
ಗದಗ: ಜಿಲ್ಲೆಯು ಸಂಪೂರ್ಣವಾಗಿ ಬರ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ವಾಡಿಕೆಗಿಂತ ಶೇ. 32ರಷ್ಟು ಮಳೆ ಕೊರತೆಯಾಗಿದೆ. ಕೃಷಿ ಅಧಿಕಾರಿಗಳು ವಾಸ್ತವಿಕ ವರದಿ ಸಲ್ಲಿಸಿ, ಅರ್ಹ ಪ್ರತಿಯೊಬ್ಬ ರೈತರಿಗೂ ಸರ್ಕಾರದ ಪರಿಹಾರ ತಲುಪುವಂತೆ ನೋಡಿಕೊಳ್ಳಬೇಕು ಎಂದು ಸಚಿವ ಬಸವರಾಜ ರಾಯರಡ್ಡಿ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನರಗುಂದ ತಾಲೂಕಿನಲ್ಲಿ ಶೇ. 70ರಿಂದ 75ರಷ್ಟು ಬೆಳೆಹಾನಿಯಾಗಿದ್ದು, ರೈತರ ಹೊಲಗಳಲ್ಲಿನ ಬೆಳೆಗಳು ಒಣಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ಪ್ರತಿ ಹೆಕ್ಟೇರ್ ಗೆ ₹8500 ಪರಿಹಾರ ನೀಡಲು ಅವಕಾಶವಿದೆ. ಕೃಷಿ ಹಾಗೂ ತೋಟಗಾರಿಕೆ ಬೆಳೆಹಾನಿಯ ನಿಖರ ವರದಿ ಸಿದ್ಧಪಡಿಸಿ, ಯಾವುದೇ ಅರ್ಹ ರೈತ ಪರಿಹಾರದಿಂದ ವಂಚಿತರಾಗದಂತೆ ಎಚ್ಚರ ವಹಿಸಬೇಕು. ಬರ ಪರಿಸ್ಥಿತಿ ನಿವಾರಣೆಗೆ ಉದ್ಯೋಗ ಖಾತ್ರಿ(ಉದ್ಯೋಗ ಖಾತ್ರಿ ಯೋಜನೆಗೆ ಕೇಂದ್ರ ಶೇ. 60 ಹಾಗೂ ರಾಜ್ಯ ಶೇ. 40ರಷ್ಟು ಅನುದಾನ ನೀಡಲಿದೆ. ಅಡಿಯಲ್ಲಿ ಹೆಚ್ಚಿನ ಮಾನವ ದಿನಗಳನ್ನು ಸೃಷ್ಟಿಸಿ ಗ್ರಾಮೀಣ ಕಾರ್ಮಿಕರಿಗೆ ಕೆಲಸ ನೀಡಬೇಕು ಎಂದು ಸಚಿವರು ನಿರ್ದೇಶಿಸಿದರು.ಇದೇ ವೇಳೆ, ನರಗುಂದ ಪಟ್ಟಣದ ಕುಡಿಯುವ ನೀರು ಸರಬರಾಜು ವ್ಯವಸ್ಥೆ ಕುರಿತು ಮುಖ್ಯಾಧಿಕಾರಿ ಸಮರ್ಪಕ ಮಾಹಿತಿ ನೀಡದಿದ್ದಕ್ಕೆ ಸಚಿವರು ತರಾಟೆಗೆ ತೆಗೆದುಕೊಂಡರು.
ಸಭೆಯಲ್ಲಿ ಗ್ಯಾರಂಟಿ ಸಮಿತಿ ಅಧ್ಯಕ್ಷ ವಿವೇಕ ಯಾವಗಲ್, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್. ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.