ಸಂಡೂರು: ತಾಲೂಕಿನಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಕೃಷಿ ಭೂಮಿ ಇಲ್ಲ. ಇರುವ ಭೂಮಿಯನ್ನು ಸದುಪಯೋಗ ಪಡಿಸಿಕೊಳ್ಳಬೇಕಿದೆ. ರೈತರು ಏಕ ಬೆಳೆ ಪದ್ಧತಿಯ ಬದಲು ಬಹು ಬೆಳೆ, ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಸಂಸದ ಈ. ತುಕಾರಾಂ ತಿಳಿಸಿದರು.ತಾಲೂಕಿನ ತೋರಣಗಲ್ಲು ಗ್ರಾಮದಲ್ಲಿ ಮಂಗಳವಾರ ತಾಲೂಕು ಆಡಳಿತ, ತಾಪಂ, ಕೃಷಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರೈತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜವಾಹರಲಾಲ್ ನೆಹರು, ಇಂದಿರಾಗಾಂಧಿ, ರಾಜೀವ್‌ಗಾಂಧಿಯವರ ಅವಧಿಯಲ್ಲಿ ನೀರಾವರಿಗಾಗಿ ಹಲವು ಅಣೆಕಟ್ಟುಗಳನ್ನು ಕಟ್ಟಲಾಯಿತು. ಪಿ.ವಿ. ನರಸಿಂಹರಾವ್ ಅವಧಿಯಲ್ಲಿ ನೂತನ ಆರ್ಥಿಕ ನೀತಿಯನ್ನು ಅನುಸರಿಸಲಾಯಿತು. ಮಹಮೋಹನ್ ಸಿಂಗ್ ಅವರ ಆಡಳಿತಾವಧಿಯಲ್ಲಿ ₹೭೨ ಸಾವಿರ ಕೋಟಿ ರೈತರ ಸಾಲವನ್ನು ಮನ್ನಾ ಮಾಡಲಾಯಿತು. ನರೇಗಾ ಯೋಜನೆಯನ್ನು ಜಾರಿಗೆ ತರಲಾಯಿತು ಎಂದರು.
ರೈತ ಸಂಪರ್ಕ ಕೇಂದ್ರದ ಉದ್ಘಾಟನೆ:
ಸಂಸದರು ಜಿಲ್ಲಾ ಖನಿಜ ಪ್ರತಿಷ್ಠಾನದ ಅನುದಾನ ₹೫೦ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ತೋರಣಗಲ್ಲು ರೈತ ಸಂಪರ್ಕ ಕೇಂದ್ರದ ಕಟ್ಟಡ, ಆರ್‌ಐಡಿಎಫ್ ಅನುದಾನ ₹೨೫ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ರೈತ ಸಂಪರ್ಕ ಕೇಂದ್ರದ ಗೋಡೌನ್ ನ್ನು ಉದ್ಘಾಟಿಸಿದ್ದಲ್ಲದೆ, ಸಂಸದರ ಅನುದಾನ ₹೨.೫ ಲಕ್ಷ ವೆಚ್ಚದಲ್ಲಿ ರೈತರ ಮಾಹಿತಿ ಮತ್ತು ಸಂವಹನ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಕೃಷಿ ಇಲಾಖೆಯ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಕೃಷಿ ಪರಿಕರಗಳನ್ನು ವಿತರಿಸಿದರು.ಶ್ರೇಷ್ಠ ಕೃಷಿಕ ಪ್ರಶಸ್ತಿ ಪ್ರದಾನ: ತಾಲೂಕಿನ ಶಿವಕುಮಾರ್, ಮೂಲಿಮನೆ ತಿಪ್ಪೇಸ್ವಾಮಿ, ಚೌಡಯ್ಯ, ಬಾಬು ಅವರಿಗೆ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಉಪಾಧ್ಯಕ್ಷ ಎಚ್.ಲಕ್ಷ್ಮಣ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ರೈತ ವಿಶ್ವೇಶ್ವರ ಸಜ್ಜನ್ ಹಾಗೂ ಸಹಾಯಕ ಕೃಷಿ ನಿರ್ದೇಶಕ ಮಹಮ್ಮದ್ ಆಶ್ರಫ್ ಕೆ. ಮಾತನಾಡಿದರು. ಕೃಷಿ ಅಧಿಕಾರಿ ರಮೇಶ್ ಸ್ವಾಗತಿಸಿದರು. ತೋರಣಗಲ್ಲು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಸಂತೋಷ್ ಕೆ.ಆರ್ ಕಾರ್ಯಕ್ರಮ ನಿರೂಪಿಸಿದರು.ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಎಸ್.ಎಲ್ ಸ್ವಾಮಿ, ಜಂಟಿ ಕೃಷಿ ನಿರ್ದೇಶಕ ಡಾ. ಸೋಮಸುಂದರ್ ಕೆ, ತಹಶೀಲ್ದಾರ್ ಜಿ. ಅನಿಲ್‌ಕುಮಾರ್, ತಾಲ್ಲೂಕು ಪಂಚಾಯ್ತಿ ಇಒ ಮಡಗಿನ ಬಸಪ್ಪ, ಪುರಸಭೆ ಅಧ್ಯಕ್ಷ ಕಲ್ಗುಡೆಪ್ಪ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಕೆ. ಜಾಫರ್‌ಸಾಬ್, ಉಪಾಧ್ಯಕ್ಷ ಮರಿ ಚಿತ್ತಪ್ಪ, ಜಿಲ್ಲಾ ಕೃಷಿಕ ಸಮಾಜದ ಉಪಾಧ್ಯಕ್ಷೆ ಎಸ್.ಕೆ. ವಿಶಾಲಾಕ್ಷಿ, ಮುಖಂಡ ಜಿ. ಏಕಾಂಬ್ರಪ್ಪ, ಕೃಷಿ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.