ಅತಿಯಾದ ಮಳೆಯಿಂದ ಬೆಳೆಗಳು ಹಾಳು, ಸಮೀಕ್ಷೆಗೆ ರೈತರ ಒತ್ತಾಯ

KannadaprabhaNewsNetwork | Published : Oct 19, 2024 12:24 AM

ಸಾರಾಂಶ

ಮೆಣಸಿನಕಾಯಿ ಗಿಡಗಳು ಅತಿಯಾದ ತೇವಾಂಶದಿಂದ ಒಣಗುತ್ತಿವೆ

ಲಕ್ಷ್ಮೇಶ್ವರ: ತಾಲೂಕಿನಲ್ಲಿ ಕಳೆದ ಎಂಟತ್ತು ದಿನಗಳಿಂದ ವಿಪರೀತವಾಗಿ ಮಳೆ ಸುರಿಯುತ್ತಿದ್ದು, ರೈತರ ಬೆಳೆಗಳು ಅತಿಯಾದ ತೇವಾಂಶದಿಂದ ಕೊಳೆಯುತ್ತಿವೆ. ಆದ್ದರಿಂದ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಬೆಳೆ ಸಮೀಕ್ಷೆ ಮಾಡಿ ರೈತರಿಗೆ ಯೋಗ್ಯ ಬೆಳೆ ಪರಿಹಾರ ನೀಡಬೇಕು ಎಂದು ಭಾರತೀಯ ಕಿಸಾನ್ ಸಂಘದ ಹಾಗೂ ಕಿಸಾನ್ ಸಮಾಜ ಸದಸ್ಯರು ಗ್ರೇಡ್ -2 ತಹಸೀಲ್ದಾರ್ ಮಂಜುನಾಥ ಅಮಾಸಿ ಅವರಿಗೆ ಮನವಿ ನೀಡಿದರು.

ಶುಕ್ರವಾರ ಪಟ್ಟಣದ ತಹಸೀಲ್ದಾರ್ ಕಚೇರಿಗೆ ಬಂದು ಮನವಿ ಪತ್ರ ಸಲ್ಲಿಸಿದರು. ಈ ವೇಳೆ ಚನ್ನಪ್ಪ ಷಣ್ಮುಖಿ ಹಾಗೂ ಟಾಕಪ್ಪ ಸಾತಪುತೆ ಮಾತನಾಡಿ, ಲಕ್ಷ್ಮೇಶ್ವರ ತಾಲೂಕಿನಲ್ಲಿ ಕಳೆದ 8-10 ದಿನಗಳಿಂದ ಸುರಿಯುತ್ತಿರುವ ಮಳೆಗೆ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಗೋವಿನ ಜೋಳ, ಬಿಟಿ ಹತ್ತಿ, ಹಬ್ಬು ಶೇಂಗಾ, ಈರುಳ್ಳಿ, ಮೆಣಸಿನಕಾಯಿ ಬೆಳೆಗಳು ಕೊಳೆತು ಹೋಗುತ್ತಿವೆ. ಗೋವಿನ ಜೋಳದ ಬೆಳೆ ತೆನೆಯಲ್ಲಿ ಮೊಳಕೆ ಒಡೆದಿದೆ. ಮೆಣಸಿನಕಾಯಿ ಗಿಡಗಳು ಅತಿಯಾದ ತೇವಾಂಶದಿಂದ ಒಣಗುತ್ತಿವೆ.

ಲಕ್ಷಾಂತರ ರೂಪಾಯಿ ಖರ್ಚು ಮಾಡಿದ ಬೆಳೆದು ಬೆಳೆಗಳು ಕೊಯ್ಲಿಗೆ ಬಂದಿರುವ ಹೊತ್ತಿನಲ್ಲಿ ಮಳೆ ಸುರಿಯುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಆದ್ದರಿಂದ ರೈತರನ್ನು ಈ ಸಂಕಷ್ಟದಿಂದ ಪಾರು ಮಾಡಲು ಸರ್ಕಾರ ಹಾಗೂ ಕೃಷಿಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಶೀಘ್ರದಲ್ಲಿ ಬೆಳೆ‌ ಸಮೀಕ್ಷೆ ಮಾಡಿ ರೈತರಿಗೆ ಆಗಿರುವ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು. ಬೆಳೆ ವಿಮೆಯ ಮಧ್ಯಂತರ ಪರಿಹಾರ ನೀಡಬೇಕು. ಅಲ್ಲದೆ, ಹಿಂಗಾರು ಬೆಳೆಗಳಾದ ಕಡಲೆ ಹಾಗೂ ಜೋಳದ ಬೆಳೆ ಬಿತ್ತನೆ ಮಾಡಿದ್ದು ಅತಿಯಾದ ಮಳೆಗೆ ಮೊಳಕೆಯೊಡೆಯುವ ಮೊದಲೆ ಕೊಳೆತು ಹೋಗಿವೆ. ಅಂತಹ ರೈತರಿಗೆ ಪರಿಹಾರ ನೀಡುವ ಕಾರ್ಯವನ್ನು ಸರ್ಕಾರ ಮಾಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ಹನುಮಂತಪ್ಪ ಚಿಂಚಲಿ, ಲಕ್ಷ್ಮಣ್ ಲಮಾಣಿ, ರಾಮರೆಡ್ಡಿ ಹೊಂಬಳ, ಶಿವಪುತ್ರಪ್ಪ ತಾರಿಕೊಪ್ಪ, ಶ್ರೀನಿವಾಸ ಯರಗುಪ್ಪಿ, ವೀರಪ್ಪ ನಾಯ್ಕರ, ಅಶೋಕ ಕುರಿ, ಮಂಜುನಾಥ ಕೊಟಗಿ, ಫಕ್ಕೀರೇಶ ಜಂತ್ಲಿ, ಚನ್ನಬಸಪ್ಪ ಲಗಳಿ, ನಾರಾಯಣ ಬಡಿಗೇರ, ನಾಗಪ್ಪ ಹೊಸಮನಿ ಸೇರಿದಂತೆ ಅನೇಕರು ಇದ್ದರು.

Share this article