ಬೆಳೆ ಹಾನಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೂಡಲೇ ಬರ ಅಧ್ಯಯನ ನಡೆಸಿ ಬೆಳೆ ಹಾನಿಗೊಳಗಾದ ರೈತರಿಗೆ ಪ್ರತಿ ಹೆಕ್ಟೇರ್‌ಗೆ ₹ 25000 ಪರಿಹಾರ ನೀಡಬೇಕು.
ಹುಬ್ಬಳ್ಳಿ:
ಬೆಳೆ ಹಾನಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೂಡಲೇ ಬರ ಅಧ್ಯಯನ ನಡೆಸಿ ಬೆಳೆ ಹಾನಿಗೊಳಗಾದ ರೈತರಿಗೆ ಪ್ರತಿ ಹೆಕ್ಟೇರ್‌ಗೆ ₹ 25000 ಪರಿಹಾರ ನೀಡಬೇಕೆಂದು ರೈತ ಸೇನಾ ಕರ್ನಾಟಕ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಧಾನಮಂಡಲದ ಅಧಿವೇಶನದಲ್ಲಿ ಬರ ಹಾಗೂ ರೈತರ ಸಮಸ್ಯೆಗಳ ಕುರಿತು ಸಮಗ್ರ ಚರ್ಚೆಯಾಗಬೇಕು. ಆದರೆ, ಪ್ರತಿಪಕ್ಷಗಳು ರೈತರ ಸಮಸ್ಯೆಗಳ ಬಗ್ಗೆ ಸರ್ಕಾರದ ಮೇಲೆ ಅಗತ್ಯ ಒತ್ತಡ ಹೇರುವಲ್ಲಿ ವಿಫಲವಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ಸಾರ್ವಜನಿಕರ ಹಿತ ಕಾಪಾಡುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ಶಾಸಕ ಎನ್.ಎಚ್. ಕೋನರಡ್ಡಿ ಅವರು ರೈತರ ಸಮಸ್ಯೆ, ಪರಿಹಾರ ಹಾಗೂ ಮಹಾದಾಯಿ ವಿಚಾರದಲ್ಲಿ ಸದನದಲ್ಲಿ ಉತ್ತಮ ರೀತಿಯಲ್ಲಿ ಗಮನ ಸೆಳೆದಿರುವುದು ಶ್ಲಾಘನೀಯ. ರೈತ ಸೇನಾ ಕರ್ನಾಟಕದ ವತಿಯಿಂದ ಅವರನ್ನು ಅಭಿನಂದಿಸುತ್ತೇವೆ. ಇದೇ ರೀತಿ ಎಲ್ಲ ಶಾಸಕರು ರೈತರ ಪರ ಧ್ವನಿ ಎತ್ತಿ, ರೈತಪರ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರದ ಗಮನ ಸೆಳೆಯಬೇಕು. ಜನಪ್ರತಿನಿಧಿಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ತಮ್ಮ ಜವಾಬ್ದಾರಿ ನಿಭಾಯಿಸಬೇಕು ಎಂದರು.
ಪ್ರಕರಣ ಹಿಂಪಡೆಯಲಿ:
ಮಹದಾಯಿ ಹೋರಾಟಕ್ಕೆ ಸಂಬಂಧಿಸಿದಂತೆ 2025ರ ನವೆಂಬರ್‌ನಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಿ, ಬೇಡಿಕೆ ಈಡೇರದಿದ್ದರೆ ಹೋರಾಟ ನಡೆಸುವುದಾಗಿ ತಿಳಿಸಲಾಗಿತ್ತು. ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಡಿಸೆಂಬರ್ 2ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಕಾನೂನಾತ್ಮಕವಾಗಿ ಪರವಾನಗಿ ಪಡೆದು ಹೋರಾಟ ನಡೆಸಿದ್ದರೂ 28 ರೈತರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದು ಸರ್ಕಾರ ಕೂಡಲೇ ರೈತರ ಮೇಲಿನ ಪ್ರಕರಣಗಳನ್ನು ಹಿಂಪಡೆಯಬೇಕು. ಅಲ್ಲದೆ, ಮಡಿವಾಳ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ವಿರುದ್ಧ ಸೂಕ್ತ ಕ್ರಮಕೈಗೊಂಡು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಗುರು ರಾಯನಗೌಡ್ರ, ಮಲ್ಲಣ್ಣ ಆಲೇಕಾರ ಹಾಗೂ ವಿರುಪಾಕ್ಷ ರಾಯಣ್ಣನವರ ಉಪಸ್ಥಿತರಿದ್ದರು.
ವಕೀಲರ ಸಮಿತಿ ಬದಲಾಯಿಸಿ
ಮಹದಾಯಿ ಸೇರಿದಂತೆ ರಾಜ್ಯದ ಜಲ ವಿವಾದಗಳಿಗೆ ನೇಮಕಗೊಂಡಿರುವ ವಕೀಲರ ಸಮಿತಿ ಸದಸ್ಯರನ್ನು ಬದಲಾಯಿಸಿ, ಹೊಸಬರನ್ನು ನೇಮಿಸುವಂತೆ ವೀರೇಶ ಸೊಬರದಮಠ ಆಗ್ರಹಿಸಿದರು. ಸದ್ಯದ ವಕೀಲರ ಸಮಿತಿಯಿಂದ ರಾಜ್ಯದ ಹಿತ ಕಾಪಾಡಲು ಸಾಧ್ಯವಾಗುತ್ತಿಲ್ಲ. ಕೆಲವರು ತಮ್ಮ ಶುಲ್ಕ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಕೆಲಸ ಮಾಡುತ್ತಿದ್ದಾರೆ. ಇಂತಹ ವಕೀಲರು ರಾಜ್ಯಕ್ಕೆ ಅಗತ್ಯವಿಲ್ಲ. ರಾಜ್ಯದ ನೆಲ, ಜಲ, ಭಾಷೆಯ ಬಗ್ಗೆ ಹೆಚ್ಚಿನ ಆಸಕ್ತಿ ಹಾಗೂ ಜ್ಞಾನ ಹೊಂದಿರುವ ವಕೀಲರನ್ನು ಸಮಿತಿಗೆ ನೇಮಿಸಬೇಕು ಎಂದರು.
ಮಹದಾಯಿ, ಕಳಸಾ-ಬಂಡೂರಿ ವಿಚಾರದಲ್ಲಿ ಗೋವಾ ಸರ್ಕಾರ ಸಲ್ಲಿಸಿರುವ ಮೇಲ್ಮನವಿಗೆ ವಿರುದ್ಧವಾಗಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿರುವ ಮೇಲ್ಮನವಿಯನ್ನು ವಾಪಸ್ ಪಡೆದು, ನ್ಯಾಯಾಧಿಕರಣ ನೀಡಿರುವ ಆದೇಶವನ್ನು ಪಾಲಿಸುತ್ತೇವೆ. ಇದಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಬೇಕು ಎಂಬುದಾಗಿ ಮಾತ್ರ ಅರ್ಜಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.