ಬಾರದ ಮಳೆಗೆ ಬಾಡುತ್ತಿವೆ ಬೆಳೆ

KannadaprabhaNewsNetwork |  
Published : Jun 21, 2026, 02:15 AM IST
ಯಲಬುರ್ಗಾ ತಾಲೂಕಿನ ದಮ್ಮೂರು ರೈತರ ಜಮೀನಲ್ಲಿ ಬಿತ್ತನೆಗೊಂಡ ಮೆಕ್ಕೆಜೋಳ ಬೆಳೆ ಮಳೆ ಇಲ್ಲದೆ ಬಾಡಿರುವುದು. | Kannada Prabha

ಸಾರಾಂಶ

ಸರಿಯಾದ ವೇಳೆಗೆ ಮಳೆ ಸುರಿದು ಈಗಾಗಲೇ ಹಚ್ಚ ಹಸುರಿನಿಂದ ಕಂಗೊಳಿಸಬೇಕಿದ್ದ ಬೆಳೆಗಳು ಈಗ ಮುಂಗಾರು ಮಳೆ ಬಾರದ ಕಾರಣ ಬಿಸಿಲಿನ ಝಳಕ್ಕೆ ಬಾಡಲಾರಂಭಿಸಿದ್ದು, ರೈತರಲ್ಲಿ ಆತಂಕ ಮನೆ ಮಾಡಿದೆ.

ಪಾಲಾಕ್ಷ ಬಿ.ತಿಪ್ಪಳ್ಳಿ ಯಲಬುರ್ಗಾ

ಮುಂಗಾರು ಆರಂಭದಲ್ಲಿ ಸುರಿದ ಮಳೆಯಿಂದ ಉತ್ಸಾಹಗೊಂಡ ರೈತರು ವಿವಿಧ ಬೀಜಗಳ ಬಿತ್ತನೆಯಲ್ಲಿ ತೊಡಗಿದ್ದರು. ಆದರೆ ಬಿತ್ತನೆಗೊಂಡ ಬಳಿಕ ಮಳೆ ಕೈಕೊಟ್ಟ ಪರಿಣಾಮ ಈಗ ಬೆಳೆಗಳು ಬಾಡಲಾರಂಭಿಸಿವೆ.

ಇದರಿಂದ ರೈತರು ಸಂಕಷ್ಟ ಎದುರಿಸುವಂತಾಗಿದೆ.

ಸರಿಯಾದ ವೇಳೆಗೆ ಮಳೆ ಸುರಿದು ಈಗಾಗಲೇ ಹಚ್ಚ ಹಸುರಿನಿಂದ ಕಂಗೊಳಿಸಬೇಕಿದ್ದ ಬೆಳೆಗಳು ಈಗ ಮುಂಗಾರು ಮಳೆ ಬಾರದ ಕಾರಣ ಬಿಸಿಲಿನ ಝಳಕ್ಕೆ ಬಾಡಲಾರಂಭಿಸಿದ್ದು, ರೈತರಲ್ಲಿ ಆತಂಕ ಮನೆ ಮಾಡಿದೆ.

ಬಿತ್ತನೆ ವಿವರ: ಯಲಬುರ್ಗಾ ತಾಲೂಕಿನಲ್ಲಿ ೨೦೨೬-೨೭ನೇ ಪ್ರಸಕ್ತ ಸಾಲಿನಲ್ಲಿ ೭೦೯೫೧ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದ್ದು, ಈಗಾಗಲೇ ೨೮೭೯೦ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಕುಕನೂರು ತಾಲೂಕಿನಲ್ಲಿ ೫೦೩೪೬ ಹೆಕ್ಟೇರ್ ಬಿತ್ತನೆ ಗುರಿ ಹೊಂದಿದ್ದು, ೨೫೪೧೦ ಹೆಕ್ಟೇರ್ ಬಿತ್ತನೆ ಸಾಧನೆಯಾಗಿದೆ. ಕ್ಷೇತ್ರದಲ್ಲಿ ಭೂಮಿಯ ತೇವಾಂಶ ಕೊರತೆಯಿಂದ ಬಿತ್ತನೆ ಕಾರ್ಯ ಸಂಪೂರ್ಣ ಸ್ಥಗಿತಗೊಂಡಿದೆ.

ಮಳೆ ಮಾಹಿತಿ:ಯಲಬುರ್ಗಾ ತಾಲೂಕಿನಲ್ಲಿ ಜೂನ್ ವಾಡಿಕೆ ಮಳೆ ೫೩.೪ಮಿಮೀ ಇದ್ದು, ೪೨ ಮಿಮೀ ಮಳೆ ಸುರಿದಿದೆ‌. ಕುಕನೂರು ತಾಲೂಕಿನಲ್ಲಿ ೬೫.೯ ಮಿಮೀ ವಾಡಿಕೆ ಮಳೆಯಲ್ಲಿ ೭೦.೧ ಮಿಮೀ ಮಳೆ ಸುರಿದಿದೆ.

ಬಿತ್ತನೆ ಬೀಜ ದಾಸ್ತಾನು:ಮುಂಗಾರು ಹಂಗಾಮ ಪ್ರಾರಂಭದ ದಿನಗಳಲ್ಲಿ ಕೃಷಿ ಇಲಾಖೆಯಿಂದ ರೈತರಿಗೆ ಅಗತ್ಯ ಬಿತ್ತನೆ ಬೀಜ ಸಂಗ್ರಹ ಮಾಡಲಾಗಿತ್ತು. ಮೆಕ್ಕೆಜೋಳ-೨೨೪೬ ಕ್ವಿಂಟಲ್ ದಾಸ್ತಾನು ಮಾಡಲಾಗಿತ್ತು. ಅದರಲ್ಲಿ ೧೪೮೪ ಕ್ವಿಂಟಲ್ ಮಾರಾಟ ಆಗಿದೆ. ೭೬೨ ಕ್ವಿಂಟಲ್ ಉಳಿದಿದೆ. ತೊಗರಿ ೩೪೨ ಕ್ವಿಂಟಲ್‌ನಲ್ಲಿ ೨೧೩ ಕ್ವಿಂಟಲ್ ವಿತರಣೆ ಆಗಿದೆ. ೧೨೯ ಉಳಿದಿದೆ. ಸೂರ್ಯಕಾಂತಿ ೩೬ ಕ್ವಿಂಟಲ್‌ನಲ್ಲಿ ೨೧ ಕ್ವಿಂಟಲ್ ಮಾರಾಟವಾಗಿದೆ. ೧೫ ಕ್ವಿಂಟಲ್ ಉಳಿದಿದೆ. ಹೆಸರು ೧೫೦ ಕ್ವಿಂಟಲ್‌ನಲ್ಲಿ ೬೨ ಕ್ವಿಂಟಲ್ ವಿತರಣೆ ಅಗಿದ್ದು, ೮೮ ಕ್ವಿಂಟಲ್ ಉಳಿದಿದೆ. ಸಜ್ಜೆ ೧೭೪ ಕ್ವಿಂಟಲ್ ದಾಸ್ತಾನು ಮಾಡಲಾಗಿದ್ದು, ೧೦೦ ಕ್ವಿಂಟಲ್ ಮಾರಾಟವಾಗಿದೆ. ೭೪ ಕ್ವಿಂಟಲ್ ಉಳಿದಿದೆ.

ಆಕಾಶದತ್ತ ಮುಖ ಮಾಡಿದ ರೈತ:ಜೂನ್-ಜುಲೈ ತಿಂಗಳಲ್ಲಿ ಎಡಬಿಡದೆ ಸುರಿಯಬೇಕಿದ್ದ ಮಳೆ ಬಾರದೆ ನಾನಾ ಬೆಳೆಗಳು ಬಿಸಿಲಿನ ಜಳಕ್ಕೆ ಬಾಡುತ್ತಿವೆ. ಇನ್ನೊಂದು ವಾರದೊಳಗೆ ಮಳೆಯಾಗದಿದ್ದರೆ ಬಿತ್ತನೆಗೊಂಡ ಬೆಳೆಗಳು ಒಣಗುವ ಸಾಧ್ಯತೆ ಇದೆ.

ಬಿಸಿಲಿನ ನಡುವೆಯೂ ಅಲ್ಲಲ್ಲಿ ಮೋಡ ಕವಿದ ವಾತಾವರಣ ಇರುವುದರಿಂದ ಸಹನೆ ಕಳೆದುಕೊಳ್ಳದ ರೈತರು ಮಳೆ ನಿರೀಕ್ಷೆಯಲ್ಲಿದ್ದು, ಸಾಲ ಮಾಡಿ ಭೂಮಿಗೆ ಬೀಜ ಬಿತ್ತಿದ್ದವರು ಆತಂಕದಿಂದ ತಲೆ ಮೇಲೆ ಕೈಹೊತ್ತು ಆಕಾಶ ನೋಡುವಂತಾಗಿದೆ.

ಜೂನ್ ತಿಂಗಳಲ್ಲಿ ಮುಂಗಾರು ಮಳೆ ಉತ್ತಮವಾಗಿ ಸುರಿದಿದ್ದು, ರೈತರು ಈಗಾಗಲೇ ವಿವಿಧ ಬೀಜಗಳ ಬಿತ್ತನೆ ಮಾಡಿದ್ದಾರೆ. ಹವಾಮಾನ ಇಲಾಖೆ ವರದಿ ಪ್ರಕಾರ ಮುಂದಿನ ವಾರದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಮಳೆ ಇಲ್ಲದೆ ತೇವಾಂಶ ಕೊರತೆಯಿಂದ ಬಿತ್ತನೆಗೊಂಡ ಬೆಳೆಗಳು ಕುಂಠಿತವಾಗಲಿವೆ ಎಂದು ಯಲಬುರ್ಗಾ ಸಹಾಯಕ ಕೃಷಿ ನಿರ್ದೇಶಕ ಪ್ರಮೋದ ತುಂಬಳ ತಿಳಿಸಿದ್ದಾರೆ.

ಮುಂಗಾರು ಮಳೆ ನಂಬಿಕೊಂಡು ರೈತರು ಮೆಕ್ಕೆಜೋಳ,ಸಜ್ಜೆ, ಹೆಸರು, ತೊಗರಿ, ಸೂರ್ಯಕಾಂತಿ ಮತ್ತು ಅಲಸಂಧಿ ಸೇರಿದಂತೆ ನಾನಾ ಬೀಜ ಬಿತ್ತನೆ ಮಾಡಿದ್ದು, ಮಳೆ ಕೊರತೆಯಿಂದ ಬೆಳೆ ಬಾಡುತ್ತಿವೆ. ಇದರಿಂದ ಬೆಳೆಗಳು ಹಾನಿಯಾಗುವ ಸಾಧ್ಯತೆ ಇದ್ದು, ರೈತರಿಗೆ ಸರ್ಕಾರ ಪರಿಹಾರ ನೀಡಬೇಕು ಎಂದು ದಮ್ಮೂರ ಗ್ರಾಮದ ಮುಖಂಡ ಭೀಮಪ್ಪ ಜರಕುಂಟಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ ಅವಶ್ಯ
ಅರ್ಧಕ್ಕೆ ನಿಂತ ಶಾಲಾ ಕಟ್ಟಡ ಪೂರ್ಣಗೊಳಿಸಿ