ಹುಬ್ಬಳ್ಳಿ: ಜನರಿಗೆ ಮೂಲಸೌಕರ್ಯಗಳಲ್ಲಿ ಒಂದಾದ ಕುಡಿಯುವ ನೀರನ್ನು ಸಮರ್ಪಕವಾಗಿ ಸರಬಾರಾಜು ಮಾಡಲು ಆಗದ ಎಲ್ ಆ್ಯಂಡ್ ಟಿ ಕಂಪನಿಗೆ ₹1 ಕೋಟಿ ಹಾಗೂ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮಕ್ಕೆ (ಕೆಯುಐಡಿಎ-ಸಿ) ₹50 ಲಕ್ಷ ದಂಡ ವಿಧಿಸಿ ಮೇಯರ್ ಜ್ಯೋತಿ ಪಾಟೀಲ ಆದೇಶಿಸಿದರು.
ಪಾಲಿಕೆ ಸಭಾಭವನದಲ್ಲಿ ವಿರೋಧ ಪಕ್ಷದ ಅನುಪಸ್ಥಿತಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರಿಗೆ ನಳ ಸಂಪರ್ಕ ನೀಡಲು ಒಂದು ಪಿಆರ್‌ಡಿಗೆ ಎರಡು-ಮೂರು ನಳ ಸಂಪರ್ಕ ನೀಡಬೇಕು. ಇಲ್ಲವಾದರೆ ಸೇವಾ ಶುಲ್ಕ ಭರಿಸಲಾಗಲ್ಲ ಎಂದರು.ಸದಸ್ಯರಾದ ಶಿವು ಹಿರೇಮಠ, ತಿಪ್ಪಣ್ಣ ಮಜ್ಜಗಿ, ವೀರಣ್ಣ ಸವಡಿ ಸೇರಿದಂತೆ ಹಲವರು ಎಲ್‌ಆ್ಯಂಡ್‌ಟಿ ಕಂಪನಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು ಅಲ್ಲದೇ, ಎಲ್‌ಆ್ಯಂಡ್‌ಟಿ ಕಂಪನಿಗೆ ₹1 ಕೋಟಿ ಹಾಗೂ ಕೆಯುಐಡಿಎ-ಸಿ ₹50 ಲಕ್ಷ ದಂಡ ವಿಧಿಸಲು ಆಗ್ರಹಿಸಿದರು. ಆಗ ಎಲ್‌ಆ್ಯಂಡ್ ಟಿ ಕಂಪನಿಗೆ ₹1 ಕೋಟಿ ಹಾಗೂ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮಕ್ಕೆ (ಕೆಯುಐಡಿಎ-ಸಿ) 50 ಲಕ್ಷ ದಂಡ ವಿಧಿಸಿದರು.
ಪೇಯ್ಡ್ ಪಾರ್ಕಿಂಗ್ ಗುತ್ತಿಗೆ ರದ್ದುಮಾಡುವಂತೆ ಇದೇ ವೇಳೆ ಆಗ್ರಹ ಕೇಳಿ ಬಂದಿತು. ಎಐಎಂಐಎಂ ಸದಸ್ಯ ನಜೀರ್ ಅಹ್ಮದ ಹೊನ್ಯಾಳ ಪಾರ್ಕಿಂಗ್ ರದ್ದು ಪಡಿಸುವುದು ಬೇಡ ಅಧಿಕಾರಿಗಳು ಪರಿಶೀಲನೆ ನಂತರ ಕ್ರಮ ಕೈಗೊಳ್ಳಲಿ ಎಂದರು. ಇದಕ್ಕೆ ಸಭೆ ಒಪ್ಪಿಗೆ ಸೂಚಿಸಿತು.ಇದಕ್ಕೂ ಮುನ್ನ ತಮ್ಮ ಮೊದಲ ಸಭೆಯಲ್ಲಿ ಭಾಷಣ ಮಾಡಿದ ಜ್ಯೋತಿ ಪಾಟೀಲ, ಪಾಲಿಕೆ ವಲಯ ಕಚೇರಿಗಳನ್ನು ಜನಸ್ನೇಹಿಗಳನ್ನಾಗಿ ಮಾಡಲು ಪ್ರಯತ್ನಿಸುತ್ತೇನೆ. ನಿಗದಿತ ಸಮಯಕ್ಕೆ ಹಾಜರಾಗುವ ಸದಸ್ಯರಿಗೆ ಹಾಗೂ ಪ್ರಾಮಾಣಿಕ ಕೆಲಸ ಮಾಡುವ ಅಧಿಕಾರಿ ಸಿಬ್ಬಂದಿಗಳಿಗೆ ಪ್ರಶಸ್ತಿ ನೀಡಲಾಗುವುದು. ಕುಡಿವ ನೀರು, ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು. ಇದೇ ವೇಳೆ ಮೇಯರ್ ಭಾಷಣದ ಮೇಲೆ ಮಾತನಾಡಿದ ಸದಸ್ಯರು, ಬೀದಿ ದೀಪ, ಕುಡಿವ ನೀರಿನ ಸಮಸ್ಯೆ, ಕಸ ವಿಲೇವಾರಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಸಲಹೆ ಮಾಡಿದರು.