ಕರ್ನಾಟಕ ಲೋಕ ಸೇವಾ ಆಯೋಗದ (ಕೆಪಿಎಸ್‌ಸಿ) ಹಗರಣಕ್ಕೆ ಸಂಬಂಧಿಸಿ ಐಎಎಸ್‌ ಅಧಿಕಾರಿ ಹಾಗೂ ಕೆಪಿಎಸ್‌ಸಿಯ ಮಾಜಿ ಪರೀಕ್ಷಾ ನಿಯಂತ್ರಕ ಜ್ಞಾನೇಂದ್ರ ಕುಮಾರ್‌ ಗಂಗ್ವಾರ್‌ ನ್ಯಾಯಾಂಗ ಬಂಧನಕ್ಕೊಳಗಾಗಿ ಜೈಲು ಪಾಲಾಗಿದ್ದಾರೆ.

ಬೆಂಗಳೂರು : ಕರ್ನಾಟಕ ಲೋಕ ಸೇವಾ ಆಯೋಗದ (ಕೆಪಿಎಸ್‌ಸಿ) ಹಗರಣಕ್ಕೆ ಸಂಬಂಧಿಸಿ ಐಎಎಸ್‌ ಅಧಿಕಾರಿ ಹಾಗೂ ಕೆಪಿಎಸ್‌ಸಿಯ ಮಾಜಿ ಪರೀಕ್ಷಾ ನಿಯಂತ್ರಕ ಜ್ಞಾನೇಂದ್ರ ಕುಮಾರ್‌ ಗಂಗ್ವಾರ್‌ ನ್ಯಾಯಾಂಗ ಬಂಧನಕ್ಕೊಳಗಾಗಿ ಜೈಲು ಪಾಲಾಗಿದ್ದಾರೆ.

ಒಎಂಆರ್‌ ಶೀಟ್‌ ತಿದ್ದುಪಡಿಯಲ್ಲಿ ಜ್ಞಾನೇಂದ್ರ ಕುಮಾರ್‌ ಅವರ ಕೈವಾಡವಿರುವ ಶಂಕೆ ಹಿನ್ನೆಲೆಯಲ್ಲಿ ಅವರಿಗೆ ನೋಟಿಸ್‌ ನೀಡಿದ್ದ ಸಿಐಡಿ ಅಧಿಕಾರಿಗಳು ಎರಡು ದಿನಗಳ ಕಾಲ ವಿಚಾರಣೆ ನಡೆಸಿದ್ದರು. ವಿಚಾರಣೆಗೆ ಸಹಕರಿಸದ ಹಿನ್ನೆಲೆಯಲ್ಲಿ ಜ್ಞಾನೇಂದ್ರ ಕುಮಾರ್‌ರನ್ನು ಶನಿವಾರ ರಾತ್ರಿ ಬಂಧಿಸಿದ್ದರು.

ನಂತರ ಭಾನುವಾರ ವೈದ್ಯಕೀಯ ಪರೀಕ್ಷೆ ಮಾಡಿಸಿದ ಅಧಿಕಾರಿಗಳು ಕೋರಮಂಗಲದಲ್ಲಿರುವ ನ್ಯಾಯಾಧೀಶರ ನಿವಾಸಕ್ಕೆ ಕರೆದೊಯ್ದು ಹಾಜರುಪಡಿಸಿದ್ದರು. ಆರೋಪಿ ಜ್ಞಾನೇಂದ್ರ ಕುಮಾರ್‌ನನ್ನು ವಿಚಾರಣೆ ನಡೆಸಿದ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಆದೇಶಿಸಿದರು. ಮತ್ತೆ ಸೋಮವಾರ ಕೋರ್ಟ್‌ ಮುಂದೆ ಹಾಜರುಪಡಿಸಲು ಸೂಚನೆ ನೀಡಿದರು. ಇದೇ ವೇಳೆ ಜ್ಞಾನೇಂದ್ರ ಕುಮಾರ್‌ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.

ಬಿಗಿ ಭದ್ರತೆಯಲ್ಲಿ ಜೈಲಿಗೆ:

ಆರೋಪಿ ಜ್ಞಾನೇಂದ್ರ ಕುಮಾರ್‌ರನ್ನು ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ಪೊಲೀಸ್‌ ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ದು ಬಿಟ್ಟು ಬಂದಿದ್ದಾರೆ. ಜೈಲಿನಲ್ಲಿ ತಡರಾತ್ರಿವರೆಗೂ ಸಪ್ಪೆ ಮೊರೆ ಹಾಕಿ ಕುಳಿತುಕೊಂಡಿದ್ದ ಜ್ಞಾನೇಂದ್ರ ಕುಮಾರ್‌ ನಂತರ ನಿದ್ರೆಗೆ ಜಾರಿದ್ದಾರೆ ಎಂದು ತಿಳಿದು ಬಂದಿದೆ.

ಜ್ಞಾನೇಂದ್ರಗೆ ಗ್ರಿಲ್‌:

ಸಿಐಡಿ ಅಧಿಕಾರಿಗಳು ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಅವರಿಗೆ ಶನಿವಾರ ತಡರಾತ್ರಿವರೆಗೂ ವಿಚಾರಣೆ ನಡೆಸಿದ್ದಾರೆ. ಪರೀಕ್ಷೆಯ ನೋಟಿಫೀಕೇಶನ್ ಆದಾಗಿನಿಂದ ಫಲಿತಾಂಶ ಬರುವವರೆಗೂ ನೀವೇ ಉಸ್ತುವಾರಿಯಾಗಿದ್ದೀರಿ, ನಿಮ್ಮ ಅಧೀನದಲ್ಲೇ ಈ ಎಲ್ಲಾ ಪರೀಕ್ಷಾ ಪ್ರಕ್ರಿಯೆಗಳು ನಡೆದಿದ್ದವು. ಒಎಂಆರ್ ಶೀಟ್‌ಗಳ ತಿದ್ದುಪಡಿ ಮಾಡಿರುವ ಆರೋಪ ಕೇಳಿಬಂದಿದೆ. ಸ್ಟ್ರಾಂಗ್ ರೂಮ್ ನಿಮ್ಮ ಅಧೀನದಲ್ಲೇ ಇರುತ್ತದೆ. ಅದರ ನಿರ್ವಹಣೆಯಲ್ಲಿ ಹೇಗೆ ಲೋಪ ಉಂಟಾಯಿತು? ಅದು ನಿಮ್ಮ ಗಮನಕ್ಕೆ ಬರಲಿಲ್ಲವೇ? ಖಾಸಗಿ ಜಾಗದಲ್ಲಿ ಅಭ್ಯರ್ಥಿಗಳಿಗೆ ತರಬೇತಿ ಕೊಟ್ಟು ಬಳಿಕ ಪರೀಕ್ಷೆ ಬರೆಸಿರುವ ಆರೋಪವಿದೆ. ಪರೀಕ್ಷೆ ಕೇಂದ್ರಗಳಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾಗಳ ದೃಶ್ಯಗಳು ಸಮರ್ಪಕ ನಿರ್ವಹಣೆ ಮಾಡಲಾಗಿಲ್ಲ. ನಿಮ್ಮ ಗಮನಕ್ಕೆ ಬಾರದೆ ಈ ಎಲ್ಲಾ ಅಕ್ರಮ ನಡೆಯಲು ಹೇಗೆ ಸಾಧ್ಯ? ಎಂದು ಸಾಲು ಸಾಲು ಪ್ರಶ್ನೆಗಳನ್ನು ಕೇಳಿದ್ದಾರೆ. ಜ್ಞಾನೇಂದ್ರ ಕುಮಾರ್ ಯಾವುದೇ ಪ್ರಶ್ನೆಗೂ ಸಮರ್ಪಕ ಉತ್ತರ ನೀಡದೆ ಮೌನವಾಗಿದ್ದರು ಎಂದು ಸಿಐಡಿ ಮೂಲಗಳು ತಿಳಿಸಿವೆ.

2016ರ ಬ್ಯಾಚಿನ ಐಎಎಸ್ ಅಧಿಕಾರಿ:

ಜ್ಞಾನೇಂದ್ರ ಕುಮಾರ್ 2016ರ ಬ್ಯಾಚಿನ ಐಎಎಸ್ ಅಧಿಕಾರಿಯಾಗಿದ್ದಾರೆ. ​ಫೆಬ್ರವರಿ 2024 ರಿಂದ ಮಾರ್ಚ್ 2026 ರವರೆಗೆ ಕೆಪಿಎಸ್‌ಸಿಯಲ್ಲಿ ಪರೀಕ್ಷಾ ನಿಯಂತ್ರಕರಾಗಿ ಕಾರ್ಯನಿರ್ವಹಣೆ ಮಾಡಿದ್ದಾರೆ. ಕಳೆದ ಮಾರ್ಚ್‌ನಲ್ಲಿ ವರ್ಗಾವಣೆಗೊಂಡಿದ್ದರು. ​ಪ್ರಸ್ತುತ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಇಲಾಖೆ (ಎಂಎಸ್‌ಎಂಇ) ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತನಿಖೆಯಲ್ಲಿ ಸಂಗ್ರಹವಾದ ಸಾಕ್ಷ್ಯಾಧಾರಗಳ ಅನುಸಾರ ಜ್ಞಾನೇಂದ್ರ ಕುಮಾರ್‌ ಅಪರಾಧಿಕ ಕೃತ್ಯಗಳಲ್ಲಿ ಭಾಗವಹಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಅದರ ಆಧಾರದ ಮೇಲೆ ಅವರನ್ನು ಬಂಧನ ಮಾಡಲಾಗಿದೆ.

ಕೆಲ ಅಭ್ಯರ್ಥಿಗಳ ವಿಚಾರಣೆ:

ಕೆಪಿಎಸ್‌ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿ ಅನುಮಾನವಿರುವ ಕೆಲ ಅಭ್ಯರ್ಥಿಗಳನ್ನು ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಒಎಂಆರ್‌ ಶೀಟ್‌ಗಳನ್ನು ಸಿಐಡಿ ಅಧಿಕಾರಿಗಳು ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದರು. ಎಫ್‌ಎಸ್‌ಎಲ್‌ ವರದಿಯಲ್ಲಿ ಒಎಂಆರ್‌ ಶೀಟ್‌ಗಳಲ್ಲಿ ಅಕ್ರಮ ನಡೆದಿರುವುದು ಪತ್ತೆಯಾಗಿದೆ. ಹೀಗಾಗಿ ಅನುಮಾನ ಇರುವ ಅಭ್ಯರ್ಥಿಗಳನ್ನು ಶನಿವಾರ ತಡರಾತ್ರಿವರೆಗೂ ವಿಚಾರಣೆ ನಡೆಸಲಾಗಿದೆ.

ನೀವು ದುಡ್ಡು ಕೊಟ್ಟಿದ್ದೀರಾ? ಕೊಟ್ಟಿದ್ದರೆ ಯಾರಿಗೆ ಕೊಟ್ಟಿದ್ದೀರಾ? ಯಾರಿಗಾದರೂ ಹಣ ಕೊಟ್ಟಿರುವ ಮಾಹಿತಿ ಇದೆಯಾ? ಎಂದು ವಿಚಾರಣೆ ನಡೆಸಿದ್ದು, ಅಧಿಕಾರಿಗಳ ವಿಚಾರಣೆಗೆ ಅಭ್ಯರ್ಥಿಗಳು ಬೆಸ್ತು ಬಿದ್ದಿದ್ದಾರೆ ಎನ್ನಲಾಗಿದೆ.

ಮಧ್ಯವರ್ತಿ ವಿಚಾರಣೆ:

ನೇಮಕಾತಿ ಅಕ್ರಮ ಪ್ರಕರಣದ ಸಂಬಂಧ ಮಧ್ಯವರ್ತಿಯೊಬ್ಬನನ್ನು ವಶಕ್ಕೆ ಪಡೆದಿರುವ ಸಿಐಡಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಹಲವು ಮಧ್ಯವರ್ತಿಗಳು ಭಾಗಿಯಾಗಿರುವ ಶಂಕೆ ಇದ್ದು, ಅವರ ಬೆನ್ನು ಬಿದ್ದಿರುವ ಸಿಐಡಿ ಅಧಿಕಾರಿಗಳು ಸದ್ಯ ಓರ್ವನ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ.

ನಮ್ಮಲ್ಲಿ ಮಾತ್ರ!

ಕೆಪಿಎಸ್ಸಿ ಪರೀಕ್ಷಾ ಅಕ್ರಮ ಸಂಬಂಧ ಐಎಎಸ್‌ ಅಧಿಕಾರಿ ಜ್ಞಾನೇಂದ್ರ ಅವರನ್ನು ಸಿಐಡಿ ಬಂಧಿಸಿರುವ ಬಗ್ಗೆ ‘ಕನ್ನಡಪ್ರಭ’ ಮಾತ್ರ ನಿನ್ನೆ ವರದಿ ಮಾಡಿತ್ತು.