ಮಂಚೀಕೇರಿಯಲ್ಲಿ ಬೆಳೆ ಪರಿಶೀಲನೆ; ಅಲ್ಲಲ್ಲಿ ರೋಗದ ಬಾಧೆ

KannadaprabhaNewsNetwork |  
Published : Oct 12, 2025, 01:01 AM IST
ಫೋಟೋ ಅ.೧೧ ವೈ.ಎಲ್.ಪಿ. ೦೨ | Kannada Prabha

ಸಾರಾಂಶ

ತಾಲೂಕಿನ ಮಂಚಿಕೇರಿ ಹೋಬಳಿಯ ಕೆರೆಹೊಸಳ್ಳಿ, ಬಿದ್ರಳ್ಳಿ, ಉಮ್ಮಚಗಿ, ತೋಳಗೋಡ, ಹೆಮ್ಮಾಡಿ, ಭರಣಿ ಹಾಗೂ ಭರತನಹಳ್ಳಿ ಗ್ರಾಮಗಳಲ್ಲಿ ಅಲ್ಲಲ್ಲಿ ಕಂದುಜಿಗಿ ಹುಳು, ಎಲೆಸುರುಳಿ ಹುಳುಗಳ ಬಾಧೆ ಹಾಗೂ ಬೆಂಕಿರೋಗದ ಬಾಧೆ ಕಂಡುಬಂದಿದೆ.

ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಸಹಾಯಕ ಕೃಷಿ ನಿರ್ದೇಶಕ ನಾಗರಾಜ ನಾಯ್ಕ ಸಲಹೆ

ಕನ್ನಡಪ್ರಭ ವಾರ್ತೆ ಯಲ್ಲಾಪುರ

ತಾಲೂಕಿನಲ್ಲಿ ಮುಂಗಾರು ಹಂಗಾಮು ಮುಕ್ತಾಯವಾಗಿದ್ದು, ಮಳೆಯ ಪ್ರಮಾಣ ಕಡಿಮೆಯಾಗಿದೆ. ಭತ್ತದ ಬೆಳೆಯು ಬಹುತೇಕ ಗರ್ಭಾಂಕುರ ಹಂತದಲ್ಲಿದ್ದು, ತಾಲೂಕಿನ ಮಂಚಿಕೇರಿ ಹೋಬಳಿಯ ಕೆರೆಹೊಸಳ್ಳಿ, ಬಿದ್ರಳ್ಳಿ, ಉಮ್ಮಚಗಿ, ತೋಳಗೋಡ, ಹೆಮ್ಮಾಡಿ, ಭರಣಿ ಹಾಗೂ ಭರತನಹಳ್ಳಿ ಗ್ರಾಮಗಳಲ್ಲಿ ಅಲ್ಲಲ್ಲಿ ಕಂದುಜಿಗಿ ಹುಳು, ಎಲೆಸುರುಳಿ ಹುಳುಗಳ ಬಾಧೆ ಹಾಗೂ ಬೆಂಕಿರೋಗದ ಬಾಧೆ ಕಂಡುಬಂದಿದೆ. ತಕ್ಷಣ ಇಲಾಖೆ ಅಧಿಕಾರಿಗಳ ಸಹಕಾರ ಪಡೆದು ಅಗತ್ಯ ಔಷಧ ಸಿಂಪಡಿಸಿ, ಪ್ರಾರಂಭದಲ್ಲೇ ನಿಯಂತ್ರಣ ಮಾಡಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ನಾಗರಾಜ ನಾಯ್ಕ ಸಲಹೆ ನೀಡಿದ್ದಾರೆ.

ಈ ಕುರಿತು ಬುಧವಾರ ಕೃಷಿ ಇಲಾಖೆ ಸಿಬ್ಬಂದಿ ಕೃಷಿ ವಿಜ್ಞಾನ ಕೇಂದ್ರ ಶಿರಸಿಯ ವಿಜ್ಞಾನಿಗಳೊಂದಿಗೆ ಬಾಧಿತ ಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸಿ, ರೈತರಿಗೆ ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಮಾರ್ಗದರ್ಶನ ನೀಡಲಾಗಿದೆ. ಕಂದುಜಿಗಿ ಹುಳು:

ಈ ಕೀಟವು ಬೆಣೆ ಆಕಾರದಲ್ಲಿದ್ದು, ಪ್ರೌಢ ಮತ್ತು ಅಪ್ಸರೆ ಕೀಟಗಳು ಕಾಂಡವನ್ನು ನೀರಿನ ಮಟ್ಟಕ್ಕಿಂತ ಮೇಲ್ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆವರಿಸಿ ರಸ ಹೀರುತ್ತವೆ. ಇದರಿಂದ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಕ್ರಮೇಣ ಕಂದು ಬಣ್ಣಕ್ಕೆ ತಿರುಗುತ್ತವೆ ಹಾಗೂ ಎಲೆಗಳು ಸುಟ್ಟಂತೆ ಕಾಣುತ್ತವೆ. ಈ ಕೀಟದ ಬಾಧೆಯು ತೆನೆ ಬರುವ ಸಮಯದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಭತ್ತದ ಹೊಲಗಳು ಕೆಂಪಾಗಿ ಕಾಣುವುದರಿಂದ ರೈತರು ಇದನ್ನು ಕೆಂಪುಕೊಳೆ ಎಂದು ತಪ್ಪಾಗಿ ಗ್ರಹಿಸಿ ಶಿಫಾರಸ್ಸು ಇಲ್ಲದ ಔಷಧಗಳನ್ನು ಸಿಂಪಡಿಸುವುದರಿಂದ ಕೀಟ ಹತೋಟಿ ಬರುವುದಿಲ್ಲ. ಅದನ್ನು ಗಮನಿಸಬೇಕು ಎಂದು ತಿಳಿಸಿದ್ದಾರೆ. ನಿರ್ವಹಣಾ ಕ್ರಮಗಳು:

ಬಾಧಿತ ಹೊಲಗಳಿಗೆ ಸಾರಜನಕ ಗೊಬ್ಬರ ನೀಡಬಾರದು, ಗದ್ದೆಯಲ್ಲಿ ನೀರನ್ನು ಕಡಿಮೆ ಮಾಡಬೇಕು, ಕೀಟನಾಶಕಗಳಾದ ಇಮಿಡಾಕ್ಲೋಪ್ರಿಡ್ ೦.೩ ಮಿಲಿ ಪ್ರತೀ ಲೀಟರ್ ನೀರಿಗೆ ಅಥವಾ ಥಯೋಮೆಥಾಕ್ಸಾಮ್ ೦.೫ ಗ್ರಾಂ ಪ್ರತೀ ಲೀಟರ್ ನೀರಿಗೆ ಅಥವಾ ಬುಪ್ರೋಪಿಜಿನ್ ೧.೫ ಮಿಲಿ ಪ್ರತೀ ಲೀಟರ್ ನೀರಿಗೆ ಬೆರೆಸಿ ಎಕರೆಗೆ ೨೦೦ ಲೀ ಸಿಂಪಡಣಾ ದ್ರಾವಣವನ್ನು ತಯಾರಿಸಿ ಭತ್ತದ ಸಸಿಗಳು ಸಂಪೂರ್ಣ ಒದ್ದೆಯಾಗುವಂತೆ ಸಿಂಪಡಿಸಬೇಕು.ಎಲೆಸುರುಳಿ ಕೀಟ:

ಈ ಕೀಟವು ನಾಟಿ ಮಾಡಿ ೧೫ ದಿನಗಳಿಂದ ತೆನೆ ಬರುವವರೆಗೂ ಬಾಧಿಸುತ್ತಿದ್ದು, ಮರಿಹುಳು ಎಲೆಯನ್ನು ಸುರುಳಿ ಮಾಡಿ ಅದರ ಒಳಗಡೆಯಿಂದ ಹಸಿರು ಭಾಗವನ್ನು ಕೊರೆದು ತಿನ್ನುವುದರಿಂದ ಕೀಟದ ಬಾಧೆ ಹೆಚ್ಚಾದಾಗ ಪೈರು ಸುಟ್ಟಂತೆ ಕಾಣುತ್ತದೆ. ಈ ಕೀಟದ ಹತೋಟಿಗಾಗಿ ಕೀಟನಾಶಕಗಳಾದ ಪ್ರೊಫೆನೊಫಾಸ್ ೫೦ ಇಸಿ ೨ ಮಿಲಿ ಅಥವಾ ಕ್ಲೋರೋಪೈರಿಪಾಸ್ ೨೦ ಇಸಿ ೨ ಮಿಲಿ ಅಥವಾ ಕ್ವಿನಾಲ್‌ಫಾಸ್ ೨೫ ಇಸಿ ೨ ಮಿಲಿ ಪ್ರತೀ ಲೀಟರ್ ನೀರಿಗೆ ಬೆರೆಸಿ ಎಕರೆಗೆ ೨೦೦ ಲೀ ಸಿಂಪಡಣಾ ದ್ರಾವಣ ತಯಾರಿಸಿ ಸಿಂಪಡಿಸಬೇಕು. ಸಿಂಪಡಿಸುವ ಪೂರ್ವದಲ್ಲಿ ಮುಳ್ಳಿನ ಕಂಟಿಯಿಂದ ಗದ್ದೆಯ ಮೇಲೆ ಹಾಯಿಸಬೇಕು. ಕಾಂಡ ಕೊರೆಯುವ ಹುಳು:

ಈ ಕೀಟವು ಭತ್ತದ ಕೊನೆಯ ಹಂತದಲ್ಲಿ ಕಾಣಿಸಿಕೊಂಡು ಕಾಂಡವನ್ನು ಕೊರೆದು ತಿಂದು ಸುಳಿಯು ಬಾಡಿಹೋಗುವಂತೆ ಮಾಡುತ್ತದೆ. ಇದರಿಂದ ಭತ್ತದ ತೆನೆಗಳು ಜೊಳ್ಳಾಗಿ ಇಳುವರಿ ಕುಂಠಿತವಾಗುತ್ತದೆ. ಈ ಹುಳುವಿನ ಹತೋಟಿಗಾಗಿ ಈ ಮೇಲೆ ತಿಳಿಸಿದ ಕ್ಲೋರೋಪೈರಿಪಾಸ್, ಪ್ರೊಫೆನೊಫಾಸ್ ಹಾಗೂ ಕ್ವಿನಾಲ್‌ಫಾಸ್ ಇವುಗಳಲ್ಲಿ ಯಾವುದಾದರೂ ಒಂದನ್ನು ೨ ಮಿಲಿ ಪ್ರತೀ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

ಬೆಂಕಿ ರೋಗ:

ಈ ರೋಗವು ಶೀಲೀಂದ್ರದಿಂದ ಬರುತ್ತಿದ್ದು, ಮಳೆ ಕಡಿಮೆಯಾಗಿ ಇಬ್ಬನಿ ಹೆಚ್ಚಾದಾಗ ಕಾಣಿಸಿಕೊಳ್ಳುತ್ತದೆ. ಈ ರೋಗ ಭಾದಿತ ಎಲೆಗಳಲ್ಲಿ ಕಣ್ಣಿನಾಕಾರದ ಕಂದು ಚುಕ್ಕೆಗಳಾಗಿ ಕ್ರಮೇಣ ಸುಟ್ಟಂತೆ ಕಾಣುತ್ತದೆ. ರೋಗದ ಹತೋಟಿಗಾಗಿ ಟ್ರೈಸೈಕ್ಲೋಝೋಲ್ (ಭೀಮ್) ೦.೬ ಗ್ರಾಂ ಪ್ರತೀ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.

ತೆನೆ ತಿಗಣೆ:

ಈ ಕೀಟವು ಭತ್ತವು ಹಾಲುಗಾಳು ಹಂತದಲ್ಲಿರುವಾಗ ಕಾಣಿಸಿಕೊಳ್ಳುತ್ತದೆ. ಕೀಟವು ತೆನೆಯ ಮೇಲೆ ಕುಳಿತು ಕಾಳುಗಳಲ್ಲಿನ ಹಾಲನ್ನು ಹೀರಿ ತೆನೆಯನ್ನು ಜೊಳ್ಳಾಗಿಸುತ್ತದೆ. ಕೀಟವನ್ನು ಕೈಯಿಂದ ಮುಟ್ಟಿದಾಗ ಕೆಟ್ಟ ವಾಸನೆ ಬರುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಭಾದಿಸಿದಾಗ ಇಳುವರಿ ತೀವೃ ಕುಂಠಿತವಾಗುತ್ತದೆ. ಈ ಕೀಟದ ಹತೋಟಿಗಾಗಿ ಮೆಲಾಥಿಯಾನ್ ೨೦ ಇಸಿ ೨ ಮಿಲಿ ಪ್ರತೀ ಲೀಟರ್ ನೀರಿಗೆ ಬೆರೆಸಿ ಬೆಳಗಿನ ಜಾವದಲ್ಲಿ ಸಿಂಪಡಿಸಬೇಕು.

ಈ ಮೇಲಿನ ಯಾವುದೇ ಕೀಟ ರೋಗಗಳು ಬಾಧಿಸಿದ್ದಲ್ಲಿ ರೈತರು ಸಿಂಪರಣೆ ಮಾಡುವ ಪೂರ್ವದಲ್ಲಿ ಸಮೀಪದ ರೈತ ಸಂಪರ್ಕ ಕೇಂದ್ರಗಳು ಹಾಗೂ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಿಬ್ಬಂದಿಗಳನ್ನು ಸಂಪರ್ಕಿಸಿ, ಸರಿಯಾದ ಮಾಹಿತಿ ಪಡೆದೇ ಈ ಔಷಧಿ ಸಿಂಪಡಿಸಬೇಕು ಎಂದು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

PREV

Recommended Stories

ಪ್ರೇಮಿ ಜೊತೆ ಓಡಿ ಹೋದ ಮಗಳ ತಿಥಿ ಮಾಡಿದ ಅಪ್ಪ
ಇಂದು ಮೂರು ಜಿಲ್ಲೆಗಳಲ್ಲಿ ಭಾರೀ ಮಳೆ - ಮುಂದಿನ 3-4 ದಿನ ಹಲವೆಡೆ ಉತ್ತಮ ಮಳೆ