃತ್ತದಲ್ಲಿ ಅರ್ಧ ಗಂಟೆಗಳ ಕಾಲ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ರಟ್ಟೀಹಳ್ಳಿ:ಅತಿವೃಷ್ಟಿ, ಅನಾವೃಷ್ಟಿಯಿಂದ ಬೆಳೆ ಕಳೆದುಕೊಂಡ ರೈತರಿಗೆ ಸಕಾಲಕ್ಕೆ ಪರಿಹಾರ ನೀಡದ ಸರಕಾರದ ಧೋರಣೆ ಖಂಡಿಸಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೂರಾರು ರೈತರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ಮಾಡಿ ನಂತರ ಭಗತ್ ಸಿಂಗ್ ವೃತ್ತದಲ್ಲಿ ಅರ್ಧ ಗಂಟೆಗಳ ಕಾಲ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಐ.ಬಿ. ಸರ್ಕಲ್‌ನಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ಶಿವಾಜಿ ನಗರ, ಹಳೇ ಬಸ್‌ ನಿಲ್ದಾಣ ಸರ್ಕಲ್, ಸಂಗೊಳ್ಳಿ ರಾಯಣ್ಣ ವೃತ್ತ, ಮಹಾಲಕ್ಷ್ಮೀ ಸರ್ಕಲ್‌ ಮುಖಾಂತರ ಭಗತ್‌ಸಿಂಗ್‌ ವೃತ್ತ ತಲುಪಿ ರಸ್ತೆ ತಡೆ ನಡೆಸಿ ನಂತರ ತಹಸೀಲ್ದಾರ್‌ ಕಚೇರಿಗೆ ಮುತ್ತಿಗೆ ಹಾಕಿದರು.

ನಂತರ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ಅತಿವೃಷ್ಟಿ ಅನಾವೃಷ್ಟಿಯಿಂದ ಬೆಳೆ ಕಳೆದುಕೊಂಡ ರೈತರಿಗೆ ಎಸ್.ಡಿ.ಆರ್.ಎಫ್‌. ಎನ್.ಡಿ.ಆರ್.ಎಫ್‌. ಫಂಡ್‌ನಲ್ಲಿ ಇರುವಂತ ಹಣವನ್ನು ಸಕಾಲಕ್ಕೆ ಪರಿಹಾರ ನೀಡದ ಸರಕಾರಗಳು ಹಾಗೂ ಅಧಿಕಾರಿಗಳು ನಮ್ಮ ಪಾಲಿಗೆ ಇದ್ದು ಸತ್ತಂಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ದೇಶದ ಮಾಲಿಕ ರೈತ ನಮ್ಮನ್ನಾಳುವ ರಾಜಕಾರಣಿಗಳು ಸಂಬಳದ ಆಳುಗಳಿದ್ದಂತೆ ಆದರೆ ನಮ್ಮನ್ನಾಳುವ ರಾಜಕಾರಣಿಗಳು ಐಷಾರಾಮಿ ಜೀವನ ನಡೆಸಿ ಮಾಲೀಕನಾದ ರೈತನನ್ನು ಬೀದಿಗಿ ಬೀಳುವಂತೆ ಮಾಡಿದೆ. ಬೆಲೆ ನೀತಿಯಲ್ಲಿ ಮೊಸ, ಸಾಲ ನೀತಿಯಲ್ಲಿ ಮೋಸ, ಮಾರುಕಟ್ಟೆಯಲ್ಲಿ ಮೋಸ, ಪರಿಹಾರದಲ್ಲಿ ಮೋಸ ಸೇರಿದಂತೆ ರೈತನ ಬೆನ್ನೆಲುಬಾಗಿ ಪುಡಿ ಮಾಡಿ ಸಮಾಧಿ ಮೇಲೆ ರಾಜಕಾರಣ ಮಾಡುತ್ತಿರುವ ಭ್ರಷ್ಟ ಕಾಂಗ್ರೆಸ್‌ ಬಿಜೆಪಿಗೆ ನಮ್ಮ ದಿಕ್ಕಾರ,

ಸರಕಾರಗಳು ಬೆಳೆ ವಿಮಾ ಕಂಪನಿಗಳಲ್ಲಿ ಒಳ ಒಪ್ಪಂದ ಮಾಡಿಕೊಂಡು ಕಳೆದ ವರ್ಷದಲ್ಲಿ 284 ಕೋಟಿ ವಿಮೆ ತುಂಬಿದ ರೈತನಿಗೆ ಮಧ್ಯಂತರ ಪರಿಹಾರ ನೀಡಿದ್ದು ಕೇವಲ 129 ಕೋಟಿ ನೀಡಿ ತಾಲೂಕಿನ 22 ಪಂಚಾಯತ್ ವ್ಯಾಪ್ತಿಯಲ್ಲಿ ಒಂದು ರುಪಾಯಿ ಬರ ಪರಿಹಾರ ಕೊಡದೆ ರೈತರಿಗೆ ಮೋಸ ಮಾಡಿ ವಿಮಾ ಕಂಪನಿಗಳು ಮಾತ್ರ ಲಾಭ ಮಾಡಿಕೊಂಡು ಐಶಾರಾಮಿ ಜೀವನ ನಡೆಸುತ್ತಿದ್ದಾರೆ. ಅನ್ಯಾಯದ ವಿರುದ್ಧ ಯಾವ ಶಾಸಕನಾಗಲಿ ಜಿಲ್ಲಾ ಉಸ್ತುವಾರಿ ಮಂತ್ರಿ, ಮುಖ್ಯಮಂತ್ರಿಗಳು ಮಾತ್ರ ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳುತ್ತಾ ಕಾಲ ಹರಣ ಮಾಡುತ್ತಿದ್ದು ಮುಂಬರುವ ದಿನಗಳಲ್ಲಿ ರೈತರು ಬೇರೆ ರೂಪದಲ್ಲಿ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಬೆಳೆ ವಿಮೆ, ಬೆಳೆ ಪರಿಹಾರ ಸಮರ್ಪಕವಾಗಿ ವಿತರಿಸದೆ 2023-24ನೇ ಸಾಲಿನಲ್ಲಿ ಬಾಕಿ ಇರುವ ಪರಿಹಾರವನ್ನು ತ್ವರಿತವಾಗಿ ಇತ್ಯರ್ಥಗೊಳಿಸಬೇಕು. 2023-24ರಲ್ಲಿ ಸಂಪೂರ್ಣ ಹಾವೇರಿ ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಬೇಕು, ಹಾಲಿನ ಬಿಲ್ಲು ಹಾಗೂ ಪ್ರೋತ್ಸಾಹ ಧನ ಹಾಲು ಉತ್ಪಾದಕರಿಗೆ ನೀಡಬೇಕು, ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ನಿಗಮದಿಂದ ಬೇಕಾ ಬಿಟ್ಟಿಯಾಗಿ ರೈತರ ಭೂಮಿ ಸ್ವಾಧೀನದಿಂದ ಹಿಂದೆ ಸರಿಯುವುದು ಸೇರಿದಂತೆ ರೈತರ ಎಲ್ಲ ಮನವಿಗಳನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಸಿದರು.

ಪ್ರತಿಭಟನಾ ಸ್ಥಳಕ್ಕೆ ಎಸಿ ಕೆ. ಚನ್ನಪ್ಪ ಭೇಟಿ ನೀಡಿ ಮನವಿ ಸ್ವೀಕರಿಸಿ ನಂತರ ಮಾತನಾಡಿ, ಅವರು ಬೆಳೆ ವಿಮೆ ಹಾಗೂ ಬೆಳೆ ಪರಿಹಾರಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದಲ್ಲಿ ಸಂಬಂಧ ಪಟ್ಟ ಎಲ್ಲ ಅಧಿಕಾರಿಗಳು ರೈತ ಮುಖಂಡರ ಜೊತೆ ಸಭೆ ನಡೆಸಿ ರೈತರ ಬೇಡಿಕೆಗಳಿಗೆ ಸ್ಪಂದಿಸುವುದಾಗಿ ಹೇಳಿದ ನಂತರ ಪ್ರತಿಭಟನೆ ಕೈಬಿಡಲಾಯಿತು.

ಇದೇ ಸಂದರ್ಭದಲ್ಲಿ ಎಚ್.ಎಚ್. ಮುಲ್ಲಾ, ಪ್ರಭುಗೌಡ ಪ್ಯಾಟಿ, ಶಂಕರಗೌಡ ಶಿರಗಂಬಿ, ಮಾಲತೇಶ ಪೂಜಾರ, ಉಜನೆಪ್ಪ ಕೊಡಿಹಳ್ಳಿ, ಸರೇಶ ಚಲವಾದಿ, ಬಸನಗೌಡ ಗಂಗಪ್ಪಳವರ, ಶಂಭಣ್ಣ ಮುತ್ತಗಿ, ರಾಜು ಮುತ್ತಗಿ, ಗಂಗನಗೌಡ ಮುದಿಗೌಡ್ರ ಸೇರಿದಂತೆ ನೂರಾರು ರೈತರು ಇದ್ದರು.

Share this article