ಬೌದ್ಧರ ಸರ್ವಾಂಗೀಣ ಅಭಿವೃದ್ಧಿಗೆ 1000 ಕೋಟಿ ಮೀಸಲಿಡಿ

KannadaprabhaNewsNetwork |  
Published : Jan 21, 2025, 12:31 AM IST
ಬುದ್ಧ | Kannada Prabha

ಸಾರಾಂಶ

ಗೌತಮ ಬುದ್ಧ ಪ್ರತಿಷ್ಠಾನ ನೇತೃತ್ವದಲ್ಲಿ ಆಯೋಜಿಸಲಾದ ಸಭೆಯಲ್ಲಿ ತಿಪ್ಪೇಸ್ವಾಮಿ ಮನವಿ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಮುಂಬರುವ ರಾಜ್ಯ ಬಜೆಟ್‌ನಲ್ಲಿ ಬೌದ್ಧರ ಸರ್ವಾಂಗೀಣ ಅಭಿವೃದ್ಧಿ ಹಾಗೂ ಬೌದ್ಧ ಕ್ಷೇತ್ರಗಳ ಅಭಿವೃದ್ಧಿಗೆ ಕನಿಷ್ಠ 1000 ಕೋಟಿ ಅನುದಾನ ಮೀಸಲಿಡಬೇಕೆಂದು ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಸರಕಾರಕ್ಕೆ ಮನವಿ ಮಾಡಿದರು.

ನಗರದ ಕೋಟೆ ನಾಡು ಬುದ್ಧ ವಿಹಾರದಲ್ಲಿ ಭಾನುವಾರ ಗೌತಮ ಬುದ್ಧ ಪ್ರತಿಷ್ಠಾನ ನೇತೃತ್ವದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಮುಖ ಬೇಡಿಕೆಗಳಾದ ಬೌದ್ಧ ಐತಿಹಾಸಿಕ ಕ್ಷೇತ್ರ ಸನ್ನತಿ ಅಭಿವೃದ್ಧಿ ಮಂಡಳಿ ಪೂರ್ಣ ಪ್ರಮಾಣದಲ್ಲಿ ರಚಿಸಿ ಈ ಯೋಜನೆ ಆಂಧ್ರದ ಬುದ್ಧವನ ಮಾದರಿಯಲ್ಲಿ ಕನಿಷ್ಠ 200 ಎಕರೆ ಪ್ರದೇಶದಲ್ಲಿ ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿಪಡಿಸಿ ಸನ್ನತ್ತಿಯನ್ನು ಸೆವೆನ್ ಸ್ಟಾರ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಮಾಡಬೇಕು. ಪರಿಶಿಷ್ಟ ಜಾತಿಯ ಬೌದ್ಧರ ಸಾಮಾಜಿಕ, ಆರ್ಥಿಕ ಅಭಿವೃದ್ಧಿಗಾಗಿ ಕರ್ನಾಟಕ ಬೌದ್ಧ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು. ಪ್ರತಿವರ್ಷ ಬುದ್ಧ ಜಯಂತಿಗೆ ಸಾರ್ವತ್ರಿಕ ರಜೆ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ಬೋಧಗಯ ಮಂದಿರ ಕಾಯ್ದೆ 1949ನ್ನು ರದ್ದುಗೊಳಿಸಿ ಬುದ್ಧಗಯಾದ ಮಹಾಬೋಧಿ ಮಹಾವಿಹಾರದ ಆಡಳಿತವನ್ನು ಸಂಪೂರ್ಣವಾಗಿ ಬೌದ್ಧರಿಗೆ ನೀಡಬೇಕೆಂದು ಕೇಂದ್ರ ಸರಕಾರ ಮತ್ತು ಬಿಹಾರ ಸರಕಾರಕ್ಕೆ ಸೂಕ್ತ ಶಿಫಾರಸ್ಸು ಮಾಡಬೇಕು. ಕರ್ನಾಟಕ ಸರಕಾರ ಪ್ರತಿವರ್ಷ ಫೆ.12ರಂದು ಸಾಮ್ರಾಟ್ ಅಶೋಕ ಸನ್ನತಿ ಉತ್ಸವ ಸರಕಾರದ ವತಿಯಿಂದ ಆಚರಿಸಬೇಕು. 1990ರ ಸಂವಿಧಾನ ತಿದ್ದುಪಡಿ ಕಾಯ್ದೆ ಪ್ರಕಾರ ಪರಿಶಿಷ್ಟ ಜಾತಿಯಿಂದ ಬೌದ್ಧ ಧರ್ಮಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಪರಿಶಿಷ್ಟ ಜಾತಿ ವಿದ್ಯಾರ್ಥಿ ವೇತನ ಪಡೆಯಲು ಅನುಕೂಲವಾಗುವಂತೆ ಸಮಾಜ ಕಲ್ಯಾಣ ಇಲಾಖೆ SSP ತಂತ್ರಾಂಶ ಸರಿಪಡಿಸಬೇಕು. ಎಲ್ಲಾ ಪರಿಶಿಷ್ಟ ಜಾತಿಯ ಬೌದ್ಧ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಬೇಕು ಎಂದರು.

ಸಂವಿಧಾನದ ಕಾಯ್ದೆ ಪ್ರಕಾರ ಪರಿಶಿಷ್ಟ ಜಾತಿಗಳು ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮಕ್ಕೆ ಸೇರಿದವರಾಗಿದ್ದಾರೆ. ಆದರೆ ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯಿಂದ ನೀಡುವ ಜಾತಿ ಪ್ರಮಾಣ ಪತ್ರದಲ್ಲಿ (ನಮೂನೆ-1) ಯಾವುದೇ ಧರ್ಮದ ನಮೂದು ಮಾಡದೆ ಸಂವಿಧಾನದ ನಿಯಮ ಉಲ್ಲಂಘನೆ ಮಾಡಲಾಗುತ್ತಿದೆ. ಕೂಡಲೇ ಸಂವಿಧಾನದ ಕಾಯ್ದೆ ಪ್ರಕಾರ ಜಾತಿ ಪ್ರಮಾಣ ಪತ್ರ ನಮೂನೆ 1ರಲ್ಲಿ ಧರ್ಮದ ಉಲ್ಲೇಖ ಇರುವಂತೆ ಮಾರ್ಪಾಡು ಮಾಡಬೇಕು.

ಉದ್ಯೋಗ ಅವಕಾಶ ಸಂದರ್ಭದಲ್ಲಿ ಈ ಹಿಂದೆ ತಮ್ಮ ದಾಖಲೆಗಳಲ್ಲಿ ಉಪ ಜಾತಿ ನಮೂದಿಸದೆ ನವಬೌದ್ಧ ಎಂದು ದಾಖಲಿಸಿದ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳನ್ನು ಜಾತಿ ದೃಢಿಕರಣ ಸಂದರ್ಭದಲ್ಲಿ ತಿರಸ್ಕಾರ ಮಾಡುತ್ತಿದ್ದಾರೆ. ಕೂಡಲೇ ಸಮಾಜ ಕಲ್ಯಾಣ ಇಲಾಖೆ ಸ್ಪಷ್ಟಿಕರಣ ನೀಡಿ ಆದೇಶ ಹೊರಡಿಸಿ ನವಬೌದ್ಧರನ್ನು ಪರಿಶಿಷ್ಟ ಜಾತಿಯೆಂದು ಪರಿಗಣಿಸಬೇಕು. ಧಾರ್ಮಿಕ ಅಲ್ಪ ಸಂಖ್ಯಾತರಾಗಿ 2ಎ ಪ್ರಮಾಣ ಪತ್ರ ಪಡೆದ ಬೌದ್ಧರ ಅಭಿವೃದ್ಧಿಗಾಗಿ ಕರ್ನಾಟಕ ರಾಜ್ಯದ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ವಿವಿಧ ಯೋಜನೆಗಳಲ್ಲಿ ಬೌದ್ಧ ಧರ್ಮಿಯರಿಗೆ ಪ್ರತ್ಯೇಕ ಗುರಿ ನಿಗದಿ ಪಡಿಸಬೇಕು ಎಂದರು.

ಕರ್ನಾಟಕದಲ್ಲಿರುವ ಸಾಮ್ರಾಟ್ ಅಶೋಕರ ಶಿಲಾ ಶಾಸನಗಳನ್ನು ಸಂರಕ್ಷಿಸಲು ವಿಶೇಷ ಯೋಜನೆ ರೂಪಿಸಬೇಕು. ಗುಲಬರ್ಗಾ ಜಿಲ್ಲೆಯ ಸನ್ನತ್ತಿ, ರಾಯಚೂರು ಮಸ್ಕಿ, ಕೊಪ್ಪಳದ ಗವಿಮಠ, ಪಾಲ್ಕಿ ಗುಂಡು, ಬಳ್ಳಾರಿ ಜಿಲ್ಲೆಯ ನಿಟ್ಟೂರು, ಉದುಂಗೋಳ, ಚಿತ್ರದುರ್ಗ ಜಿಲ್ಲೆಯ ಅಶೋಕ ಸಿದ್ಧಪೂರ, ಬ್ರಹ್ಮಗಿರಿ, ಜಟಿಂಗ್ ರಾಮೇಶ್ವರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ 10 ರಾಜಘಟ್ಟ ಇತರೇ 16 ರಾಜ್ಯದ ಹಲವಾರು ಕಡೆಬುದ್ಧ ವಿಹಾರ ನಿಮಾಣ ಮಾಡಲು ದಾನಿಗಳು ಭೂಮಿ ದಾನ ಮಾಡಿದ್ದು ಹಲವು ಕಡೆ ಸರ್ಕಾರದ ಭೂಮಿಯನ್ನು ಬುದ್ಧ ವಿಹಾರ ನಿಮಾಣಕ್ಕೆ ಸ್ಥಳೀಯ ಆಡಳಿತ ದಿಂದ ಭೂಮಿ ಕಾಯ್ದಿರಿಸಲಾಗಿದೆ ಅಂತಹ ಸ್ಥಳಗಳಲ್ಲಿ ಬುದ್ಧ ವಿಹಾರ ನಿರ್ಮಾಣಕೆ ಸರಕಾರ ಅನುದಾನ ನೀಡಬೇಕು.

ಈ ವೇಳೆ ಚಳ್ಳಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರೊ.ಡಾ.ಕರಿಬಸಪ್ಪ ಉಪನ್ಯಾಸಕರಾದ ಈ.ನಾಗೇಂದ್ರಪ್ಪ, ಇಂದೂಧರ ಗೌತಮ್, ತಿಪಟೂರು ಮಂಜು, ಶಿಕ್ಷಕಿಯರಾದ ಲಕ್ಷ್ಮೀದೇವಿ, ಹರೀಶ್ ಗಿರಿಜಾ, ನಿವೃತ್ತ ಎಸ್‌ಐ ಕೃಷ್ಣಪ್ಪ, ಬೆಸ್ಕಾಂ ತಿಪೇಸ್ವಾಮಿ, ಬನ್ನಿಕೋಡ್ ರಮೇಶ್, ಶಾಂತಮ್ಮ, ತಿಪ್ಪಮ್ಮ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣದ ಜೊತೆಗೆ ವೃತ್ತಿಪರ ಕೌಶಲ್ಯ ಅಗತ್ಯ
ಪಂ.ದೀನದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನದ ಯೋಜನಾ ಸಭೆ