- ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಸಂಗೇನಹಳ್ಳಿ, ಹಿರೇಮಲ್ಲನಹೊಳೆಯಲ್ಲಿ ಮಳೆಹಾನಿ ವೀಕ್ಷಿಸಿದ ಕಂದಾಯ ಸಚಿವ
- ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಮಾರ್ಗಸೂಚಿಯಂತೆ 3 ದಿನದಲ್ಲಿ ಜಂಟಿ ಸಮೀಕ್ಷೆ, 15 ದಿನದಲ್ಲೇ ಬೆಳೆ ಪರಿಹಾರ - - - ಕನ್ನಡಪ್ರಭ ವಾರ್ತೆ ದಾವಣಗೆರೆಹಿಂಗಾರು ಹಂಗಾಮಿನ ಅಕ್ಟೋಬರ್‌ನಲ್ಲೇ ಶೇ.66 ಸುರಿದ ಅತಿವೃಷ್ಟಿಯಿಂದಾಗಿ ರಾಜ್ಯದಲ್ಲಿ ಈವರೆಗೆ 56993 ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಬೆಳೆ ಹಾನಿಯಾದ ಬಗ್ಗೆ ವರದಿ ಇದೆ. ಇನ್ನು 3 ದಿನದಲ್ಲೇ ಕಂದಾಯ, ಕೃಷಿ ಮತ್ತು ತೋಟಗಾರಿಕೆ ಮೂರೂ ಇಲಾಖೆಗಳಿಂದ ಜಂಟಿ ಸಮೀಕ್ಷೆ ಮಾಡಿ, 15 ದಿನದೊಳಗೆ ಡಿಬಿಟಿ ಮೂಲಕ ರೈತರಿಗೆ ಪರಿಹಾರ ನೀಡುವುದಾಗಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದರು.
ಜಗಳೂರು ತಾಲೂಕಿನ ಸಂಗೇನಹಳ್ಳಿಯಲ್ಲಿ ಶುಕ್ರವಾರ ಕೆರೆಕೋಡಿ ವೀಕ್ಷಣೆ, ಹಿರೇಮಲ್ಲನಹೊಳೆ ಗ್ರಾಮದಲ್ಲಿ ಮನೆ ಹಾನಿ, ಬೆಳೆ ಹಾನಿ ವೀಕ್ಷಣೆ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಮಾರ್ಗಸೂಚಿಯಂತೆ 15 ದಿನಗಳೊಳಗೆ ಬೆಳೆ ಹಾನಿ ನೀಡಬೇಕು ಎಂದರು.ಅಕ್ಟೋಬರ್‌ನಲ್ಲೇ ಅತಿ ಹೆಚ್ಚು ಮಳೆಯಾಗಿದ್ದು, ಪ್ರಾಥಮಿಕ ಅಂದಾಜು ಬೆಳೆ ನಷ್ಟಕ್ಕಿಂತಲೂ ಹೆಚ್ಚು ನಷ್ಟ ಆಗಿರುವ ನಿರೀಕ್ಷೆ ಇದೆ. ಮೂರು ದಿನದಲ್ಲೇ ಜಂಟಿ ಸಮೀಕ್ಷೆ ಮುಗಿಸಲಿದ್ದು, ಆಗ ಬೆಳೆ ನಷ್ಟದ ಬಗ್ಗೆ ನಿಖರ ಅಂಕಿ ಅಂಶ, ಮಾಹಿತಿ ಲಭ್ಯವಾಗಲಿದೆ. ಇದೇ ವಿಚಾರಕ್ಕೆ ಮುಖ್ಯಮಂತ್ರಿ ಜತೆ ಅತಿವೃಷ್ಟಿಯಾದ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಅ.26ರಂದು ವೀಡಿಯೋ ಕಾನ್ಫರೆನ್ಸ್ ಮಾಡಿ, ಮಳೆ ಹಾನಿ ಪರಿಶೀಲನೆ ನಡೆಸಿ, ಸೂಕ್ತ ಸಲಹೆ, ಸೂಚನೆ ನೀಡಲಾಗುವುದು ಎಂದು ಅವರು ಹೇಳಿದರು.
ರಾಜ್ಯದಲ್ಲಿ ಹಿಂಗಾರು ಹಂಗಾಮಿನಲ್ಲಿ 21 ಜನರ ಪ್ರಾಣಹಾನಿಯಾಗಿದೆ. ಇದರಲ್ಲಿ 9 ಜನ ಸಿಡಿಲು ಬಡಿದು ಸಾವನ್ನಪ್ಪಿದ್ದರೆ, 6 ಜನ ಮನೆ ಕುಸಿತದಿಂದ ಸಾವನ್ನಪ್ಪಿದ್ದಾರೆ. 3-4 ಜನ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಮುಂಗಾರು ಸೇರಿದಂತೆ ಈವರೆಗೆ 121 ಜನರು ರಾಜ್ಯದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಮುಂಗಾರು ಹಂಗಾಮಿನಲ್ಲಿ 2589 ಮತ್ತು ಹಿಂಗಾರಿನಲ್ಲಿ 121 ಮನೆಗಳು ಬಿದ್ದಿವೆ. ಸಂತ್ರಸ್ತರಿಗೆ ಪರಿಹಾರದ ಜೊತೆ ಮನೆಗಳ ನಿರ್ಮಿಸಿ ಕೊಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ಕಟ್ಟಿದ್ದ ಮನೆಗಳು ಬಿದ್ದುಹೋಗಿದ್ದರೆ ಎಸ್‌ಡಿಆರ್‌ಎಫ್‌ನಡಿ ₹1 ಲಕ್ಷ ಪರಿಹಾರ ನೀಡಲಾಗುವುದು. ಮುಂಗಾರು ಹಂಗಾಮಿನಲ್ಲಿ 1.18 ಲಕ್ಷ ಹೆಕ್ಟೇರ್ ಬೆಳೆ ನಷ್ಟವಾಗಿದೆ. ಈಗಾಗಲೇ ಪರಿಹಾರ ನೀಡಿದ್ದು, ಕೆಲವೇ ದಿನಗಳಲ್ಲಿ ಮುಂಗಾರು ಬೆಳೆ ನಷ್ಟ ಪರಿಹಾರ ಪಾವತಿಯೂ ಪೂರ್ಣಗೊಳ್ಳಲಿದೆ. ಹಿಂಗಾರು ಬೆಳೆ ನಷ್ಟದ ಸಮೀಕ್ಷೆ ಮುಗಿಸಿದ 15 ದಿನದಲ್ಲೇ ಬೆಳೆ ನಷ್ಟಕ್ಕೀಡಾದ ರೈತರ ಖಾತೆಗೆ ಪರಿಹಾರದ ಹಣ ಜಮಾ ಮಾಡುವುದಾಗಿ ಪುನರುಚ್ಛರಿಸಿದರು.
ಜೀವಹಾನಿ, ಬೆಳೆಹಾನಿ, ಮನೆಗಳು ಬಿದ್ದು ಹೋಗಿದ್ದರೆ ತಕ್ಷಣವೇ ಪರಿಹಾರ ನೀಡಲು ರಾಜ್ಯಾದ್ಯಂತ ಎಲ್ಲ ಜಿಲ್ಲಾಧಿಕಾರಿಗಳು, ತಹಸೀಲ್ದಾರರ ಖಾತೆಗಳಲ್ಲಿ ಒಟ್ಟು ₹666 ಕೋಟಿಯಷ್ಟು ಹಣ ಲಭ್ಯವಿದೆ. ಪ್ರಕೃತಿ ವಿಕೋಪ ಎದುರಿಸಲು ಯಾವುದೇ ಅನುದಾನದ ಕೊರತೆ ಇಲ್ಲ. ಕಷ್ಟದಲ್ಲಿ ಪರಿಹಾರ ನೀಡಿದಲ್ಲಿ ಸಂತ್ರಸ್ತರು, ರೈತರಿಗೆ ಉಪಯುಕ್ತವಾಗುತ್ತದೆ. ಈ ಹಿನ್ನೆಲೆ ತ್ವರಿತ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.ಜಗಳೂರು ಕ್ಷೇತ್ರ ಶಾಸಕ ಬಿ.ದೇವೇಂದ್ರಪ್ಪ, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ, ಕಂದಾಯ, ಕೃಷಿ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಮಸ್ಥರು, ರೈತರು, ಸಂತ್ರಸ್ತ ಕುಟುಂಬಸ್ಥರು ಇದ್ದರು.
- - -ಬಾಕ್ಸ್-1
* ಹಿರೇಮಲ್ಲನಹೊಳೆ ಕೆರೆ ಕೋಡಿ ಮನೆಗಳ ಸ್ಥಳಾಂತರ- ಸಂತ್ರಸ್ತರಿಗೆ ಬೇರೆಡೆ ನಿವೇಶನ, ಮನೆ ನಿರ್ಮಾಣ: ಕೃಷ್ಣ ಭೈರೇಗೌಡ ಹೇಳಿಕೆ ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆ ಜಿಲ್ಲೆಯಲ್ಲಿ ಹಿಂಗಾರಿನಲ್ಲಿ ಶೇ.190ರಷ್ಟು ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಇದರಿಂದಾಗಿ ಹಲವಾರು ಕೆರೆ, ಕಟ್ಟೆಗಳು ತುಂಬಿ, ಕೋಡಿ ಬಿದ್ದಿವೆ. ಅಲ್ಲದೇ, ಬೆಳೆ ನಷ್ಟವೂ ಆಗಿದೆ. ಬೆಳೆ ನಷ್ಟದ ಬಗ್ಗೆ ಜಂಟಿ ಸಮೀಕ್ಷೆ ಕೈಗೊಂಡು, ವರದಿ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದರು.ಜಗಳೂರು ತಾಲೂಕಿನಲ್ಲಿ ಶುಕ್ರವಾರ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರೇಮಲ್ಲನಹೊಳೆ ಗ್ರಾಮದ ಕೆರೆ ಕೋಡಿಯಲ್ಲಿ ಅನಧಿಕೃತವಾಗಿ ಮನೆಗಳನ್ನು ನಿರ್ಮಿಸಿದ್ದಾರೆ. ಪರಿಣಾಮ ಇಲ್ಲಿನ ಮನೆಗಳಿಗೆ ನೀರು ನುಗ್ಗಿದೆ. ಎಲ್ಲ 35 ಮನೆಗಳನ್ನು ಬೇರೆಡೆ ಸ್ಥಳಾಂತರಿಸಲು ಸೂಚಿಸಲಾಗಿದೆ ಎಂದರು.
ಮನೆ ಪರಿಹಾರದ ಜೊತೆಗೆ ಬೇರೆಡೆ ನಿವೇಶನ ನೀಡಿ, ಅಂತಹ ಸಂತ್ರಸ್ತ ಕುಟುಂಬಗಳಿಗೆ ಮನೆಗಳನ್ನು ನಿರ್ಮಿಸಿಕೊಡಲಾಗುವುದು. ಮುಂದಿನ 2 ತಿಂಗಳಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಸೂಚಿಸಲಾಗಿದೆ. ಹಿರೇಮಲ್ಲನಹೊಳೆ ಗ್ರಾಮದಲ್ಲಿ ಅನೇಕ ಮನೆಗಳು ಕುಸಿದಿವೆ. ಮನೆಗಳಿಗೆ ಪರಿಹಾರದ ಜೊತೆಗೆ ಬದಲಿ ನಿವೇಶನ ಹಾಗೂ ಮನೆ ನಿರ್ಮಿಸಿ ಕೊಡುವಂತೆ ಸೂಚನೆ ನೀಡಿದ್ದೇನೆ ಎಂದು ಸಚಿವರು ಹೇಳಿದರು.- - -
ಬಾಕ್ಸ್-2* ಮನೆ, ಬೆಳೆ, ಜೀವಹಾನಿಗೆ 11.24 ಲಕ್ಷ ಪರಿಹಾರ ವಿತರಣೆಕನ್ನಡಪ್ರಭ ವಾರ್ತೆ ದಾವಣಗೆರೆ
ಜಿಲ್ಲೆಯಲ್ಲಿ ಮಾರ್ಚ್‌ನಿಂದ ಮೇ ತಿಂಗಳವರೆಗೆ 1 ಮನೆ ಸಂಪೂರ್ಣ, 35 ಮನೆಗಳು ಭಾಗಶಃ ಹಾನಿಗೀಡಾಗಿವೆ. 25 ಕುರಿಗಳು ಸಾವನ್ನಪ್ಪಿದ್ದು, 251.8 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಸುಮಾರು ₹11.24 ಲಕ್ಷ ಪರಿಹಾರ ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದರು.ಜಗಳೂರು ತಾಲೂಕಿನಲ್ಲಿ ಶುಕ್ರವಾರ ಮಳೆ ಹಾನಿ ಪರಿಶೀಲನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೂನ್ ತಿಂಗಳಿನಿಂದ ಸೆಪ್ಟೆಂಬರ್‌ವರೆಗೆ 5 ಹಸು, 17 ಕುರಿಗಳು ಮೃತಪಟ್ಟಿದ್ದು, ₹2.71 ಲಕ್ಷ ಪರಿಹಾರ ನೀಡಲಾಗಿದೆ. ಮನೆಗಳಲ್ಲಿ 85 ಮನೆ ಪೂರ್ಣ, 97 ಭಾಗಶಃ, 109 ಮನೆಗಳು ಅಲ್ಪಹಾನಿಗೀಡಾಗಿದ್ದು, ₹1,83,20,000 ಪರಿಹಾರ ನೀಡಲಾಗಿದೆ ಎಂದರು.
ಹಾನಿಯಾದ ಮೂಲ ಸೌಕರ್ಯಗಳ ಅಭಿವೃದ್ಧಿಗಾಗಿ ₹2,14,95,000 ಒದಗಿಸಿದೆ. ಹಿಂಗಾರು ಹಂಗಾಮಿನಲ್ಲಿ ಅಕ್ಟೋಬರ್‌ನಲ್ಲಿ ಮನೆ ಗೋಡೆ ಬಿದ್ದು, ಮೃತರ ಕುಟುಂಬಕ್ಕೆ ₹5 ಲಕ್ಷ ಪರಿಹಾರ ನೀಡಲಾಗಿದೆ. ನ್ಯಾಮತಿ ತಾಲೂಕಿನಲ್ಲಿ ಹಳ್ಳದಲ್ಲಿ ಕೊಚ್ಚಿಹೋಗಿದ್ದ ಮೃತನ ಕುಟುಂಬಕ್ಕೆ ವರದಿ ಬಂದ ತಕ್ಷಣ ಪರಿಹಾರ ಒದಗಿಸಲಾಗುತ್ತದೆ. 4 ಹಸು, 16 ಕುರಿ ಸಾವನ್ನಪ್ಪಿದ್ದು, ₹2.13 ಲಕ್ಷ ಪರಿಹಾರ ನೀಡಲಾಗಿದೆ ಎಂದು ಹೇಳಿದರು.ಬೆಳೆ ಹಾನಿ ಬಗ್ಗೆ ಸಮೀಕ್ಷೆ ನಡೆಯುತ್ತಿದ್ದು, ಅದು ಮುಗಿಯುತ್ತಿದ್ದಂತೆ ಪರಿಹಾರ ನೀಡಲಾಗುವುದು. ಜಿಲ್ಲೆಯ ಎಲ್ಲ ತಹಸೀಲ್ದಾರರ ಖಾತೆಯಲ್ಲಿ ₹1.68 ಕೋಟಿ ಹಾಗೂ ಜಿಲ್ಲಾಧಿಕಾರಿ ಪಿ.ಡಿ. ಖಾತೆಯಲ್ಲಿ ₹10.60 ಕೋಟಿ ಹಣ ಇರುತ್ತದೆ ಎಂದು ತಿಳಿಸಿದರು.
ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಸಚಿವ ಕೃಷ್ಣ ಭೈರೇಗೌಡ ಅವರು ಮಲೆನಾಡು ಭಾಗದಲ್ಲಿ ಭೇಟಿ ಕೊಟ್ಟಿದ್ದಾರಲ್ಲಾ ಎಂಬುದಾಗಿ ಹಾರಿಕೆ ಉತ್ತರ ನೀಡಿದರು.- - -
ಕೋಟ್ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಸಚಿವರು, ಶಾಸಕರು ಸೇರಿದಂತೆ ಇನ್ನೂ ಯಾರೂ ಕ್ಷೇತ್ರಗಳಿಗೆ ಹೋಗಿಲ್ಲ. ಚುನಾವಣೆಗೆ 10 ದಿನಗಳು ಬಾಕಿ ಇರುವಾಗ ಆಯಾ ಕ್ಷೇತ್ರಗಳಲ್ಲೇ ಇದ್ದು ಕೆಲಸ ಮಾಡಬೇಕಾಗುತ್ತದೆ. ಅದೂ ಸಹ ಸಮಾಜಸೇವೆಯೇ ಆಗಿದೆ - ಕೃಷ್ಣ ಭೈರೇಗೌಡ, ಕಂದಾಯ ಸಚಿವ- - -
- (ಫೋಟೋಗಳು ಇವೆ):