ಕಣಗುಪ್ಪೆ ಬಳಿ ಘಟನೆ । ತೋಟದಲ್ಲಿದ್ದ ಶೆಡ್ ಯಂತ್ರಕ್ಕೆ ತೊಂದರೆ
ತಾಲೂಕಿನ ಅನುಘಟ್ಟ ಸಮೀಪದ ಕಣಗುಪ್ಪೆ ಗ್ರಾಮದ ಸಮೀಪದ ತೋಟೇಶ್, ಚಂದ್ರಶೇಖರ್, ವಸಂತ್ ಅವರ ಕಾಫಿ ತೋಟಕ್ಕೆ ಲಗ್ಗೆ ಇಟ್ಟಿರುವ ಆನೆಗಳು ಬಾಳೆಯನ್ನು ತಿಂದು ಹಾಳು ಮಾಡಿದರೆ, ಕಾಫಿ ಗಿಡಗಳನ್ನು ತುಳಿದು ನಾಶಪಡಿಸುತ್ತಿವೆ. ಸಣ್ಣಪುಟ್ಟ ಮರ, ಗಿಡಗಳನ್ನು ಮುರಿದು ಹಾಕಿವೆ. ತೋಟದೊಳಗೆ ನಿರ್ಮಿಸಿದ್ದ ಕೊಳಕ್ಕೆ ಆನೆಗಳು ನೀರು ಕುಡಿಯಲು ಇಳಿದಿರುವುದರಿಂದ ಕೊಳದ ಸುತ್ತ ನಿರ್ಮಿಸಿದ್ದ ತಡೆಗೋಡೆ ಕುಸಿದಿದೆ, ಮೋಟಾರ್ ಹಾನಿಗೊಳಗಾಗಿದೆ. ಪರಿಣಾಮ ಲಕ್ಷಾಂತರ ರು. ನಷ್ಟವಾಗಿದೆ ಎನ್ನುತ್ತಾರೆ ಬೆಳೆಗಾರರು.
ಆನೆಗಳ ಹಾವಳಿಯಿಂದ ಕಂಗೆಟ್ಟಿರುವ ಬೆಳೆಗಾರರು ತೋಟದೊಳಕ್ಕೆ ಬರುವುದಕ್ಕೆ ಹೆದರುತ್ತಿದ್ದಾರೆ. ಆನೆಗಳು ಓಡಾಡುವ ಸಂದರ್ಭ ಕಂಡು ಬರುವ ಆನೆಗಳು ತೋಟದ ಮನೆ, ಶೆಡ್ ಇತ್ಯಾದಿಗಳನ್ನು ಉರುಳಿಸುವುದು, ವಸ್ತುಗಳ ನಾಶಪಡಿಸುವುದು ನಡೆಯುತ್ತಿದೆ. ಶೆಡ್ಡಿನಲ್ಲಿ ಇರಿಸಿದ್ದ ೧೦ ಮೂಟೆ ಗೊಬ್ಬರವನ್ನು ಆನೆ ಹಾಳು ಮಾಡಿದೆ. ಮೂರು ಗುಂಪಿನಲ್ಲಿರುವ ಆನೆಗಳಲ್ಲಿ ಒಂದು ಗುಂಪು ಮಲಸಾವರ ಗ್ರಾಮದ ಆಸುಪಾಸಿನ ತೋಟದಲ್ಲಿ ಬೀಡು ಬಿಟ್ಟಿದ್ದರೆ, ಉಳಿದ ಎರಡು ಗುಂಪುಗಳು ಕಣಗುಪ್ಪೆ ಸಮೀಪದ ತೋಟದಲ್ಲಿ ಬೀಡು ಬಿಟ್ಟಿವೆ. ಕಣಗುಪ್ಪೆ ಸಮೀಪದ ಇಂದ್ರಮ್ಮ ಎಂಬುವರ ತೋಟದಲ್ಲಿ ಮನ ಬಂದಂತೆ ಬೆಳೆ ಹಾನಿ ಉಂಟು ಮಾಡಿದೆ.ಇತ್ತೀಚಿಗಷ್ಟೇ ಪ್ರವೀಣ್ ಎಂಬುವರ ಮನೆಯ ಮುಂದೆ ನಿಲ್ಲಿಸಿದ್ದ ಕಾರಿನ ಬ್ಯಾನಟ್ ಮೇಲೆ ಆನೆ ಕಾಲಿಟ್ಟು ಹಾನಿ ಉಂಟು ಮಾಡಿತ್ತು. ನಂದೀಶ್ ಅವರ ತೋಟದಲ್ಲಿಯೂ ಸಾಕಷ್ಟು ಹಾನಿ ಸಂಭವಿಸಿದೆ. ಆನೆ ಹಾವಳಿ ನಿಯಂತ್ರಣಕ್ಕೆ ಅಧಿಕಾರಿಗಳು, ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಬೇಕೆಂದು ಬೆಳೆಗಾರರು ಆಗ್ರಹಿಸಿದ್ದಾರೆ.