ಕ್ವಿಟ್ ಇಂಡಿಯಾ ಚಳವಳಿ ಐತಿಹಾಸಿಕ ಕ್ರಾಂತಿ

KannadaprabhaNewsNetwork |  
Published : Aug 10, 2026, 02:30 AM IST
ಹಾವೇರಿ ನಗರದ ಹೊಸಮಠದ ಆವರಣದಲ್ಲಿ ಜರುಗಿದ ಸಾರ್ಥಕ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. | Kannada Prabha

ಸಾರಾಂಶ

ಜಾತಿ, ಧರ್ಮ ಮತ್ತು ವಯಸ್ಸಿನ ಹಂಗು ಮೀರಿದ ಕ್ವಿಟ್ ಇಂಡಿಯಾ ಚಳವಳಿಯ ಕಿಚ್ಚು ದೇಶದ ಪ್ರತಿಯೊಬ್ಬ ಪ್ರಜೆಗಳಲ್ಲೂ ಹೋರಾಟದ ಕೆಚ್ಚು ಹೆಚ್ಚಿಸಿತ್ತು. ದೇಶದ ಎಲ್ಲೆಡೆ ಹೊಸ ನಾಯಕರನ್ನು ಸೃಷ್ಟಿಸಿದ ಪರಿಣಾಮ ಅಂತಿಮವಾಗಿ ಜನರ ಹೋರಾಟಕ್ಕೆ ಬ್ರಿಟಿಷ್ ಸರ್ಕಾರ ಮಣಿಯಬೇಕಾಯಿತು ಎಂದು ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ ಹೇಳಿದರು.

ಹಾವೇರಿ: ಜಾತಿ, ಧರ್ಮ ಮತ್ತು ವಯಸ್ಸಿನ ಹಂಗು ಮೀರಿದ ಕ್ವಿಟ್ ಇಂಡಿಯಾ ಚಳವಳಿಯ ಕಿಚ್ಚು ದೇಶದ ಪ್ರತಿಯೊಬ್ಬ ಪ್ರಜೆಗಳಲ್ಲೂ ಹೋರಾಟದ ಕೆಚ್ಚು ಹೆಚ್ಚಿಸಿತ್ತು. ದೇಶದ ಎಲ್ಲೆಡೆ ಹೊಸ ನಾಯಕರನ್ನು ಸೃಷ್ಟಿಸಿದ ಪರಿಣಾಮ ಅಂತಿಮವಾಗಿ ಜನರ ಹೋರಾಟಕ್ಕೆ ಬ್ರಿಟಿಷ್ ಸರ್ಕಾರ ಮಣಿಯಬೇಕಾಯಿತು ಎಂದು ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ ಹೇಳಿದರು.

ನಗರದ ಬಸವಕೇಂದರ ಹೊಸಮಠದ ಆವರಣದಲ್ಲಿ ಅರಳಿಕಟ್ಟಿ ಪ್ರಕಾಶನ ಹಾವೇರಿ ಆಶ್ರಯದಲ್ಲಿ ಕ್ವಿಟ್ ಇಂಡಿಯಾ ದಿನಾಚರಣೆ ಮತ್ತು ಹಾವೇರಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ನಿಮಿತ್ತ ಜರುಗಿದ ಸಾರ್ಥಕ ಸಂವಾದ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಕ್ವಿಟ್ ಇಂಡಿಯಾ ಚಳವಳಿ ರಾಜಕೀಯ ಚಳವಳಿ ಆಗದೇ ನಮ್ಮ ದೇಶದ ಪ್ರತಿ ಪ್ರಜೆಯೂ ಬೀದಿಗಿಳಿದು ಹೋರಾಡುವ ಶಕ್ತಿ ತುಂಬಿತು. ಮೊದಲ ಹಂತದ ನಾಯಕರು ಜೈಲುಪಾಲು ಆಗುತ್ತಿದ್ದಂತೆ ಎರಡನೇ ಹಂತದ ನಾಯಕರು ಹೋರಾಟವನ್ನು ಮುನ್ನಡೆಸಿದರು. ಇದೊಂದು ಐತಿಹಾಸಿಕ ಕ್ರಾಂತಿ. ಈ ಕ್ರಾಂತಿಯಲ್ಲಿ ನಮ್ಮ ಹಾವೇರಿ ಜಿಲ್ಲೆಯ ಹೋರಾಟಗಾರರೂ ದೇಶದ ಗಮನ ಸೆಳೆದಿದ್ದರು ಎಂಬುದು ಅಭಿಮಾನದ ಸಂಗತಿ ಎಂದರು.

ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಪ್ರಾಧ್ಯಾಪಕ ಪ್ರೇಮಾನಂದ ಲಕ್ಕಣ್ಣನವರ ಮಾತನಾಡಿ, ಕ್ವಿಟ್ ಇಂಡಿಯಾ ಚಳವಳಿ ಸಂದರ್ಭದಲ್ಲಿ ದೇಶ ನನ್ನದು, ಎಲ್ಲರೂ ನಮ್ಮವರು ಎಂಬ ಭಾವನೆ ಇತ್ತು. ಆದರೆ ಸಮಕಾಲೀನ ಸಮಾಜದಲ್ಲಿ ಎಲ್ಲರೂ ಸ್ವಾರ್ಥಿಗಳಾಗುತ್ತಿದ್ದೇವೆ. ಐತಿಹಾಸಿಕ ಪ್ರಜ್ಞೆಯ ಜೊತೆಗೆ ಪ್ರಾಮಾಣಿಕ ಬದ್ಧತೆ ರೂಢಿಸಿಕೊಳ್ಳಬೇಕಿದೆ. ವೈಚಾರಿಕ ಪ್ರಜ್ಞೆಯ ಹಾದಿಯಲ್ಲಿ ಸಾಗುವಾಗ ನಮ್ಮತನ ಬಿಟ್ಟು ಕೊಡಬಾರದು. ಹೊಸತನ್ನು ರೂಪಿಸಲು ಗಟ್ಟಿತನ ಬೇಕು. ಜನಜಾಗೃತಿ ಮೂಲಕ ಅರಿವು ಮೂಡಿಸುವ ಹೊಸಮಠ ಇಂಥ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿರುವುದು ಸಮಂಜಸವಿದೆ ಎಂದರು.

ನಿವೃತ್ತ ಶಿಕ್ಷಕ ಹನುಮಂತಗೌಡ ಗೊಲ್ಲರ ಮಾತನಾಡಿ, ಮಹಾತ್ಮ ಗಾಂಧೀಜಿಯವರ ಮಾಡು ಇಲ್ಲವೇ ಮಡಿ ಕರೆ ಇಡೀ ದೇಶದ ಜನರ ಆತ್ಮದ ಕೂಗು ಆಗಿತ್ತು. ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂಬುದು ಭಾರತೀಯರಲ್ಲಿ ರೋಮಾಂಚನ ಮೂಡಿಸಿತ್ತು. ಈ ಹೋರಾಟವನ್ನು ಹತ್ತಿಕ್ಕಲು ಬ್ರಿಟಿಷ್ ಸರ್ಕಾರ ಯತ್ನಿಸಿದರೂ ದೇಶಭಕ್ತರ ಮುಂದೆ ಅದು ಸೋಲು ಒಪ್ಪಿಕೊಳ್ಳಬೇಕಾಯಿತು ಎಂದರು.

ಸಂಶೋಧಕ ಪ್ರಮೋದ ನಲವಾಗಲ ಮಾತನಾಡಿ, ಹಾವೇರಿ ನಗರದ ದ್ಯಾಮವ್ವನ ಕಟ್ಟೆಯಿಂದ ಶುರುವಾದ ಧ್ವಜಾರೋಹಣ ಚಿಂತನೆ ಅಂದಿನ ಮುನಸಿಪಾಲಿಟಿ ಮೇಲೆ ಹಾರಿಸುವ ಮಟ್ಟಿಗೆ ಬೆಳೆಯಿತು. ಕರ್ನಾಟಕದಲ್ಲಿ ಮೊದಲ ಬಾರಿಗೆ ನಮ್ಮ ದೇಶದ ಧ್ವಜಾರೋಹಣ ಮಾಡಿದ್ದು ಮತ್ತು ರಾಣಿಬೆನ್ನೂರಿನ ಸ್ಥಾನಿಕ ಕಾರ್ಯಾಲಯದಲ್ಲಿ ಧ್ವಜಾರೋಹಣ ನೆರವೇರಿಸಲು ಠರಾವು ಪಾಸು ಮಾಡಿದ್ದು ನಮ್ಮ ಜಿಲ್ಲೆಯ ಹೋರಾಟಗಾರರ ಕಿಚ್ಚನ್ನು ತೋರಿಸಿಕೊಡುತ್ತದೆ ಎಂದರು.

ಸ್ವಾತಂತ್ರ್ಯ ಹೋರಾಟಗಾರರಾದ ರಮಾನಂದ ಮನ್ನಂಗಿ ಪುತ್ರಿ ಗಿರಿಜಮ್ಮ ಮನ್ನಂಗಿ ಮತ್ತು ಗುಡ್ಡಪ್ಪ ಮೈಲಾರ ಪುತ್ರಿ ಅನಸೂಯಾ ಮೈಲಾರ, ವಕೀಲ ಎಂ.ಎಫ್. ಕುಸಗೂರ, ಮುಖಂಡ ಸಂಜೀವಗಾಂಧಿ ಸಂಜೀವಣ್ಣನವರ, ಉಪನ್ಯಾಸಕ ಸಿದ್ದೇಶ್ವರ ಹುಣಸಿಕಟ್ಟಿಮಠ ಮಾತನಾಡಿದರು.

ಚನ್ನಬಸಪ್ಪ ಮೆಳ್ಳಳ್ಳಿ, ಚಂಪಾ ಹುಣಸಿಕಟ್ಟಿ, ಕಾಂತೇಶರೆಡ್ಡಿ ಗೋಡಿಹಾಳ, ಸುಭಾಷ್ ಮಡಿವಾಳರ ಉಪಸ್ಥಿತರಿದ್ದರು. ನಿಂಗಪ್ಪ ಆರೇರ ನಿರೂಪಿಸಿದರು. ಗೂಳಪ್ಪ ಅರಳಿಕಟ್ಟಿ ಸ್ವಾಗತಿಸಿದರು. ಸುರೇಶ ಕತ್ತೆಬೆನ್ನೂರ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಾಜದ ಮುಖ್ಯವಾಹಿನಿಗೆ ಬರಲು ಸಂಘಟನೆ ಮುಖ್ಯ: ವಿಜಯಕುಮಾರ ಪಾಟೀಲ
ಪ್ರತಿಭಾ ಪುರಸ್ಕಾರ ಮಕ್ಕಳ ಸಾಧನೆ ಜವಾಬ್ದಾರಿ ಹೆಚ್ಚಿಸುವುದು-ಶಾಸಕ ಬಸವರಾಜ