ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಸಬಾ ಸೊಸೈಟಿಯಲ್ಲಿ ಷೇರುದಾರರು ಅಡವಿಟ್ಟಿದ್ದ ಚಿನ್ನಾಭರಣ, ಫಿಗ್ಮಿ ಮತ್ತು ಷೇರುದಾರರ ಡೆಫಾಸಿಟ್ ಹಣ ಸೇರಿದಂತೆ ಇತ್ಯಾದಿ ಹಣ ದುರ್ಬಳಕೆ ಆಗಿದೆ ಎಂಬ ದೂರು ಕೇಳಿ ಬಂದ ತಕ್ಷಣ ವಸೂಲಾತಿ ಮತ್ತು ಅಗತ್ಯ ಕ್ರಮಕ್ಕೆ ಮುಂದಾಗಿದ್ದೇನೆ ಎಂದರು.
ಹಣ ದರ್ಬಳಕೆ ಸಂಬಂಧ ಸಹಕಾರ ಇಲಾಖೆ ಸಹಾಯಕ ನಿಬಂಧಕರಿಂದಲೂ ಈ ಬಗ್ಗೆ ಮಾಹಿತಿ ಕೇಳಲಾಗಿದೆ. ಪಟ್ಟಣದ ಡಿಸಿಸಿ ಬ್ಯಾಂಕ್ ಲಾಕರ್‌ನಲ್ಲಿ ಷೇರುದಾರರು ಅಡವಿಟ್ಟಿದ್ದ ಚಿನ್ನಾಭರಣಗಳನ್ನು ಲಾಕರ್‌ನಿಂದ ತೆಗೆದು ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಗಿರವಿ ಇಡಲಾಗಿದೆ ಎಂದು ತಿಳಿದು ಬಂದಿದೆ ಎಂದರು.ಖಾಸಗಿ ಸಂಸ್ಥೆಗಳು ಸಹಕಾರ ಸಂಘಗಳಿಗಿಂತ ಚಿನ್ನಕ್ಕೆ ಹೆಚ್ಚಿನ ಹಣ ನೀಡುತ್ತವೆ ಎಂಬ ಕಾರಣಕ್ಕೆ ಲಾಕರ್‌ನಲ್ಲಿದ್ದ ಚಿನ್ನವನ್ನು ಬೇರೆಡೆಗೆ ವರ್ಗಾಯಿಸಿ ಅದರಿಂದ ಬಂದ ಹೆಚ್ಚುವರಿ ಹಣವನ್ನು ಕೂಡ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಸಂಘದಲ್ಲಿ ನಡೆದಿರುವ ಅಕ್ರಮಗಳನ್ನು ವಿವರಿಸಿದರು.
ಆಡಳಿತ ಮಂಡಳಿ ನಿರ್ದೇಶಕರು ಮತ್ತು ನೌಕರರ ವರ್ಗ ಸಾರ್ವಜನಿಕರ ಹಣವನ್ನು ತಮ್ಮ ಮನೆಯ ಹಣದಂತೆ ಬಳಸಿಕೊಳ್ಳುವುದು ಬಿಡಬೇಕು. ಸಹಕಾರ ಕ್ಷೇತ್ರ ಉಳಿದರೆ ಮಾತ್ರ ಜನರಿಗೆ ಆರ್ಥಿಕ ಬಲ ತುಂಬಲು ಸಾಧ್ಯ. ರಾಜಕೀಯ ಬದಿಗಿಟ್ಟು ಸಂಸ್ಥೆಗಳನ್ನು ಉಳಿಸುವ ಕೆಲಸ ಮಾಡಬೇಕಿದೆ. ಕಸಬಾ ಸೊಸೈಟಿಯಲ್ಲಿ ದುರ್ಬಳಕೆಯಾಗಿರುವ ಹಣ ವಸೂಲಾತಿ ಜತೆಗೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
ಪುರಸಭೆ ವ್ಯಾಪ್ತಿಯಲ್ಲಿ ಹಂಚಿಕೆಯಾಗಿರುವ ನಿವೇಶನಗಳ ಅಕ್ರಮ ಕಬಳಿಕೆ ಮತ್ತು ಅವ್ಯವಹಾರಗಳನ್ನು ಸರ್ಕಾರ ಸಿಒಡಿ ತನಿಖೆಗೆ ಆದೇಶಿಸಿದೆ. ಅದರಂತೆ ಪೊಲಿಸರು ಅಕ್ರಮಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದರು.
ಪಟ್ಟಣದಲ್ಲಿ ನಿವೇಶನ ಖರೀದಿಸುವ ಜನರು ದಾಖಲೆಗಳನ್ನು ಪರಿಶೀಲಿಸಿ ಎಚ್ಚರಿಕೆಯಿಂದ ಖರೀದಿಸಬೇಕು. ಜನರಿಗೆ ಅನ್ಯಾಯವಾಗಬಾರದು ಎಂಬ ದೃಷ್ಟಿಯಿಂದ ನಿವೇಶನ ನೋಂದಣಿಗೂ ಮುನ್ನ ಪುರಸಭೆಯಿಂದ ಎನ್‌ಒಸಿ ಪಡೆದುಕೊಳ್ಳುವಂತೆ ಸಬ್‌ರಿಜಿಸ್ಟರ್ ಅವರಿಗೆ ಸೂಚಿಸಲಾಗಿದೆ ಎಂದರು.
ತಾಲೂಕಿನಾದ್ಯಂತ ಕೆರೆ, ಕಟ್ಟೆ ಮತ್ತು ಹಳ್ಳಗಳನ್ನು ಒತ್ತುವರಿ ಮಾಡಿಕೊಂಡಿರುವವರು ತಾವಾಗಿಯೇ ಒತ್ತುವರಿ ತೆರವುಗೊಳಿಸಬೇಕು. ನಿಮಗಾಗಿ, ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಅಂತರ್ಜಲ ಕಾಪಾಡಬೇಕಿದೆ. ಹೀಗಾಗಿ ಒತ್ತುವರಿ ತೆರವುಗೊಳಿಸಿ ಕೆರೆ-ಕಟ್ಟೆ ಉಳಿಸಿ ಎಂದು ಮನವಿ ಮಾಡಿದರು.