ಬೆಳೆಹಾನಿ ಸರ್ವೆ: ರೈತರಿಂದ ಹಣ ವಸೂಲಿ ಆರೋಪ

KannadaprabhaNewsNetwork |  
Published : Sep 01, 2026, 01:15 AM IST
ಕೆಂಭಾವಿ ಪಟ್ಟಣದ ಜಮೀನೊಂದರ ಬೆಳೆ ಸರ್ವೆ ಸಮೀಕ್ಷೆಯಲ್ಲಿ ಪಹಣಿ ನಂಬರ್ ಒಬ್ಬರದಾಗಿದ್ದರೆ ಅದರಲ್ಲಿರುವ ಭಾವಚಿತ್ರ ಬೇರೆಯವರದ್ದಾಗಿದೆ. | Kannada Prabha

ಸಾರಾಂಶ

ಬೆಳೆ ಸರ್ವೆ ಕಾರ್ಯಕ್ಕೆ ನಿಯೋಜನೆಗೊಂಡಿರುವ ಖಾಸಗಿ ಬೆಳೆ ಸರ್ವೆಗಾರರು ರೈತರಿಂದ ಹಣ ವಸೂಲಿ ಮಾಡುತ್ತಿರುವ ಆತಂಕಕಾರಿ ಬೆಳವಣಿಗೆ ಕಳೆದ ಹಲವು ದಿನಗಳಿಂದ ವಲಯದಲ್ಲಿ ನಡೆದಿದ್ದು, ಇದರಿಂದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ವಿಜಯ ಪುರೋಹಿತ

ಕನ್ನಡಪ್ರಭ ವಾರ್ತೆ ಕೆಂಭಾವಿ

ಬೆಳೆ ಸರ್ವೆ ಕಾರ್ಯಕ್ಕೆ ನಿಯೋಜನೆಗೊಂಡಿರುವ ಖಾಸಗಿ ಬೆಳೆ ಸರ್ವೆಗಾರರು ರೈತರಿಂದ ಹಣ ವಸೂಲಿ ಮಾಡುತ್ತಿರುವ ಆತಂಕಕಾರಿ ಬೆಳವಣಿಗೆ ಕಳೆದ ಹಲವು ದಿನಗಳಿಂದ ವಲಯದಲ್ಲಿ ನಡೆದಿದ್ದು, ಇದರಿಂದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ವಿಚಾರಕ್ಕೆ ಸಂಬಂಧಿಸಿ ರೈತರಿಂದ ಹಣ ಕೇಳಿದ ಆತಂಕಕಾರಿ ಆಡಿಯೊವೊಂದು ಈಗ ಎಲ್ಲೆಡೆ ವೈರಲ್ ಆಗಿದೆ. ಬಡ ರೈತರು ಬೆಳೆದ ಹತ್ತಿ ತೊಗರಿ ಸಂಪೂರ್ಣ ನಾಶವಾಗಿದ್ದು, ಸರ್ವೇ ಬಂದ ಖಾಸಗಿ ವ್ಯಕ್ತಿಗಳು ಸರ್ವೆ ಮಾಡಲು ಜಮೀನಿಗೆ ಆಗಮಿಸುವ ರೈತರಲ್ಲಿ ವಸೂಲಿ ದಂಧೆಗೆ ಇಳಿದಿದ್ದಾರೆ. ಅಕಸ್ಮಾತ್ ರೈತರು ತಮ್ಮ ಹೊಲದಲ್ಲಿ ಇಲ್ಲದೆ ಇದ್ದರೆ ಸಂಬಂಧಿಸಿದ ರೈತರಿಗೆ ಫೋನ್ ಮೂಲಕ ಸಂಪರ್ಕಿಸಿ ಇಂತಿಷ್ಟು ಹಣ ನೀಡುವಂತೆ ಬೇಡಿಕೆ ಇಡುವ ಧ್ವನಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಳೆ ಬಾರದೆ ಕಂಗಾಲಾಗಿರುವ ರೈತರಿಗೆ ಸರ್ಕಾರ ನಡೆಸಿರುವ ಬೆಳೆ ಸರ್ವೇ ಕಾರ್ಯ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಕೆಂಭಾವಿ ಭಾಗದಲ್ಲಿ ನಡೆಸಿರುವ ಬೆಳೆ ಸರ್ವೇಯಲ್ಲಿ ಯಾರದ್ದೋ ಪಹಣಿ ಸಂಖ್ಯೆಗೆ ಮತ್ತಿನ್ಯಾರದ್ದೋ ಭಾವಚಿತ್ರ ಅಂಟಿಸುವ ಮೂಲಕ ಸರ್ವೆ ಕಾರ್ಯ ಮಾಡುತ್ತಿದ್ದು, ರೈತರ ಗಮನಕ್ಕೂ ತಾರದೆ ಸರ್ವೆ ಕಾರ್ಯ ಮಾಡುತ್ತಿರುವ ಖಾಸಗಿ ಸರ್ವೆ ವ್ಯಕ್ತಿಗಳ ಕಾರ್ಯಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.

ಕಂದಾಯ ಇಲಾಖೆಯ ಹೆಗಲ ಮೇಲಿರುವ ಈ ರೈತರ ಸರ್ವೆ ಕಾರ್ಯ ಖಾಸಗಿಯವರಿಗೆ ನೀಡಿದ್ದು, ಖಾಸಗಿ ವ್ಯಕ್ತಿಗಳು ಮನಬಂದಂತೆ ರೈತರಿಂದ ಹಣ ವಸೂಲಿಗೆ ಇಳಿದಿದ್ದಾರೆ ಎಂಬ ಆರೋಪವೂ ರೈತರಿಂದ ಕೇಳಿ ಬರುತ್ತಿವೆ. ವಲಯದ ಏವೂರ ಗ್ರಾಮದಲ್ಲಿ ನಡೆಯುತ್ತಿರುವ ಸರ್ವೆ ಕಾರ್ಯದ ಮೇಲೆ ಈ ಆಘಾತಕಾರಿ ಆಡಿಯೊ ಒಂದು ಹೊರಬಿದ್ದಿದ್ದು, ಇದರಲ್ಲಿ ಸರ್ವೆ ಮಾಡುವ ಓರ್ವ ವ್ಯಕ್ತಿ ರೈತರಿಗೆ ಫೋನ್ ಮಾಡಿ, ಗ್ರಾಮ್ಯ ಭಾಷೆಯಲ್ಲಿ ಹಣ ಕೇಳುವ ಧ್ವನಿ ಇದೆ.

ಇದರ ತನಿಖೆ ನಡೆಸಬೇಕು. ರೈತರಿಂದ ಹಣ ಕೀಳುವ ದಂಧೆಗೆ ಇಳಿದಿರುವ ಬೆಳೆ ಸರ್ವೆ ಸಮೀಕ್ಷಕರನ್ನು ಮುಲಾಜಿಲ್ಲದೆ ಕೈಬಿಟ್ಟು ಕಂದಾಯ ಮತ್ತು ಕೃಷಿ ಇಲಾಖೆಯಿಂದಲೆ ಸರ್ವೆ ಕಾರ್ಯ ನಡೆದು ಪಾರದರ್ಶಕ ಸರ್ವೆ ನಡೆಸಿ ರೈತರಿಗೆ ಅನುಕೂಲ ಕಲ್ಪಿಸಬೇಕೆಂದು ಹಲವು ರೈತರ ಒತ್ತಾಯವಾಗಿದೆ.

ರೈತರ ಬಳಿ ಖಾಸಗಿ ಬೆಳೆ ಸಮೀಕ್ಷಾಗಾರರು ಹಣ ತೆಗೆದುಕೊಂಡ ಬಗ್ಗೆ ನನಗೂ ಮಾಹಿತಿ ಬಂದಿದೆ. ಈ ಬಗ್ಗೆ ಇಲ್ಲಿಯವರೆಗೂ ರೈತರು ಲಿಖಿತ ದೂರು ನೀಡಿಲ್ಲ. ದೂರು ಬಂದ ತಕ್ಷಣ ನೋಡಲ್ ಅಧಿಕಾರಿಗಳ ಗಮನಕ್ಕೆ ತಂದು ಅಂಥಾ ಸಮೀಕ್ಷಕರನ್ನು ಕೆಲಸದಿಂದ ತೆಗೆದು ಹಾಕಲು ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದು ಏವೂರ ಗ್ರಾಮ ಆಡಳಿತಾಧಿಕಾರಿ ಸಂಗಮೇಶ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆಂಭಾವಿ: ರಾಯರ 355ನೇ ಆರಾಧನಾ ಮಹೋತ್ಸವ
ಬದ್ದೇಪಲ್ಲಿ: ಮೈಲಾರಲಿಂಗೇಶ್ವರನಿಗೆ ರೈತರು, ಭಕ್ತರಿಂದ ಪಾದಯಾತ್ರೆ