ಸಿ.ಎಂ.ಜೋಶಿ
ಕನ್ನಡಪ್ರಭ ವಾರ್ತೆ ಗುಳೇದಗುಡ್ಡಅತಿವೃಷ್ಟಿ ಹಾಗೂ ಹಾಲಹಂಡೆಯಿಂದ ಹರಿದು ಬರುತ್ತಿರುವ ನೀರಿನಿಂದ ಹೊಲಗಳು ಜಲಾವೃತವಾಗಿ ತಾಲೂಕಿನ ಪರ್ವತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆ ಖಾನಾಪುರ ಎಸ್ಪಿ ಗ್ರಾಮೀಣ ಪ್ರದೇಶದಲ್ಲಿ ಅಂದಾಜು 45-50 ಎಕರೆ ಜಮೀನುಗಳಲ್ಲಿ ರೈತರು ಬೆಳೆದಿದ್ದ ಗೋವಿನ ಜೋಳ, ಹೆಸರು, ಸೌತಿಕಾಯಿ ಸೇರಿದಂತೆ ಇತರ ಬೆಳೆಗಳು ನೀರಲ್ಲಿ ನಿಂತಿದ್ದರಿಂದ ರೈತರು ಕಂಗಾಲಾಗಿದ್ದಾರೆ.
ಕೆಲವು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಗೆ ಮತ್ತು ನಿರಂತರವಾಗಿ ಪಕ್ಕದ ಹಾಲಹಂಡೆಯಿಂದ ನೀರು ಸರಾಗವಾಗಿ ಹರಿದು ಬಂದ ಪರಿಣಾಮ ಕೆರೆ ಖಾನಾಪುರ ಎಸ್ಪಿ ಗ್ರಾಮೀಣ ಪ್ರದೇಶದ ಗಂಜಿಕೆರೆಯ ರೈತರ ಜಮೀನುಗಳಲ್ಲಿ ನೀರು ನಿಲ್ಲುತ್ತದೆ. ಅಲ್ಲಿನ ರೈತರಾದ ಗೀತಾ ದೀಪಕ ನೇಮದಿ, ಅಮಾತೆಪ್ಪ ಕೊಪ್ಪಳ, ನಾಗರಾಜ ಅರಕಾಲಚಿಟ್ಟಿ, ಯಮನೂರ ಹಾದಿಮನಿ, ಯಮನೂರ ಮಡಿವಾಳರ, ಚನ್ನಪ್ಪ ಮನ್ನಿಕಟ್ಟಿ, ತಿಮ್ಮಣ್ಣ ಮನ್ನಿಕಟ್ಟಿ ಸೇರಿ ಅನೇಕ ರೈತರು ಬೆಳೆದಿದ್ದ ಗೋವಿನಜೋಳ, ಹೆಸರು ಸೇರಿದಂತೆ ಇತರ ಬೆಳೆಗಳು ನೀರಿನಿಂದ ಸಂಪೂರ್ಣ ಜಲಾವೃತವಾಗಿವೆ. ಒಬ್ಬ ರೈತರಿಗೆ ಅಂದಾಜು ₹ 3 ಲಕ್ಷದವರೆಗೆ ಹಾನಿಯಾಗಿದೆ. ಇದರಿಂದ ಆ ಭಾಗದ ಅನೇಕ ರೈತರಿಗೆ ದಿಕ್ಕು ತೋಚದಂತಾಗಿದೆ.2019ರಲ್ಲೂ ಸಹ ಅತಿಯಾದ ಮಳೆಯಿಂದ ಅಲ್ಲಿ ಬೆಳದಿದ್ದ ಬೆಳೆಗಳು ನಾಶವಾಗಿದ್ದವು. ಆಗಲೂ ಸಹ ಸರ್ಕಾರದಿಂದ ಯಾವುದೇ ಪರಿಹಾರ ನಮಗೆ ಬಂದಿಲ್ಲ ಎಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಆದ್ದರಿಂದ ನಮಗೆ ಆದ ನಷ್ಟಕ್ಕೆ ಕೂಡಲೇ ಪರಿಹಾರ ನೀಡಬೇಕೆಂದು ರೈತರಾದ ಗೀತಾ ದೀಪಕ ನೇಮದಿ, ಅಮಾತೆಪ್ಪ ಕೊಪ್ಪಳ, ನಾಗರಾಜ ಅರಕಾಲಚಿಟ್ಟಿ, ಯಮನೂರ ಹಾದಿಮನಿ, ಯಮನೂರ ಮಡಿವಾಳರ, ಚನ್ನಪ್ಪ ಮನ್ನಿಕಟ್ಟಿ, ತಿಮ್ಮಣ್ಣ ಮನ್ನಿಕಟ್ಟಿ ಸೇರಿದಂತೆ ಹಲವು ರೈತರು ಸರ್ಕಾರಕ್ಕೆ ಆಗ್ರಹಿದ್ದಾರೆ.
ಕೋಟ್..ಜಿಲ್ಲಾಧಿಕಾರಿಗಳ ಆದೇಶದನ್ವಯ ತಹಸೀಲ್ದಾರರು ಪ್ರವಾಹ ಹಾನಿ ಸಮೀಕ್ಷೆಗೆ ತಂಡ ರಚಿಸಿದ್ದಾರೆ. ತಂಡ ಸಮೀಕ್ಷೆ ನಡೆಸಿ ವರದಿಯನ್ನು ಭೂಮಿ ತಂತ್ರಾಂಶದಲ್ಲಿ ಅಳವಡಿಸಿ ಮುಂದಿನ ದಿನಗಳಲ್ಲಿ ಸರ್ಕಾರ ರೈತರಿಗೆ ಪರಿಹಾರ ನೀಡಲಿದೆ.
-ಆನಂದ ಗೌಡರ, ಕೃಷಿ ಅಧಿಕಾರಿ ಗುಳೇದಗುಡ್ಡ---ಕೋಟ್2
ನಮ್ಮ ಹೊಲಗಳು ಸಂಪೂರ್ಣ ಜಲಾವೃತವಾಗಿವೆ. ರೈತರ ಬದುಕು ಅತಂತ್ರವಾಗಿದೆ. ಮಳೆಯಿಂದಾದ ಹಾನಿಗೆ ಸರ್ಕಾರ ಆದಷ್ಟು ಬೇಗ ಅಧಿಕಾರಿಗಳಿಂದ ಬೆಳೆ ಹಾನಿ ಸಮೀಕ್ಷೆ ಮಾಡಿಸಿ ಪರಿಹಾರ ನೀಡಬೇಕು.-ದೀಪಕ ನೇಮದಿ ರೈತರು ಪರ್ವತಿ ಗ್ರಾಮ