ನಾಡಿನ ರೈತರು ಸಂತೋಷ, ನೆಮ್ಮದಿಯಿಂದ ಜೀವನ ನಡೆಸಲು ಉತ್ತಮ ಮಳೆ ಬೆಳೆ ಸಮೃದ್ಧಿಯಾಗಿ ನಡೆಯಬೇಕು. ರೈತರ ಹೊಲಗಳಲ್ಲಿ ಉತ್ತಮ ಬೆಳೆ ಬಂದು ಅನ್ನದಾತರ ಬದುಕು ಹಸನಾಗಬೇಕು ಎಂಬ ಸಂಕಲ್ಪದೊಂದಿಗೆ ಯುವ ಮುಖಂಡ ನರಸಪ್ಪ ಕವಡೆ ಅವರ ನೇತೃತ್ವದಲ್ಲಿ ಬದ್ದೇಪಲ್ಲಿ ಗ್ರಾಮದಿಂದ ಶ್ರೀ ಕ್ಷೇತ್ರ ಮೈಲಾಪುರದ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನ ತನಕ ನೂರಾರು ರೈತರು ಭಕ್ತಿಭಾವದಿಂದ ಪಾದಯಾತ್ರೆ ಕೈಗೊಂಡರು.

ಕನ್ನಡಪ್ರಭ ವಾರ್ತೆ ಸೈದಾಪುರ

ಸಮೀಪದ ಬದ್ದೇಪಲ್ಲಿ ಗ್ರಾಮದಿಂದ ಆರಂಭಗೊಂಡ ಪಾದಯಾತ್ರೆಯಲ್ಲಿ ಗ್ರಾಮದ ನೂರಾರು ರೈತರು, ಯುವಕರು ಹಾಗೂ ಭಕ್ತರು ಪಾಲ್ಗೊಂಡು ಮೈಲಾರಲಿಂಗೇಶ್ವರನ ನಾಮಸ್ಮರಣೆ ಮಾಡುತ್ತಾ, ಮಳೆ–ಬೆಳೆ ಸಮೃದ್ಧಿಗಾಗಿ ಪ್ರಾರ್ಥಿಸುತ್ತಾ ಮೈಲಾಪುರದತ್ತ ಹೆಜ್ಜೆ ಹಾಕಿ ನಂತರ ಮಾತನಾಡಿದರು .

ಪ್ರಸ್ತುತ ರೈತರು ಅನಾವೃಷ್ಟಿಗಳಂತಹ ಸಮಸ್ಯೆಗಳ ನಡುವೆ ಕೃಷಿ ಉತ್ಪಾದನಾ ವೆಚ್ಚದ ಹೆಚ್ಚಳ ಸಹಿತ ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಸಾಲ ಮಾಡಿ ಭೂಮಿಗೆ ಹಾಕಿದ ಬೀಜ ಸರಿಯಾದ ಮಳೆಯಿಲ್ಲದೆ ಉತ್ತ ಫಸಲು ಬರವ ನಿರೀಕ್ಷೆ ಹುಸಿಯಾಗಿದೆ. ಹೀಗಾಗಿ ರೈತರ ಸಂಕಷ್ಟಗಳಿಗೆ ಪರಿಹಾರ, ರೈತರ ಬದುಕಿನಲ್ಲಿ ನೆಮ್ಮದಿ ಮೂಡಬೇಕು ಹಾಗೂ ಕೃಷಿ ಕ್ಷೇತ್ರ ಮತ್ತಷ್ಟು ಬಲಿಷ್ಠವಾಗಬೇಕು ಎಂಬ ಆಶಯದೊಂದಿಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಲಿಂಗ ಬೀರದೇವರಿಂದ ಪಾದಯಾತ್ರೆಗೆ ಚಾಲನೆ: ತಿಂಥಣಿ ಬ್ರಿಡ್ಜ್ ಕಾಗಿನೆಲೆ ಗುರುಪೀಠದ ಲಿಂಗಬೀರದೇವರು ಪಾದಯಾತ್ರೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ರೈತರು ದೇಶದ ಬೆನ್ನೆಲುಬಾಗಿದ್ದು, ಅವರ ಪರಿಶ್ರಮದಿಂದಲೇ ಸಮಾಜಕ್ಕೆ ಅನ್ನ ದೊರೆಯುತ್ತಿದೆ. ಉತ್ತಮ ಮಳೆಯಾಗಿ ರೈತರ ಹೊಲಗಳಲ್ಲಿ ಸಮೃದ್ಧ ಬೆಳೆ ಬೆಳೆಯಲಿ ಎಂಬ ಉದ್ದೇಶದಿಂದ ಕೈಗೊಂಡಿರುವ ಈ ಪಾದಯಾತ್ರೆ ಭಕ್ತಿಯ ಜತೆಗೆ ರೈತರ ಮೇಲಿನ ಗೌರವದ ಸಂಕೇತವ ಎಂದರು.

ಇದಕ್ಕೂ ಮೊದಲು ಬದ್ದೇಪಲ್ಲಿಯಿಂದ ಆರಂಭವಾದ ಪಾದಯಾತ್ರೆ ವಿವಿಧ ಗ್ರಾಮಗಳ ಮಾರ್ಗದ ಮೂಲಕ ಸಾಗಿತು. ದಾರಿಯುದ್ದಕ್ಕೂ ಭಕ್ತರು ಹಾಗೂ ಗ್ರಾಮಸ್ಥರು ಪಾದಯಾತ್ರೆಯಲ್ಲಿ ಪಾಲ್ಗೊಂಡ ರೈತರಿಗೆ ಪ್ರೋತ್ಸಾಹ ನೀಡಿದರು. ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ರೈತರು ಮೈಲಾಪುರ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಸರ್ವರ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದರು. ಗ್ರಾಮದ ಹಿರಿಯರು, ಯುವಕರು, ರೈತ ಮುಖಂಡರು, ಮಹಿಳೆಯರು ಸೇರಿದಂತೆ ನೂರಾರು ಭಕ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡರು.