ಹಂಪಿ ಸ್ಮಾರಕಗಳ ವೀಕ್ಷಣೆಗೆ ಹರಿದು ಬಂದ ಪ್ರವಾಸಿಗರ ದಂಡು

KannadaprabhaNewsNetwork |  
Published : Jul 15, 2024, 01:47 AM IST
14ಎಚ್‌ಪಿಟಿ1- ಹಂಪಿಯ ಶ್ರೀವಿರೂಪಾಕ್ಷೇಶ್ವರ ರಥಬೀದಿಯಲ್ಲಿ ಭಾನುವಾರ ಕಂಡು ಬಂದ ಪ್ರವಾಸಿಗರ ದಂಡು. | Kannada Prabha

ಸಾರಾಂಶ

ವಿಶ್ವವಿಖ್ಯಾತ ಹಂಪಿ ಸ್ಮಾರಕಗಳ ವೀಕ್ಷಣೆಗೆ ದೇಶ, ವಿದೇಶಿ ಪ್ರವಾಸಿಗರ ದಂಡು ಹರಿದು ಬರುತ್ತಿದೆ.

ಹೊಸಪೇಟೆ: ವಿಶ್ವವಿಖ್ಯಾತ ಹಂಪಿ ಸ್ಮಾರಕಗಳ ವೀಕ್ಷಣೆಗೆ ದೇಶ, ವಿದೇಶಿ ಪ್ರವಾಸಿಗರ ದಂಡು ಹರಿದು ಬರುತ್ತಿದೆ. ವೀಕೆಂಡ್‌ ಹಿನ್ನೆಲೆಯಲ್ಲಿ ಭಾನುವಾರ 10 ಸಾವಿರಕ್ಕೂ ಅಧಿಕ ಪ್ರವಾಸಿಗರು ಹಂಪಿಯತ್ತ ಧಾವಿಸಿದ್ದು, ಹಂಪಿಯಲ್ಲಿ ಪ್ರವಾಸೋದ್ಯಮ ಮತ್ತೆ ಚೇತರಿಸಿಕೊಳ್ಳುತ್ತಿದೆ.

ಹಂಪಿಯ ಶ್ರೀ ವಿರೂಪಾಕ್ಷೇಶ್ವರ ರಥಬೀದಿ, ಬಸವಣ್ಣ ಮಂಟಪ, ಶ್ರೀಕೃಷ್ಣ ದೇವಾಲಯ, ಕಡಲೆಕಾಳು ಗಣಪ ಮಂಟಪ, ಸಾಸಿವೆಕಾಳು ಗಣಪ ಮಂಟಪ, ಉದ್ಧಾನ ವೀರಭದ್ರೇಶ್ವರ ದೇವಸ್ಥಾನ, ಅಕ್ಕ-ತಂಗಿಯರ ಗುಡ್ಡ, ನೆಲಸ್ತರದ ಶಿವಾಲಯ, ಉಗ್ರ ನರಸಿಂಹ, ಬಡವಿಲಿಂಗ, ಮಹಾನವಮಿ ದಿಬ್ಬ, ರಾಣಿಸ್ನಾನ ಗೃಹ, ಕಮಲ ಮಹಲ್‌, ಗಜಶಾಲೆ, ಅರಮನೆ ಪ್ರಾಂಗಣ, ರಾಜ್ಯ ಪುರಾತತ್ವ ಸಂಗ್ರಹಾಲಯ, ವರಾಹ ದೇವಾಲಯ, ಗೆಜ್ಜಲ ಮಂಟಪ, ಕುದುರೆಗೊಂಬೆ ಮಂಟಪ, ವಿಜಯ ವಿಠ್ಠಲ ದೇವಾಲಯ, ಕಲ್ಲಿನತೇರು, ಪುರಂದರದಾಸರ ಮಂಟಪ, ರಾಜರ ತುಲಾಭಾರ, ಮಾಲ್ಯವಂತ ರಘುನಾಥ ದೇವಾಲಯ, ಪಟ್ಟಾಭಿರಾಮ ದೇವಾಲಯ, ಅಚ್ಯುತರಾಯ ದೇವಾಲಯ, ವಿಷ್ಣು ಮಂಟಪ ಸೇರಿದಂತೆ ವಿವಿಧೆಡೆ ಪ್ರವಾಸಿಗರ ದಂಡು ಸೇರಿತ್ತು.

ಹಂಪಿಯ ಸ್ಮಾರಕಗಳ ವೀಕ್ಷಣೆಗೆ ಕಳೆದ ಕೆಲವು ತಿಂಗಳಿನಿಂದ ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಇಳಿಕೆಯಾಗಿತ್ತು. ಬಿಸಿಲಿನ ಹೊಡೆತದ ಹಿನ್ನೆಲೆಯಲ್ಲಿ ಪ್ರವಾಸಿಗರು ಹಂಪಿಯತ್ತ ಬರುತ್ತಿರಲಿಲ್ಲ. ಈಗ ವಾತಾವರಣದಲ್ಲೂ ಬದಲಾವಣೆ ಆಗಿದೆ. ಹಾಗಾಗಿ ದೇಶದ ವಿವಿಧ ಭಾಗಗಳಿಂದ ಅದರಲ್ಲೂ ಆಂಧ್ರಪ್ರದೇಶ, ತಮಿಳುನಾಡು, ಕೇರಳ, ತೆಲಂಗಾಣ, ದಿಲ್ಲಿ, ಉತ್ತರ ಪ್ರದೇಶ, ಮಹಾರಾಷ್ಟ್ರ, ಹರ್ಯಾಣ ಸೇರಿದಂತೆ ವಿವಿಧ ಪ್ರದೇಶಗಳಿಂದ ಪ್ರವಾಸಿಗರು ಬರುತ್ತಿದ್ದಾರೆ. ರಾಜ್ಯದ ಚಿತ್ರದುರ್ಗ, ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ, ಗದಗ, ಧಾರವಾಡ, ಹಾವೇರಿ, ದಾವಣಗೆರೆ, ಶಿವಮೊಗ್ಗ, ಬೆಂಗಳೂರು, ಹಾಸನ, ಮೈಸೂರು, ಮಂಡ್ಯ ಸೇರಿದಂತೆ ವಿವಿಧ ಜಿಲ್ಲೆಗಳಿಂದಲೂ ಪ್ರವಾಸಿಗರು ಹಂಪಿ ಸ್ಮಾರಕಗಳ ವೀಕ್ಷಣೆಗೆ ಆಗಮಿಸುತ್ತಿದ್ದಾರೆ.

ಹಂಪಿಯ ಹೇಮಕೂಟ, ಮಾತಂಗ ಪರ್ವತದಲ್ಲಿ ಸೂರ್ಯೋದಯ, ಸೂರ್ಯಾಸ್ತಮಾನವನ್ನು ಪ್ರವಾಸಿಗರು ವೀಕ್ಷಣೆ ಮಾಡುತ್ತಿದ್ದಾರೆ. ಹಂಪಿಯಲ್ಲಿ ಪ್ರವಾಸಿಗರು ಭಾರೀ ಪ್ರಮಾಣದಲ್ಲಿ ಹರಿದು ಬರುತ್ತಿರುವುದರಿಂದ ಕನ್ನಡ ವಿಶ್ವವಿದ್ಯಾಲಯದ ಬಳಿ ಇರುವ ಅಟಲ್‌ ಬಿಹಾರಿ ವಾಜಪೇಯಿ ಜೂಲಾಜಿಕಲ್‌ ಪಾರ್ಕ್‌ಗೂ ಪ್ರವಾಸಿಗರು ಬರುತ್ತಿದ್ದಾರೆ. ಇದರಿಂದ ಈ ಜೂಲಾಜಿಕಲ್‌ ಪಾರ್ಕ್‌ನಲ್ಲೂ ಶುಲ್ಕ ಸಂಗ್ರಹವಾಗುತ್ತಿದೆ. ಇನ್ನು ತುಂಗಭದ್ರಾ ಜಲಾಶಯ ಹಾಗೂ ಹಿನ್ನೀರು ಪ್ರದೇಶದಲ್ಲಿರುವ ಉದ್ಯಾನಕ್ಕೂ ಪ್ರವಾಸಿಗರು ಆಗಮಿಸುತ್ತಿದ್ದಾರೆ.

ಹಂಪಿಗೆ ಪ್ರವಾಸಿಗರು ಬರುತ್ತಿರುವುದರಿಂದ ವಸತಿಗೃಹಗಳಲ್ಲಿ ಕೊಠಡಿಗಳು ಭರ್ತಿಯಾಗತೊಡಗಿವೆ. ಹಂಪಿ, ಕಮಲಾಪುರ, ಹೊಸಪೇಟೆ ಭಾಗದಲ್ಲಿ ಹೋಟೆಲ್‌, ಲಾಡ್ಜ್‌, ರೆಸಾರ್ಟ್‌ಗಳು ಹೆಚ್ಚಾಗಿರುವುದರಿಂದ ಸ್ಥಳೀಯರಿಗೂ ಉದ್ಯೋಗ ದೊರೆಯುತ್ತಿದೆ. ಪ್ರವಾಸಿಗರು ಇಲ್ಲದೇ ಹೋಟೆಲ್‌ಗಳಲ್ಲಿ ರಶ್‌ ಕಡಿಮೆ ಆಗಿತ್ತು. ಈಗ ಪ್ರವಾಸಿಗರ ಸಂಖ್ಯೆ ಹೆಚ್ಚಳದಿಂದ ಹೋಟೆಲ್‌ ಉದ್ಯಮವೂ ಚೇತರಿಸಿಕೊಳ್ಳುತ್ತಿದೆ.

ಹಂಪಿಯ ಸ್ಮಾರಕಗಳ ವೀಕ್ಷಣೆಗೆ ಬಂದಿದ್ದೇವೆ. ವಿಜಯನಗರ ಸಾಮ್ರಾಜ್ಯದ ಐತಿಹಾಸಿಕ ಸ್ಮಾರಕಗಳು ಇಡೀ ವಿಶ್ವಕ್ಕೆ ಮಾದರಿಯಾಗಿವೆ. ವೀಕೆಂಡ್‌ ಹಿನ್ನೆಲೆಯಲ್ಲಿ ಮಕ್ಕಳನ್ನು ಕರೆದುಕೊಂಡು ಸ್ಮಾರಕಗಳ ವೀಕ್ಷಣೆಗೆ ಬಂದಿದ್ದೇವೆ. ನಿಜಕ್ಕೂ ನಮಗೆ ಖುಷಿ ತಂದಿದೆ. ಮಕ್ಕಳಿಗೂ ಇಲ್ಲಿನ ಚರಿತ್ರೆ ಹೇಳಿಕೊಡುತ್ತಿದ್ದೇವೆ ಎನ್ನುತ್ತಾರೆ ಪ್ರವಾಸಿಗ ಹೇಮಂತಕುಮಾರ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ