ಹೆದ್ದಾರಿ ಮುರುಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಸಂಸದ ಗೋವಿಂದ ಕಾರಜೋಳಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಕೇಂದ್ರ ರಸ್ತೆ ನಿಧಿ ಯೋಜನೆಯಡಿ ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ 48 ಕೋಟಿ ರು.ಅನುದಾನ ಮಂಜೂರಾಗಿದೆ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.ಚಿತ್ರದುರ್ಗ ತಾಲೂಕಿನ ಹಿರೇಗುಂಟನೂರು ಗ್ರಾಮದಲ್ಲಿ ಶನಿವಾರ ಹೆದ್ದಾರಿ ಮರು ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಎಲ್ಲಾ ಕಾಮಗಾರಿಗಳಿಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲಾಗಿದ್ದು, ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಸಾರ್ವಜನಿಕರು ಕೂಡ ಕಾಮಗಾರಿ ನಡೆಯುವ ವೇಳೆ ಗುಣಮಟ್ಟದ ಕಾಮಗಾರಿಯ ಬಗ್ಗೆ ಗಮನ ಹರಿಸಬೇಕು. ನೀವು ನೀಡಿದ ತೆರಿಗೆ ಹಣದಿಂದ ಬಂದಿರುವ ಅನುದಾನ ಇದಾಗಿದೆ. ಸಮರ್ಪಕವಾಗಿ ಅನುದಾನ ಬಳಸಿಕೊಳ್ಳುವಲ್ಲಿ ಸಾರ್ವಜನಿಕರ ಪಾತ್ರವೂ ಕೂಡ ಪ್ರಮುಖವಾಗಿದೆ, ಈ ನಿಟ್ಟಿನಲ್ಲಿ ಗುಣಮಟ್ಟದ ಕಾಮಗಾರಿ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದರು.
ಕೇಂದ್ರ ಸರ್ಕಾರ ಗ್ರಾಮೀಣ ರಸ್ತೆ ಹಾಗೂ ಹೆದ್ದಾರಿ ಅಭಿವೃದ್ಧಿಯ ವಿಷಯದಲ್ಲಿ ವಿಶೇಷ ಗಮನ ಹರಿಸುತ್ತಿದೆ. ಗ್ರಾಮೀಣ ರಸ್ತೆಗಳು ರಾಷ್ಟ್ರೀಯ ಹೆದ್ದಾರಿಗಳಿಗೆ ಸಮನಾಗಿ ಪ್ರಾಮುಖ್ಯತೆಯನ್ನು ನೀಡುವ ವಿವಿಧ ಆರ್ಥಿಕ ಪ್ರಯೋಜನಗಳನ್ನು ದೇಶಕ್ಕೆ ನೀಡುತ್ತಿವೆ. ವಾಸ್ತವವಾಗಿ ಗ್ರಾಮೀಣ ರಸ್ತೆಗಳನ್ನು ಸಾಮಾನ್ಯವಾಗಿ ಗ್ರಾಮೀಣ ಸಮುದಾಯಗಳಿಗೆ ಜೀವನಾಡಿ ಎಂದು ಪರಿಗಣಿಸಲಾಗುತ್ತದೆ. ಗ್ರಾಮೀಣ ಸಮುದಾಯ ದೇಶದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಹಿನ್ನಲೆ ಹೆದ್ದಾರಿಗಳು ಹಾಗೂ ಗ್ರಾಮೀಣ ಸಮುದಾಯ ಒಂದಕ್ಕೊಂದು ಪೂರಕವಾಗಿವೆ. ಕೇಂದ್ರ ರಸ್ತೆ ನಿಧಿ ಯೋಜನೆಯಡಿ 6 ಕೋಟಿ ರು. ಮೊತ್ತದಲ್ಲಿ ಚಿತ್ರದುರ್ಗ ತಾಲೂಕು ರಾಜ್ಯ ಹೆದ್ದಾರಿ-48 (ಕುಮಟಾ-ಕಡಮಡಗಿ ಹೆದ್ದಾರಿ) ರಲ್ಲಿ ಹಿರೇಗುಂಟನೂರು ನಿಂದ ಸಿದ್ದಾಪುರ ದವರೆಗೆ ಹೆದ್ದಾರಿ ಮುರುಡಾಂಬರೀಕರಣ ಕೈಗೆತ್ತಿಕೊಳ್ಳಲಾಗಿದೆ ಎಂದರು.2029ರ ವೇಳೆಗೆ ದೇಶದ ಸುಮಾರು 25,000 ಗ್ರಾಮೀಣ ಜನ ವಸತಿಗಳಿಗೆ ಸರ್ವಋತು ರಸ್ತೆಗಳನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಗ್ರಾಮಸಡಕ್-4 ಯೋಜನೆಯಡಿ 62,500 ಕಿ.ಮೀ ಉದ್ದದ ರಸ್ತೆಗಳನ್ನು 70,125 ಕೋಟಿ ರು. ಮೊತ್ತದಲ್ಲಿ ನಿರ್ಮಾಣ ಮಾಡಲು ಕೇಂದ್ರ ಸಚಿವ ಸಂಪುಟ ಈಗಾಗಲೇ ಅನುಮೋದನೆ ನೀಡಿದೆ.
ಕೃಷಿ ಚಟುವಟಿಕೆಗಳನ್ನು ಗ್ರಾಮೀಣ ರಸ್ತೆಗಳು ಉತ್ತೇಜಿಸುವ ಮೂಲಕ ಕೃಷಿ ಉತ್ಪಾದಕತೆ ಹೆಚ್ಚಳವಾಗುವಲ್ಲಿ ಗ್ರಾಮೀಣ ರಸ್ತೆಗಳ ಪಾತ್ರ ಮಹತ್ವದ್ದಾಗಿದೆ, ಗ್ರಾಮ ಸಡಕ್ ಯೋಜನೆಯಡಿ ಈಗಾಗಲೇ ಸುಮಾರು 7.66 ಲಕ್ಷ ಕಿಮೀ ಗ್ರಾಮೀಣ ರಸ್ತೆಗಳನ್ನು ದೇಶದಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ಗೋವಿಂದ ಕಾರಜೋಳ ಹೇಳಿದರು.ಶಾಸಕ ಕೆ.ಸಿ.ವೀರೇಂದ್ರ, ಡಿಸಿಸಿಬ್ಯಾಂಕ್ ನಿರ್ದೇಶಕ ಗಿರೀಶ್, ಕೆ.ಟಿ.ಕುಮಾರಸ್ವಾಮಿ, ಹೆದ್ದಾರಿ ವಿಭಾಗದ ಕಾರ್ಯಪಾಲಕ ಅಭಿಯಂತರ ನರೇಂದ್ರ, ಸಹಾಯಕ ಕಾರ್ಯಪಾಲಕ ಅಭಿಯಂತರ ನವೀನ್ ಇದ್ದರು.