ರಾಜ್ಯದಲ್ಲಿ ಭಾರಿ ಮಳೆಯಿಂದ 61,700 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ : ಸಚಿವ ಕೃಷ್ಣ ಭೈರೆಗೌಡ

KannadaprabhaNewsNetwork |  
Published : Aug 06, 2024, 12:34 AM ISTUpdated : Aug 06, 2024, 01:03 PM IST
ಅತಿಯಾದ ಮಳೆಗೆ ಹಾನಿಯಾಗಿರುವ ಅತ್ತಿಗುಂಡಿ ಪ್ರದೇಶಕ್ಕೆ ರಾಜ್ಯ ಕಂದಾಯ ಸಚಿವ ಕೃಷ್ಣ ಭೈರೆಗೌಡ ಅವರು ಸೋಮವಾರ ಭೇಟಿ ನೀಡಿ ವೀಕ್ಷಿಸಿದರು. ಶಾಸಕ ಎಚ್‌.ಡಿ. ತಮ್ಮಯ್ಯ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್‌ ಕುಮಾರ್‌ ಕಟಾರಿಯಾ, ಬಿ.ಎಚ್‌. ಹರೀಶ್, ಎಸ್ಪಿ ಡಾ. ವಿಕ್ರಂ ಅಮಟೆ ಇದ್ದರು. | Kannada Prabha

ಸಾರಾಂಶ

ಚಿಕ್ಕಮಗಳೂರು, ರಾಜ್ಯದಲ್ಲಿ ಭಾರಿ ಮಳೆಯಿಂದಾಗಿ 61,700 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೆಗೌಡ ಹೇಳಿದರು.

 ಚಿಕ್ಕಮಗಳೂರು :  ರಾಜ್ಯದಲ್ಲಿ ಭಾರಿ ಮಳೆಯಿಂದಾಗಿ 61,700 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೆಗೌಡ ಹೇಳಿದರು.ಬಾಬಾಬುಡನ್ ಗಿರಿಯ ರಸ್ತೆಯಲ್ಲಿರುವ ಕವಿಕಲ್‌ಗಂಡಿಯಲ್ಲಿ ಭಾರಿ ಮಳೆಯಿಂದ ರಸ್ತೆ ಕುಸಿತವಾಗಿರುವ ಹಿನ್ನಲೆಯಲ್ಲಿ ಸೋಮವಾರ ವೀಕ್ಷಣೆ ಮಾಡಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. 

ಇದುವರೆಗೆ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಅಲ್ಲಲ್ಲಿ ಬೆಳೆ ಹಾನಿಯಾಗಿರುವ ವರದಿ ಬಂದಿದ್ದು, ಮಲೆನಾಡು ಪ್ರದೇಶದಲ್ಲಿ ಬೆಳೆ ಹಾನಿ ಜೊತೆಗೆ ಗುಡ್ಡ ಕುಸಿತ ಉಂಟಾಗಿದೆ. ಹಾನಿಗೆ ಸಂಬಂಧಿಸಿದಂತೆ ತಕ್ಷಣ ಪರಿಹಾರ ನೀಡಲು ಈಗಾಗಲೇ ಸೂಚನೆ ನೀಡಲಾಗಿದೆ. ಇನ್ನೂ ಬೆಳೆ ಹಾನಿ ಸಮೀಕ್ಷೆ ನಡೆಯುತ್ತಿದ್ದು, ಹಾನಿ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಿದ ಅವರು, 2019 ಹಾಗೂ 2022 ನೇ ಸಾಲಿನಲ್ಲಿ 12 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಆ ಸಂದರ್ಭದಲ್ಲಿ 250 ಜನರ ಪ್ರಾಣ ಹಾನಿಯಾಗಿತ್ತು. ಈ ವರ್ಷ 58 ಜನ ಇಲ್ಲಿಯವರೆಗೆ ಪ್ರವಾಹದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದರೆ ದೊಡ್ಡ ಪ್ರವಾಹ ಕಂಡು ಬಂದಿಲ್ಲ. ಕೆಲವು ಸೀಮಿತ ಪ್ರದೇಶಗಳಲ್ಲಿ ಹಾನಿಯಾಗಿದೆ ಎಂದರು.

ಅಧಿವೇಶನ ಮುಗಿದ ತಕ್ಷಣ ಮುಖ್ಯಮಂತ್ರಿಗಳು, ನಾನು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪ್ರವಾಹದಿಂದ ಉಂಟಾಗಿರುವ ಹಾನಿ ವೀಕ್ಷಿಸಿ ಜನರಿಗೆ ಆಗಿರುವ ಸಮಸ್ಯೆಗೆ ನೆರವು ನೀಡುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು. ಮಲೆನಾಡು ಬಹುಕಾಲದಿಂದ ಹೆಚ್ಚು ಮಳೆ ಕಂಡಿರುವ ಪ್ರದೇಶವಾಗಿದೆ. ಇಲ್ಲಿ ಸ್ವಾಭಾವಿಕವಾಗಿ ಮಳೆ ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. ಹವಾಮಾನ ಬದಲಾವಣೆಯಿಂದ ಜೂನ್ ನಿಂದ ಜುಲೈ 10 ರವರೆಗೆ ಮಳೆ ಕೊರತೆಯಾಗಿತ್ತು. ಜುಲೈ10ರ ನಂತರ ಎರಡು ತಿಂಗಳಿಗಾಗುವಷ್ಟು ಮಳೆ 20 ದಿನದಲ್ಲಿ ಸುರಿದಿದೆ. 

ಹವಾಮಾನ ಬದಲಾವಣೆಯಾಗುತ್ತಿರುವ ಹಿನ್ನಲೆಯಲ್ಲಿ ಪ್ರಕೃತಿ ವಿಕೋಪಗಳು ಹೆಚ್ಚಾಗುತ್ತಿವೆ. ಪರಿಸರದ ವಿಷಯದಲ್ಲಿ ಪ್ರತಿಯೊಬ್ಬರು ಜಾಗೃತರಾಗಬೇಕು. ಇಷ್ಟ ಬಂದ ಹಾಗೇ ಗುಡ್ಡ ಕಡಿದು ರಸ್ತೆ ನಿರ್ಮಾಣ ಮಾಡುವುದರಿಂದ ಗುಡ್ಡ ಕುಸಿತದಂತಹ ಅವಘಡಗಳನ್ನು ಕಾಣುತ್ತಿದ್ದೇವೆ ಎಂದು ತಿಳಿಸಿದರು.ಗುಡ್ಡ ಕುಸಿತದಂತಹ ಸಮಸ್ಯೆ ತಡೆಗಟ್ಟುವ ಸಲುವಾಗಿ ಕೇಂದ್ರ ಸರ್ಕಾರದ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ದಿಂದ ರಾಜ್ಯದಲ್ಲಿ ಎಲ್ಲೆಲ್ಲಿ ಗುಡ್ಡ ಕುಸಿತ ಸಾಧ್ಯತೆ ಹೆಚ್ಚು ಇದೆ. 

ಅಂತಹ ಕಡೆ ಈಗಾಗಲೇ ವೈಜ್ಞಾನಿಕ ಸರ್ವೆ ಮಾಡಿಸಿದ್ದು, ಅದರ ವರದಿ ಆಧಾರದ ಮೇಲೆ ಮಲೆನಾಡು ಭಾಗದ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಕಳುಹಿಸಿದೆ. ಆ ಜಿಲ್ಲೆಗಳ ಜಿಲ್ಲಾಧಿಕಾರಿ ಗಳು ಯಾವ ಜನವಸತಿ ಪ್ರದೇಶಗಳಲ್ಲಿ ಗುಡ್ಡ ಕುಸಿತದಿಂದ ತೊಂದರೆಯಾಗುವುದನ್ನು ಗುರುತಿಸಿ ವರದಿ ಕೊಡಲು ತಿಳಿಸಿದ್ದು, ಇನ್ನೂ 10- 15 ದಿನಗಳಲ್ಲಿ ವರದಿ ತರಿಸಿಕೊಂಡು ಈ ವರ್ಷ 100 ಕೋಟಿ, ಮುಂದಿನ ವರ್ಷ 200 ಕೋಟಿ ಸೇರಿದಂತೆ ಒಟ್ಟು 300 ಕೋಟಿ ರು. ಗುಡ್ಡ ಕುಸಿತ ತಡೆಗಟ್ಟುವ ಕಾಮಗಾರಿ ಕೈಗೊಳ್ಳಲು ಅನುದಾನ ಬಿಡುಗಡೆಗೆ ಮುಖ್ಯಮಂತ್ರಿಗಳು ಒಪ್ಪಿದ್ದಾರೆ ಎಂದ ಅವರು, ಈ ಅನುದಾನದಲ್ಲಿ ಮಲೆನಾಡು ಜಿಲ್ಲೆಗಳಲ್ಲಿ ಹಾಗೂ ಅಕ್ಕಪಕ್ಕದ ಕರಾವಳಿ ಜಿಲ್ಲೆಗಳ ಗುಡ್ಡ ಕುಸಿತ ತಡೆಗಟ್ಟುವ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಹೇಳಿದರು. 

ಅತಿವೃಷ್ಟಿಯಿಂದ ಹಾನಿಯಾಗಿರುವ ರಸ್ತೆಗಳ ದುರಸ್ತಿ ಕಾಮಗಾರಿಯನ್ನು ಶೀಘ್ರವಾಗಿ ಕೈಗೊಳ್ಳಲು ತಿಳಿಸಲಾಗಿದೆ. ಗುಡ್ಡ ಕುಸಿತದಿಂದ ಹಾನಿಯಾಗಿರುವ ರಸ್ತೆಗಳ ದುರಸ್ತಿ ಸಾಧ್ಯವಿಲ್ಲ. ಅವುಗಳ ಮರು ನಿರ್ಮಾಣವಾಗಬೇಕಾಗಿದೆ. ರಸ್ತೆಗಳ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಶಾಸಕ ಎಚ್.ಡಿ. ತಮ್ಮಯ್ಯ, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮದ ಅಧ್ಯಕ್ಷ ಬಿ.ಎಚ್. ಹರೀಶ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯಾಜ್, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಂ ಅಮಟೆ, ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಚ್.ಎಸ್. ಕೀರ್ತನಾ, ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ, ಉಪ ವಿಭಾಗಾಧಿಕಾರಿ ದಲ್ಜಿತ್ ಕುಮಾರ್ ಹಾಜರಿದ್ದರು.

-- ಅನಧಿಕೃತ ರೆಸಾರ್ಟ್‌ಗಳ ತೆರವಿಗೆ ಒತ್ತಾಯ 

ಚಿಕ್ಕಮಗಳೂರು: ಜಿಲ್ಲೆಯಲ್ಲಿನ ಅನಧಿಕೃತ ಹೋಂ ಸ್ಟೇ ಹಾಗೂ ರೆಸಾರ್ಟ್ ಗಳನ್ನು ತೆರವುಗೊಳಿಸಬೇಕೆಂದು ಆಮ್ ಅದ್ಮಿ ಪಕ್ಷ ಜಿಲ್ಲಾಡಳಿತವನ್ನು ಆಗ್ರಹಿಸಿದೆ.ಜಿಲ್ಲೆಯ ಗುಡ್ಡಗಾಡು ಪ್ರದೇಶಗಳಲ್ಲಿ ಇತ್ತೀಚೆಗೆ ಹೋಂ ಸ್ಟೇ ಹಾಗೂ ರೆಸಾರ್ಟ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಾಣ ಗೊಂಡಿದ್ದು ಅವುಗಳಲ್ಲಿ ಬಹುತೇಕ ಕಟ್ಟಡಗಳು ಅನಧಿಕೃತವಾಗಿವೆ. ಅವುಗಳನ್ನು ತೆರವುಗೊಳಿಸಬೇಕೆಂದು ಆಮ್ ಆದ್ಮಿ ಪಕ್ಷದ ಕಾಫಿ ಬೆಳೆ ಘಟಕ ರಾಜ್ಯಾಧ್ಯಕ್ಷ ಹೇಮಂತ್ ಕುಮಾರ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.ಅಕ್ರಮ ಕಟ್ಟಡದಿಂದ ಮಣ್ಣು ಕುಸಿಯುವ ಸಾಧ್ಯತೆ ಹೆಚ್ಚಿರುತ್ತದೆ ಇದರಿಂದ ಮುಂದಿನ ದಿನಗಳಲ್ಲಿ ಅನಾಹುತ ಆಗುವ ಸಾಧ್ಯತೆ ಇದೆ. ಜಿಲ್ಲಾಡಳಿತ ಈಗಲೇ ಎಚ್ಚೆತ್ತುಕೊಂಡು ಅವುಗಳಿಗೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿದರು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ರಸ್ತೆಗಳು ಕಿರಿದಾಗಿದ್ದು ಮರಗಳ ಕಡಿತಲೆಗೆ ಅನುಮತಿ ಕೊಟ್ಟರೆ ಮರಗಳ ಸಾಗಾಣಿಕೆಯಿಂದ ರಸ್ತೆಗಳು ಹಾಳಾಗಲಿವೆ. ಇದರಿಂದ ಸಾರ್ವಜನಿಕರಿಗೆ ಓಡಾಟಕ್ಕೆ ತುಂಬಾ ತೊಂದರೆಯಾಗುತ್ತದೆ. ಆದ್ದರಿಂದ ಅರಣ್ಯ ಇಲಾಖೆಯವರು ಮಳೆಗಾಲ ಮುಗಿಯುವರೆಗೆ ಮರ ಕಡಿತಲೆಗಳಿಗೆ ಅನುಮತಿ ನೀಡಬಾರದು ಎಂದು ಒತ್ತಾಯಿಸಿದರು.

ಇತ್ತೀಚಿಗೆ ಸುರಿದ ಭಾರಿ ಮಳೆಯಿಂದ ಕಾಫಿ ಮತ್ತು ಮೆಣಸು ಬೆಳೆಗಳಿಗೆ ಹಾನಿಯಾಗಿದ್ದು ಶೇ. 50 ರಷ್ಟು ಬೆಳೆಯನ್ನು ಬೆಳೆ ಗಾರರು ಕಳೆದುಕೊಂಡಿದ್ದಾರೆ, ಆದ್ದರಿಂದ ಜಂಟಿ ಸರ್ವೆ ನಡೆಸಿ ಸೂಕ್ತ ಪರಿಹಾರ ಕೊಡಬೇಕೆಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಆಮ್ ಆದ್ಮಿ ಪಾರ್ಟಿ ಮುಖಂಡರಾದ ಸೈಯದ್ ಜಮಿಲ್ ಅಹಮದ್, ರಂಗನಾಥ್, ಆಂತೋನಿ, ಪ್ರಭು ಉಪಸ್ಥಿತರಿದ್ದರು. 5 ಕೆಸಿಕೆಎಂ 5ಅತಿಯಾದ ಮಳೆಗೆ ಹಾನಿಯಾಗಿರುವ ಅತ್ತಿಗುಂಡಿ ಪ್ರದೇಶಕ್ಕೆ ರಾಜ್ಯ ಕಂದಾಯ ಸಚಿವ ಕೃಷ್ಣ ಭೈರೆಗೌಡ ಅವರು ಸೋಮವಾರ ಭೇಟಿ ನೀಡಿ ವೀಕ್ಷಿಸಿದರು. ಶಾಸಕ ಎಚ್‌.ಡಿ. ತಮ್ಮಯ್ಯ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್‌ ಕುಮಾರ್‌ ಕಟಾರಿಯಾ, ಬಿ.ಎಚ್‌. ಹರೀಶ್, ಎಸ್ಪಿ ಡಾ. ವಿಕ್ರಂ ಅಮಟೆ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ