ಕನ್ನಡಪ್ರಭ ವಾರ್ತೆ ಕುಶಾಲನಗರ
ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳಿಂದ ಅಕಾಲಿಕ ಮಳೆಯಿಂದಾಗಿ ವಿವಿಧ ಬೆಳೆಗಳು ನೆಲಕಚ್ಚಿ ಹಾನಿಯಾಗಿವೆ. ಸ್ಧಳಕ್ಕೆ ಸಂಬಂಧಿಸಿದ ಅಧಿಕಾರಿ ವರ್ಗದವರು ಭೇಟಿ ನೀಡಿ ಪರಿಶೀಲನೆ ನಡೆಸಿ ರೈತರಿಗೆ ಪರಿಹಾರವನ್ನು ಒದಗಿಸುವಂತೆ ರೈತರರಾದ ಕೆ.ವಿ. ಸಣ್ಣಪ್ಪ, ಪ್ರಕಾಶ್, ಕುಮಾರ್ ಜಗದೀಶ್ ಒತ್ತಾಯಿಸಿದ್ದಾರೆ.ಕುಶಾಲನಗರ ತಾಲೂಕು ಕೂಡುಮಂಗಳೂರು ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷ ಡಿ. ಭಾಸ್ಕರ ನಾಯಕ್ ಅಧ್ಯಕ್ಷತೆಯಲ್ಲಿ ನಡೆದ 2024-25ನೇ ಸಾಲಿನ ಗ್ರಾಮ ಸಭೆಯಲ್ಲಿ ಈ ಆಗ್ರಹ ವ್ಯಕ್ತವಾಯಿತು.
ಹಿಂದಿನ ಗ್ರಾಮ ಸಭೆ ವರದಿಯನ್ನು ಸಭೆಗೆ ಮಂಡಿಸುವ ಸಂದರ್ಭದಲ್ಲಿ ಕಳೆದ ಬಾರಿ ಚರ್ಚೆಯಾದ ಪ್ರಮುಖ ವಿಷಯವಾದ ಕೂಡ್ಲೂರು ಕೈಗಾರಿಕಾ ಕೇಂದ್ರದಲ್ಲಿರುವ ವಿವಿಧ ಕೈಗಾರಿಕಾ ಘಟಕದ ಉದ್ಯಮಿಗಳಿಂದ ತೆರಿಗೆ ವಸೂಲಾತಿ ನಿರ್ಣಯ ಅನುಷ್ಠಾನಗೊಳ್ಳದಿರುವ ಬಗ್ಗೆ ಆಕ್ರೋಶ ಕೇಳಿ ಬಂತು.ಸಿ.ವಿ. ನಾಗೇಶ್, ಸಣ್ಣಪ್ಪ, ರಾಜು ಸೇರಿದಂತೆ ಹಲವರು ಮಂದಿ ಅಕ್ಷೇಪ ವ್ಯಕ್ತಪಡಿಸಿದರು.
ಕಳೆದ ಸಾಲಿನ ಗ್ರಾಮ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಕ್ರಮಬದ್ಧವಾಗಿ ಸಂಬಂಧಿಸಿದ ಇಲಾಖೆಗೆ ಪತ್ರ ವ್ಯವಹಾರ ಮಾಡಿದ ಬಗ್ಗೆ, ಮತ್ತು ಕೈಗಾರಿಕಾ ಘಟಕ ಸಂಬಂಧಿಸಿದ ಇಂಜಿನಿಯರ್ ಗೈರು ಹಾಜರಿ ಬಗ್ಗೆ ಚರ್ಚೆಗಳು ನಡೆದವು.ಗ್ರಾಮ ಪಂಚಾಯಿತಿ ನೂತನ ಕಟ್ಟಡಕ್ಕೆ ಸಂಬಂಧಿಸಿದಂತೆ ಜಾಗದ ವಿಷಯಕ್ಕೆ ಹಾಗೂ ಬಸವತ್ತೂರು ಗ್ರಾಮದ ಬೆಟ್ಟದ ಕಡೆಯಿಂದ ಬರುವ ಮಳೆಯ ನೀರು ಸರಾಗವಾಗಿ ಹರಿಯಲು ಸಮರ್ಪಕ ಚರಂಡಿ ವ್ಯವಸ್ಥೆ ಮಾಡದೆ ನೀರು ಸಮೀಪ ಮನೆಗಳಿಗೆ ಮತ್ತು ರಾಜ್ಯ ಹೆದ್ದಾರಿ ಮೇಲೆ ಹರಿಯುತ್ತಿರುವ ಬಗ್ಗೆ, ಆನೆಕೆರೆ, ಚೋಳನ ಕೆರೆಗೆ ಸಂಬಂಧಿಸಿದಂತೆ ಅದರ ಅಭಿವೃದ್ಧಿ ಪೂರಕವಾದ ಯೋಜನೆ ಕೈಗೊಳ್ಳಲು ವಿಷಯಗಳ ಬಗ್ಗೆ ಸಭೆಯಲ್ಲಿ ವಿಷಯ ಪ್ರಸ್ತಾವನೆ ಮಾಡಿದರು.
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ, ಗ್ರಾಮ ಪಂಚಾಯತಿ ವ್ಯಾಪ್ತಿಯ ಉಪ ರಸ್ತೆಗಳ ಕಾಮಗಾರಿಯನ್ನು ಸಂಪೂರ್ಣವಾಗಿ ಪೂರ್ಣಗೊಳಿಸಲು ನಿರ್ಲಕ್ಷ ತಡಲಾಗಿದೆ ಎಂದು ಗ್ರಾಮಸ್ಥರಾದ ಮಂಜುನಾಥ್, ಪ್ರವೀಣ್ , ದಿನೇಶ್ ಸೇರಿದಂತೆ ಅನೇಕ ಗ್ರಾಮಸ್ಥರು ಚರ್ಚೆ ನಡೆಸಿದರು.ಕಂದಾಯ ಇಲಾಖೆಗೆ ಸೇರಿದ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಸ್ಥಳ ತೆರವುಗೊಳಿಸಲು ಕ್ರಮ ವಹಿಸುವಂತೆ ಗ್ರಾಮಸ್ಥರು ಆಗ್ರಹಿಸಿದರು.
ಅಧ್ಯಕ್ಷತೆ ವಹಿಸಿದ ಅಧ್ಯಕ್ಷ ಭಾಸ್ಕರ್ ನಾಯಕ್ ಮಾತನಾಡಿ, ಸಭೆಯಲ್ಲಿ ಚರ್ಚೆಗೊಂಡ ವಿಷಯಗಳನ್ನು ಕ್ರಮಬದ್ಧವಾದ ನೊಂದಣಿ ಪುಸ್ತಕದಲ್ಲಿ ನಿರ್ಣಯ ಮಾಡಲಾಗಿದೆ. ಅದರಂತೆ ಮುಂದಿನ ದಿನಗಳಲ್ಲಿ ಸಂಬಂಧಿಸಿದ ಇಲಾಖೆಯವರಿಗೆ ಪತ್ರ ವ್ಯವಹಾರ ಮಾಡುವ ಮೂಲಕ ಅನುಷ್ಠಾನಗೊಳಿಸಲು ಪ್ರಯತ್ನಿಸುವುದಾಗಿ ಭರವಸೆ ವ್ಯಕ್ತಪಡಿಸಿದರು.ನೂತನ ಗ್ರಾಮ ಪಂಚಾಯತಿ ಕಟ್ಟಡದ ಜಾಗದ ವಿಷಯದ ಬಗ್ಗೆ ಸಂಬಂಧಿಸಿದ ಸಚಿವರೊಂದಿಗೆ ಪತ್ರ ವ್ಯವಹಾರ ಮಾಡಿ ಮುಂದಿನ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ನೋಡಲ್ ಅಧಿಕಾರಿಯಾಗಿ ಕೂಡಿಗೆ ಕೋಳಿ ಸಾಕಾಣಿಕೆ ಕೇಂದ್ರದ ಪಶುವೈದ್ಯಾಧಿಕಾರಿ ಕೆ.ನಾಗರಾಜು ಪಾಲ್ಗೊಂಡಿದ್ದರು.ಉಪಾಧ್ಯಕ್ಷೆ ಶಶಿಕಲಾ, ಸರ್ವ ಸದಸ್ಯರು, ಅಭಿವೃದ್ಧಿ ಅಧಿಕಾರಿ ಎಂ.ಆರ್. ಸಂತೋಷ್ ಸೇರಿದಂತೆ ಗ್ರಾಮಸ್ಥರು ಇದ್ದರು.