ಸಂಸ್ಕಾರದೊಂದಿಗೆ ಕಲಿತ ಶಿಕ್ಷಣಕ್ಕೆ ಅರ್ಥವುಂಟು: ಶ್ರೀ ಶಂಭುನಾಥ ಮಹಾಸ್ವಾಮೀಜಿ

KannadaprabhaNewsNetwork |  
Published : Aug 06, 2024, 12:34 AM IST
5ಎಚ್ಎಸ್ಎನ್6 :  | Kannada Prabha

ಸಾರಾಂಶ

ಕೇವಲ ಬಿಜಿಎಸ್ ನಲ್ಲಿ ವಿಜ್ಞಾನ ಕಲಿತಿರುವ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೇ ತಾಲೂಕಿನ ಎಲ್ಲಾ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ ಸ್ಪರ್ಧಾತ್ಮಕ ಪಠ್ಯದ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಆಯೋಜಿಸಲಾಗುತ್ತದೆ. ನಮ್ಮ ವಿದ್ಯಾಸಂಸ್ಥೆಯಲ್ಲಿ ಜಾತಿ, ಧರ್ಮಕ್ಕೆ ಸೀಮಿತವಾಗದೆ ಸರ್ವಜನರಿಗೂ ಒಂದೇ ಶಿಕ್ಷಣ ನೀಡಲಾಗುತ್ತದೆ.

ಕನ್ನಡಪ್ರಭ ವಾರ್ತೆ ಬೇಲೂರು

ಮಕ್ಕಳು ಉತ್ತಮ ಶಿಕ್ಷಣದ ಜೊತೆಗೆ ಸಂಸ್ಕಾರವನ್ನೂ ಕಲಿಯಬೇಕು. ಆಗ ಮಾತ್ರ ತಾವು ಕಲಿತ ಶಿಕ್ಷಣಕ್ಕೆ ಅರ್ಥ ಬರುತ್ತದೆ ಎಂದು ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಶಂಭುನಾಥ ಮಹಾಸ್ವಾಮೀಜಿ ಹೇಳಿದರು.

ಬಿಜಿಎಸ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜು ವತಿಯಿಂದ ಪಟ್ಟಣದ ಆರ್ ವಿ ಕನ್ವೆನ್ಷನ್ ಹಾಲ್ ನಲ್ಲಿ ನಡೆದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತೋತ್ಸವ, ಪ್ರತಿಭಾ ಪುರಸ್ಕಾರ ಹಾಗೂ ಸಿಇಟಿ, ನೀಟ್, ಜೆಇಇ ತರಗತಿಗಳ ಉದ್ಘಾಟನಾ ಸಮಾರಂಭದಲ್ಲಿ ಆರ್ಶಿರ್ವಚನ ನೀಡಿ ಮಾತನಾಡಿದ ಅವರು, ನಾವು ಕಲಿತ ವಿದ್ಯೆ ನಿಂತ ನೀರಾಗದೇ ಅದು ಹರಿಯುವಂತಾಗಬೇಕು. ಸಂಸ್ಕಾರಯುತ ಶಿಕ್ಷಣದಿಂದ ಬದುಕಿನಲ್ಲಿ ಬದಲಾವಣೆ ಆಗಬೇಕೇ ಹೊರತು ಅದು ಜೀವನವನ್ನು ಬಾಧಿಸುವಂತಾಗಬಾರದು. ಇತ್ತೀಚಿನ ದಿನಗಳಲ್ಲಿ ಶಿಕ್ಷಣದ ಮೌಲ್ಯ ಕುಂಠಿತವಾಗುತ್ತಿದೆ. ವಿದ್ಯಾವಂತರನ್ನಾಗಿ ಮಾಡಲು ಕೂಲಿ ಮಾಡಿ ಅವರನ್ನು ಸುಸಂಸ್ಕೃತರನ್ನಾಗಿ ಮಾಡಿದ ತನ್ನ ತಂದೆ- ತಾಯಿಯನ್ನು ದೂರ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ನಾವು ಕಲಿಯುವ ಅವಧಿಯಲ್ಲಿ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳದೇ ಅಲೆಯಲು ಬಿಟ್ಟರೆ ಮುಂದೆ ಅವರ ಜೀವನ ಪೂರ್ತಿ ಬೀದಿ ಅಲೆಯುವಂತಾಗಬೇಕಾಗುತ್ತದೆ. ಅವನು ಸಾಧನೆ ಮಾಡಿದ್ದಾನೆ ಎಂದು ಅವನ ಮೇಲೆ ಟೀಕಿಸುತ್ತಾ ಕಾಲಹರಣ ಮಾಡಿದರೆ ಮುಂದೆ ನಿಮ್ಮ ಜೀವನವಿಡೀ ಮತ್ತೊಬ್ಬರಿಂದ ಟೀಕೆ ಟಿಪ್ಪಣಿ ಎದುರಿಸಬೇಕಾಗುತ್ತದೆ ಎಂದರು.

ಈಗಾಗಲೇ ನಮ್ಮ ವಿದ್ಯಾಸಂಸ್ಥೆಯಿಂದ ತಾಲೂಕಿನಲ್ಲಿ ಗ್ರಾಮೀಣ ಮಕ್ಕಳಿಗೆ ಅನುಕೂಲವಾಗುವಂತೆ ಸಿಬಿಎಸ್ ಶಿಕ್ಷಣ ಸಂಸ್ಥೆ ತೆರೆಯಲು ಪೂರ್ವ ಸಿದ್ಧತೆ ಮಾಡಿಕೊಂಡಿದ್ದು, ಅತಿ ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರಲಿದೆ ಎಂದು ಹೇಳಿದರು.

ಕೇವಲ ಬಿಜಿಎಸ್ ನಲ್ಲಿ ವಿಜ್ಞಾನ ಕಲಿತಿರುವ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೇ ತಾಲೂಕಿನ ಎಲ್ಲಾ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ ಸ್ಪರ್ಧಾತ್ಮಕ ಪಠ್ಯದ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಆಯೋಜಿಸಲಾಗುತ್ತದೆ. ನಮ್ಮ ವಿದ್ಯಾಸಂಸ್ಥೆಯಲ್ಲಿ ಜಾತಿ, ಧರ್ಮಕ್ಕೆ ಸೀಮಿತವಾಗದೆ ಸರ್ವಜನರಿಗೂ ಒಂದೇ ಶಿಕ್ಷಣ ನೀಡಲಾಗುತ್ತದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಹಸೀಲ್ದಾರ್ ಎಂ. ಮಮತಾ, ಕೇವಲ ಶಿಕ್ಷಣ ಕಲಿತು ವಿದ್ಯಾವಂತರಾದರೆ ಸಾಲದು, ಸಂಸ್ಕಾರಯುತ ಶಿಕ್ಷಣ ಎಲ್ಲಿ ದೊರೆಯುತ್ತದೋ ಅಲ್ಲಿ ಮೌಲ್ಯಯುತ ಬದುಕು ಸಾಧ್ಯ. ಕೇವಲ ಬದುಕನ್ನು ಕಟ್ಟಿಕೊಳ್ಳಲು ವಿದ್ಯಾವಂತರಾಗಬೇಡಿ. ಏನನ್ನಾದರೂ ಸಾಧಿಸುವ ಛಲದೊಂದಿಗೆ ಮುನ್ನುಗ್ಗಬೇಕು ಎಂದು ಸಲಹೆ ನೀಡಿದರು.

ಇತ್ತೀಚಿನ ದಿನಗಳಲ್ಲಿ ಪೋಷಕರಾದ ನಾವು ನಮ್ಮ ಮಗ- ಮಗಳು ಶೇಕಡಾ ೧೦೦ ಫಲಿತಾಂಶ ತೆಗೆಯಬೇಕು ಎಂದು ಅಂಕದ ಹಿಂದೆ ಹೋಗುತ್ತಿದ್ದಾರೆ. ಜೀವನದಲ್ಲಿ ನಾವು ಯಾವ ರೀತಿ ಸಾಧನೆ ಮಾಡಬೇಕು ಎಂಬ ಧನಾತ್ಮಕ ಚಿಂತನೆ ಇಲ್ಲವಾಗಿದೆ. ವಿದ್ಯಾರ್ಥಿಗಳು ಸ್ವಾವಲಂಬಿಗಳಾಗಿ ಬದುಕಲು ವಿದ್ಯೆ ಜೊತೆಗೆ ಇತರರಿಗೆ ಉಪಯೋಗವಾಗುವ ಕೆಲಸ ಮಾಡಬೇಕು ಎಂದು ಹೇಳಿದರು.

ಮೈಸೂರು ಮಹಾರಾಣಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಹೇಮಚಂದ್ರ ಮಾತನಾಡಿ, ಕೇವಲ ನಮ್ಮ ಮಕ್ಕಳು ಡಾಕ್ಟರ್- ಇಂಜಿನಿಯರ್ ಆಗಬೇಕೆಂದು ಪೋಷಕರು ಕನಸು ಕಾಣುತ್ತಾರೆ. ಏಕೆ‌ ನಿಮ್ಮ ಮಕ್ಕಳು ಪ್ರಾಧ್ಯಾಪಕರಾಗಬಾರದು? ಇದರ ಜೊತೆ ನಿಮ್ಮ ಕನಸು ಐಎಎಸ್, ಐಪಿಎಸ್ ಎಂಬ ಬಹುದೊಡ್ಡ ಕನಸನ್ನು ಹೊತ್ತು ಮುನ್ನುಗ್ಗಿದಾಗ ಯಶಸ್ಸು ಗಳಿಸಲು ಸಾಧ್ಯ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಬದಲು ಕೇವಲ ಡಿಗ್ರಿಗಳಿಗೆ ಮಾತ್ರ ಸೀಮಿತವಾಗದೇ ಬಹುದೊಡ್ಡ ಕನಸನ್ನು ಹೊಂದಿ ಮುನ್ನಡೆಯಬೇಕು ಎಂದರು.

೨೦೨೩-೨೪ ನೇ ಸಾಲಿನಲ್ಲಿ ಉತ್ತಮವಾಗಿ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಡಿಸಿಸಿ ಬ್ಯಾಂಕ್ ನ ನಿರ್ದೇಶಕ ಎಂ. ಎ. ನಾಗರಾಜ್, ಬಿಜಿಎಸ್ ಪ್ರಾಂಶುಪಾಲರಾದ ದಿವ್ಯ ಕುಮಾರ್ ಹಾಗೂ ಉಪನ್ಯಾಸಕರು, ಆಡಳಿತ ಮಂಡಳಿಯವರು ಹಾಜರಿದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ