ಪ್ರತಿ ತಿಂಗಳು 25ನೇ ತಾರೀಕಿನೊಳಗಾಗಿ ನಿರುದ್ಯೋಗಿ ಹಾಗೂ ವ್ಯಾಸಂಗ ಮುದುವರಿಸುತ್ತಿಲ್ಲ ಮತ್ತು ಸ್ವಯಂ ಉದ್ಯೋಗಿ ಅಲ್ಲ ಎಂದು ಸ್ವಯಂ ಘೊಷಣೆ ಮಾಡುವ ಕುರಿತು ಅರ್ಜಿದಾರರಿಗೆ ತಿಳಿಸಬೇಕು ಎಂದು ಡಿಸಿ ಹೇಳಿದರು
ಗದಗ: ಪದವಿ ಮತ್ತು ಡಿಪ್ಲೋಮಾದಲ್ಲಿ 2022-23 ನೇ ಸಾಲಿನಲ್ಲಿ ಉರ್ತ್ತೀಣರಾದ ಅರ್ಹ ಫಲಾನುಭವಿಗಳಿಗೆ ಯುವನಿಧಿ ತಲುಪಬೇಕು ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಹೇಳಿದರು.
ಸೋಮವಾರ ಜಿಲ್ಲಾಡಳಿತ ಭವನದ ಕೋರ್ಟ್ ಹಾಲ್‌ನಲ್ಲಿ ಜಿಲ್ಲಾ ಕೌಶಲ್ಯ ಮಿಷನ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯುವನಿಧಿ ಯೋಜನೆಯಡಿ ಸಲ್ಲಿಕೆಯಾದ ಅರ್ಜಿಗಳನ್ನು ಪರಿಶೀಲಿಸಿ ಅನುಮೋದನೆ ನೀಡಿ ಅರ್ಹ ಫಲಾನುಭವಿಗಳಿಗೆ ಯೋಜನೆ ತಲುಪಬೇಕು.
ಸಭೆಯಲ್ಲಿ ಯುವನಿಧಿ ಅರ್ಜಿದಾರರ ವರದಿ ಗಮನಿಸಿದ ಅವರು ಅರ್ಜಿ ಸಲ್ಲಿಕೆಯಾದ ನಂತರ ಮೂಲಭೂತ ದಾಖಲಾತಿಯನ್ನು ಸಂಬಂಧಿಸಿದ ಅಧಿಕಾರಿಗಳ ಹಂತದಲ್ಲಿ ಪರೀಶಿಲನೆ ಮಾಡುವುದರ ಬಗ್ಗೆ ಅರ್ಜಿದಾರರಿಗೆ ಜಾಗೃತಿ ಮೂಡಿಸಿ ಆದಷ್ಟು ಬೇಗನೆ ವಿವಿಧ ಅಧಿಕಾರಿಗಳ ಲಾಗಿನ್‌ನಲ್ಲಿರುವ ಅರ್ಜಿಗಳನ್ನು ಅನುಮೋದನೆ ಮಾಡಬೇಕು.
ಈಗಾಗಲೇ ಯುವನಿಧಿ ಪಡೆಯುತ್ತಿರುವವರು ಪ್ರತಿ ತಿಂಗಳು 25ನೇ ತಾರೀಕಿನೊಳಗಾಗಿ ತಾನೂ ನಿರುದ್ಯೋಗಿ ಹಾಗೂ ವ್ಯಾಸಂಗ ಮುದುವರಿಸುತ್ತಿಲ್ಲ ಮತ್ತು ಸ್ವಯಂ ಉದ್ಯೋಗಿ ಅಲ್ಲ ಎಂದು ಸ್ವಯಂ ಘೊಷಣೆ ಮಾಡುವ ಕುರಿತು ಅರ್ಜಿದಾರರಿಗೆ ತಿಳಿಸಬೇಕು ಎಂದರು.
ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಮಲ್ಲೂರ ಬಸವರಾಜ ಮಾತನಾಡಿ, ಜಿಲ್ಲೆಯಲ್ಲಿ ಪ್ರಸ್ತುತ ಉತ್ತಮ ಗುಣಮಟ್ಟ ಹೊಂದಿರುವ ತರಬೇತಿ ಸಂಸ್ಥೆಯ ವರದಿ ನೀಡಿದರು. ಕೈಗಾರಿಕಾ ಕ್ಷೇತ್ರಗಳಿಗೆ ಉದ್ಯೋಗ ಬೇಡಿಕೆಯ ಅನುಸಾರ ಐ.ಟಿ. ವಲಯ, ಆಟೋಮೋಟಿವ್, ಏರೋಸ್ಪೇಸ್ ಮುಂತಾದ ವಲಯಗಳಲ್ಲಿ ಅವಶ್ಯವಿರುವ ಹೊಸ ಜಾಬ್ ಕುರಿತು ಮಾಹಿತಿ ನೀಡಿದರು.
ಯುವನಿಧಿ ಯೋಜನೆಯಡಿ ನೋಂದಾಯಿಸಿಕೊಂಡಿರುವ ಯುವಕ-ಯುವತಿಯರಿಗೆ ಕೌಶಲ್ಯ ತರಬೇತಿ ಮತ್ತು ಸಂಕಲ್ಪ ಕಾರ್ಯಕ್ರಮದಡಿ ವಾರ್ಷಿಕ ಕ್ರಿಯಾ ಯೋಜನೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿರುವ ಕೌಶಲ್ಯ ತರಬೇತಿಗಳನ್ನು ಪ್ರಾರಂಭಿಸಿರುವ ಕುರಿತು ಸಭೆಗೆ ವರದಿ ಸಲ್ಲಿಸಿದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ., ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಬಸವರಾಜ ಕೊಟೂರ, ಜಿಲ್ಲಾ ಉದ್ಯೋಗಾಧಿಕಾರಿ ಬಸವಂತ ಪಿ.ಎನ್., ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ರವಿ ಗುಂಜಿಕರ, ಕೌಶಲ್ಯಾಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕಿ ಉಮಾ ಪಾಳೆಗಾರ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಧಿಕಾರಿ ಅಮಿತ್ ಬಿದರಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.