ಮುಂಡಗೋಡದ ಮಳಗಿ ಗ್ರಾಮದಲ್ಲಿ ಬಸ್ ನಿಲ್ದಾಣಕ್ಕೆ ಬೇಲಿ ಹಾಕಿದ ದಾನಿ

KannadaprabhaNewsNetwork |  
Published : Aug 08, 2025, 01:04 AM IST
ಮುಂಡಗೋಡ: ಬಸ್ ನಿಲ್ದಾಣ ಸಾರ್ವಜನಿಕರಿಗೆ ಸಮರ್ಪಕ ಉಪಯೋಗವಾಗದ ಹಿನ್ನೆಲೆಯಲ್ಲಿ ನಿಲ್ದಾಣ ನಿರ್ಮಾಣಕ್ಕೆ ಭೂಮಿ ದಾನ ಮಾಡಿದ್ದ ವ್ಯಕ್ತಿ ಕೃಷ್ಣಮೂರ್ತಿ ಕಲ್ಕೂರ ಎಂಬುವರು ಬಸ್ ನಿಲ್ದಾಣಕ್ಕೆ ಬೇಲಿ ಹಾಕಿ ತಮ್ಮ ಅಸಮಾದಾನವನ್ನು ಹೊರ ಹಾಕಿದ ಪ್ರಸಂಗ ತಾಲೂಕಿನ ಮಳಗಿ ಗ್ರಾಮದಲ್ಲಿ ಗುರುವಾರ ನಡೆದಿದೆ. | Kannada Prabha

ಸಾರಾಂಶ

ಕೃಷ್ಣಮೂರ್ತಿ ಕಲ್ಕೂರ ೨೦೦೩ರಲ್ಲಿ ೩೦ ಗುಂಟೆ ಜಾಗ ಸಾರಿಗೆ ಸಂಸ್ಥೆಗೆ ದಾನವಾಗಿ ನೀಡಿದ್ದರು.

ಮುಂಡಗೋಡ: ಬಸ್ ನಿಲ್ದಾಣವು ಸಾರ್ವಜನಿಕರಿಗೆ ಸಮರ್ಪಕವಾಗಿ ಉಪಯೋಗವಾಗದ ಹಿನ್ನೆಲೆಯಲ್ಲಿ ನಿಲ್ದಾಣಕ್ಕೆ ಭೂಮಿ ದಾನ ಮಾಡಿದ್ದ ಕೃಷ್ಣಮೂರ್ತಿ ಕಲ್ಕೂರ ಎಂಬವರು ಬಸ್ ನಿಲ್ದಾಣಕ್ಕೆ ಬೇಲಿ ಹಾಕಿ ಅಸಮಾಧಾನ ಹೊರ ಹಾಕಿದ ಪ್ರಸಂಗ ತಾಲೂಕಿನ ಮಳಗಿ ಗ್ರಾಮದಲ್ಲಿ ಗುರುವಾರ ನಡೆದಿದೆ.

ಮಳಗಿ ಗ್ರಾಮಕ್ಕೆ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣವಾಗಬೇಕೆಂಬ ಉದ್ದೇಶದಿಂದ ಕೃಷ್ಣಮೂರ್ತಿ ಕಲ್ಕೂರ ೨೦೦೩ರಲ್ಲಿ ೩೦ ಗುಂಟೆ ಜಾಗ ಸಾರಿಗೆ ಸಂಸ್ಥೆಗೆ ದಾನವಾಗಿ ನೀಡಿದ್ದರು. ಸುಮಾರು ೧೦ ವರ್ಷಗಳ ಬಳಿಕ ಅಂದರೆ ೨೦೧೩ರಲ್ಲಿ ನೂತನ ಬಸ್ ನಿಲ್ದಾಣ ನಿರ್ಮಾಣ ಮಾಡಿ ಉದ್ಘಾಟನೆ ಕೂಡ ಮಾಡಲಾಯಿತು. ಆದರೆ ಅದಕ್ಕೆ ಬೇಕಾದ ಮೂಲಭೂತ ವ್ಯವಸ್ಥೆ ಕಲ್ಪಿಸಲಾಗಿಲ್ಲ. ಸುತ್ತ ಗಿಡ-ಗಂಟಿ ಬೆಳೆದು ನಿಂತಿವೆ. ಈವರೆಗೆ ಒಂದು ಬಾರಿ ಕೂಡ ಬಸ್ ನಿಲ್ದಾಣಕ್ಕೆ ಸುಣ್ಣ ಬಣ್ಣ ಹಚ್ಚಲಾಗಿಲ್ಲ. ಬಸ್ ನಿಲ್ದಾಣದ ವಿದ್ಯುತ್ ಬಿಲ್ ಕಟ್ಟದೇ ಇರುವುದರಿಂದ ವಿದ್ಯುತ್ ಸಂಪರ್ಕ ಕೂಡ ಕಡಿತಗೊಳಿಸಲಾಗಿದೆ. ನಿಲ್ದಾಣದಲ್ಲಿ ಶೌಚಾಲಯ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಯಾವ ವ್ಯವಸ್ಥೆ ಕೂಡ ಇಲ್ಲದಂತಾಗಿ ಅವ್ಯವಸ್ಥೆಯ ಆಗರವಾಗಿದೆ. ಜೂಜುಕೋರರು, ಕುಡಕರು ಪುಂಡ ಪೋಕರಿಗಳಿಗೆ ಅಕ್ರಮ ಚಟುವಟಿಕೆಯ ತಾಣವಾಗಿ ಮಾರ್ಪಟ್ಟಿದೆ. ಬಹುತೇಕ ಬಸ್‌ಗಳು ನಿಲ್ದಾಣದ ಒಳಗೆ ಬಾರದೇ ಹಾಗೆಯೇ ಹೋಗುತ್ತವೆ. ಇದರಿಂದ ಪ್ರಯಾಣಿಕರಿಗೆ ಬಸ್ ನಿಲ್ದಾಣದಿಂದ ಯಾವುದೇ ರೀತಿ ಪ್ರಯೋಜನವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದ ಶಾಲಾ ಕಾಲೇಜಿನಲ್ಲಿ ೮೫೦ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಾರೆ. ಅದರಲ್ಲಿ ಶೇ.೮೦ರಷ್ಟು ಮಕ್ಕಳು ಸುತ್ತಮುತ್ತಲ ಗ್ರಾಮದಿಂದ ಬರುತ್ತಾರೆ. ಅವರಿಗೆ ಸಮರ್ಪಕ ಬಸ್ ಸೌಲಭ್ಯವಿಲ್ಲ. ಸಿಕ್ಕಾಪಟ್ಟೆ ಮಳೆ ಇದ್ದರೂ ನಿಲ್ದಾಣದೊಳಗೂ ಬಸ್ ಬರುವುದಿಲ್ಲ. ಪ್ರಯಾಣಿಕರು ಶಾಲಾ ಮಕ್ಕಳು ರಸ್ತೆ ಮೇಲೆ ನಿಲ್ಲಬೇಕು. ಇದರಿಂದ ಮಕ್ಕಳು ಬಿದ್ದು ಅನಾಹುತಗಳು ನಡೆದ ಉದಾಹರಣೆಗಳು ಸಾಕಷ್ಟಿವೆ.

೨೦೨೨ರಲ್ಲಿ ಬಸ್ ನಿಲ್ದಾಣ ಅಭಿವೃದ್ಧಿಗೊಳಿಸುವ ಬಗ್ಗೆ ಮನವಿ ಸಲ್ಲಿಸಲಾಗಿತ್ತು. ಆ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿದ ಸಾರಿಗೆ ಇಲಾಖೆ ಅಧಿಕಾರಿಗಳು, ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಬಗ್ಗೆ ಲಿಖಿತವಾಗಿ ಭರವಸೆ ನೀಡಿದ್ದರು. ಆದರೆ ಈವರೆಗೂ ಏನು ಮಾಡಿಲ್ಲ. ಬಸ್ ನಿಲ್ದಾಣ ಸಂಪೂರ್ಣ ಹಾಳು ಬಿದ್ದಂತೆ ಭಾಸವಾಗುತ್ತಿದೆ. ಸಾರ್ವಜನಿಕರಿಗೆ ಉಪಯೋಗವಾಗದ ಮೇಲೆ ಬಸ್ ನಿಲ್ದಾಣ ಕೋಟ್ಯಂತರ ಆಸ್ತಿ ದಾನ ಮಾಡಿ ಏನು ಪ್ರಯೋಜನ ಎಂದು ಪ್ರಶ್ನಿಸಿರುವ ದಾನಿ ಕೃಷ್ಣಮೂರ್ತಿ ಕಲ್ಕೂರ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

PREV

Recommended Stories

ಲಾಕ್‌ಡೌನ್‌ನಿಂದಾಗಿ ಪಂಚರ್ ಅಂಗಡಿ ಮುಚ್ಚಿ ಬೆಲ್ಲದ ಉದ್ಯಮಿಯಾದರು
ಇನ್ನೂ 2 ದಿನ ಮಳೆಯ ಅಬ್ಬರ: ಭಾನುವಾರದ ಬಳಿಕ ಇಳಿಮುಖ