ಕುಷ್ಟಗಿ:
ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಬುಧವಾರ ರಾತ್ರಿ ಹಾಗೂ ಗುರುವಾರ ಬೆಳಗಿನ ಜಾವ ಸುರಿದ ಭಾರಿ ಮಳೆಗೆ ಅಪಾರ ಹಾನಿಯಾಗಿದೆ. ಕೆಲವು ಮನೆಗಳು ಕುಸಿದಿದ್ದರೆ, ಹತ್ತಿ, ದಾಳಿಂಬೆ ಬೆಳೆ ನೀರುಪಾಲಾಗಿದೆ.ಎರಡು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹಳ್ಳದ ದಂಡೆಯ ಹತ್ತಿರ ಇರುವ ಜಮೀನಿನಲ್ಲಿರುವ ದಾಳಿಂಬೆ, ಹತ್ತಿ, ತೊಗರಿ, ಸಜ್ಜೆ ಇತರ ಬೆಳೆಗಳು ಜಲಾವೃತವಾಗಿವೆ.
ಎಲ್ಲೆಲ್ಲಿ ಹಾನಿ?:ಕುಷ್ಟಗಿ ತಾಲೂಕಿನ ಟಕ್ಕಳಕಿ ಗ್ರಾಮದ ಶರಣಮ್ಮ ಭೀಮನಗೌಡ್ರ ಅವರ ಮೂರು ಎಕರೆ ದಾಳಿಂಬೆ, ಒಂದು ಎಕರೆ ಹತ್ತಿ, ಸುರೇಶ ಭೀಮನಗೌಡ್ರ ಅವರ ಮೂರು ಎಕರೆ ದಾಳಿಂಬೆ ಹಾಗೂ ಒಂದು ಎಕರೆ ಹತ್ತಿ, ಮಾಟೂರು ಗ್ರಾಮದ ಮಹಾಂತೇಶ ಮೇಟಿ ಅವರ ಮೂರು ಎಕರೆಯ ಹತ್ತಿ, ಬೆಳೆ ಹಾಗೂ ಬಾವಿಯಲ್ಲಿನ ಮೂರು ಪಂಪ್‌ಸೆಟ್‌ಗಳು ಹಾಳಾಗಿವೆ. ಮಣ್ಣಕಲಕೇರಿ ಗ್ರಾಮದ ಈರಪ್ಪ ಬೆಳಗಲ್, ಮಾಳಮ್ಮ ಬೆಳಗಲ್ ಅವರಿಗೆ ಸೇರಿದ 5 ಎಕರೆಯ ಜಮೀನಿನಲ್ಲಿ ಬೆಳೆಯಲಾದ ಹತ್ತಿ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ವಣಗೇರಿ, ಬ್ಯಾಲಿಹಾಳ ಸೇರಿದಂತೆ ತಾಲೂಕಿನ ಅನೇಕ ಗ್ರಾಮಗಳಲ್ಲಿನ ಜಮೀನುಗಳಲ್ಲಿ ನೀರು ಹೊಕ್ಕು ನೂರಾರು ಎಕರೆಯ ಬೆಳೆಗಳು ಹಾಳಾಗಿದೆ.
ಹತ್ತಕ್ಕೂ ಅಧಿಕ ಮನೆಗಳಿಗೆ ಹಾನಿ:ಕುಷ್ಟಗಿ ತಾಲೂಕಿನ ಹಿರೆಗೊಣ್ಣಾಗರ, ಯಲಬುರ್ತಿ, ಹುಲಗೇರಿ ಗ್ರಾಮಗಳಲ್ಲಿ ಹತ್ತಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆಕಳು ಸಾವು:ತಾಲೂಕಿನ ಮುದುಟಗಿ ಸೀಮಾದ ಜಮೀನಿನಲ್ಲಿ ಕಟ್ಟಲಾಗಿದ್ದ ಹುಲಿಗೆಮ್ಮ ಯಮನಪ್ಪ ಅವರಿಗೆ ಸೇರಿರುವ ಆಕಳೊಂದು ಸಿಡಿಲಿಗೆ ಮೃತಪಟ್ಟಿದೆ.
ಸೇತುವೆಗಳು ಜಲಾವೃತ:ಕುಷ್ಟಗಿ ತಾಲೂಕಿನ ಮದಲಗಟ್ಟಿ ಕೆರೆ ತುಂಬಿ ಕೋಡಿ ಹರಿದಿದೆ. ಕೆರೆಯ ನೀರು ಬಿಜಕಲ್, ಹೆಸರೂರು, ಜಾಲಿಹಾಳ, ರ್ಯಾವಣಕಿ, ಬಳೂಟಗಿ ಸೇರಿದಂತೆ ಅನೇಕ ಹಳ್ಳಿಗಳಲ್ಲಿ ಸೇತುವೆ ಮೇಲ್ಬಾಗದಲ್ಲಿ ನೀರು ಹರಿಯಿತು. ಇದರಿಂದಾಗಿ ಮಧ್ಯಾಹ್ನ ಸಮಯದ ವರೆಗೆ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಆನಂತರದಲ್ಲಿ ದೊಡ್ಡ ವಾಹನಗಳು ಸಂಚಾರ ಮಾಡಿದವು. ಬೈಕ್ ಸವಾರರಿಗೆ ಕಷ್ಟವಾಯಿತು. ಶಾಲಾ, ಕಾಲೇಜು ವಿದ್ಯಾರ್ಥಿಗಳು ಶಾಲೆಗೆ ತೆರಳಲು ಪರದಾಡಿದರು.
ಹಾನಿ ಸ್ಥಳಕ್ಕೆ ಶಾಸಕ ಪಾಟೀಲ ಭೇಟಿ:ಕುಷ್ಟಗಿ ತಾಲೂಕಿನ ಟಕ್ಕಳಕಿ ಗ್ರಾಮದ ರೈತ ಸುರೇಶ ಭೀಮಗೌಡ್ರ ಜಮಿನಿನಲ್ಲಿ ಬೆಳೆಯಲಾದ ದಾಳಿಂಬೆ ಬೆಳೆ ಹಾನಿಯಾಗಿರುವ ಹಿನ್ನೆಲೆಯಲ್ಲಿ ಶಾಸಕ ದೊಡ್ಡನಗೌಡ ಪಾಟೀಲ, ತಹಸೀಲ್ದಾರ್ ಅಶೋಕ ಶಿಗ್ಗಾಂವಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ ಕಾತರಕಿ, ತಾಪಂ ಇಒ ಪಂಪಾಪತಿ ಹಿರೇಮಠ ಭೇಟಿ ನೀಡಿದರು.
ಆನಂತರ ಶಾಸಕ ದೊಡ್ಡನಗೌಡ ಪಾಟೀಲ ರೈತರಿಗೆ ಧೈರ್ಯ ತುಂಬಿದರು. ತಾಲೂಕಿನಲ್ಲಿ ಸುರಿದ ಮಳೆಯಿಂದಾಗಿ ಹಾನಿಯಾದ ಮನೆಗಳಿಗೆ ಹಾಗೂ ಬೆಳೆಗಳಿಗೆ ಸೂಕ್ತ ಪರಿಹಾರ ಕೊಡಿಸುವ ಕೆಲಸವನ್ನು ತ್ವರಿತವಾಗಿ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ನಮ್ಮ ಜಮೀನಿನಲ್ಲಿ ಸುಮಾರು 2000 ದಾಳಿಂಬೆ ಗಿಡಗಳನ್ನು ಹಾಕಿದ್ದೇವೆ. ಈ ವಾರದಲ್ಲಿ ಕಟಾವು ಮಾಡಬೇಕಿತ್ತು. ಮದಲಗಟ್ಟಿ ಕೆರೆಯ ನೀರು ಹರಿದು ಬಂದ ಹಿನ್ನೆಲೆಯಲ್ಲಿ ದಾಳಿಂಬೆ ತೋಟದೊಳಗೆ ನೀರು ಹೊಕ್ಕಿದ್ದು, ಸುಮಾರು ₹10 ಲಕ್ಷಕ್ಕೂ ಅಧಿಕ ಹಾನಿಯಾಗಿದೆ. ಸೂಕ್ತ ಪರಿಹಾರ ಕೊಡಬೇಕು.ಸುರೇಶ ಭೀಮನಗೌಡ್ರ ದಾಳಿಂಬೆ ಬೆಳೆದ ರೈತ ಟಕ್ಕಳಕಿಐದು ಎಕರೆ ಜಮೀನಿನಲ್ಲಿ ಬೆಳೆಯಲಾದ ಹತ್ತಿಯ ಹೊಲಕ್ಕೆ ನೀರು ಹೊಕ್ಕಿದ್ದು, ಎಲ್ಲ ಬೆಳೆ ಹಾಳು ಮಾಡಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ನಮಗೆ ದಿಕ್ಕೇ ತೋಚದಂತಾಗಿದೆ.
ಮಾಳಮ್ಮ ಬೆಳಗಲ್ ಮಣ್ಣ ಕಲಕೇರಿ ರೈತ ಮಹಿಳೆ