ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಬೆಳ್ಳಂಬೆಳಗ್ಗೆ ನಂದಿಬೆಟ್ಟಕ್ಕೆ ಹೋಗಬೇಕು ಸೂರ್ಯೋದಯ ನೋಡಬೇಕು ಅಂತ ಕಾರು ಹಾಗೂ ಬೈಕ್‌ಗಳಲ್ಲಿ ಬಂದ ಪ್ರವಾಸಿಗರು ನಂದಿಬೆಟ್ಟದ ಕ್ರಾಸ್‌ನಲ್ಲಿಯೇ ಉಳಿಯುವಂತಾಯಿತು. ಕೆಲವರು ಚಿಕ್ಕಬಳ್ಳಾಪುರ ಅತ್ತ ನಂದಿಬೆಟ್ಟಕ್ಕೂ ಹೋಗಲಾಗದೇ ಇತ್ತ ವಾಪಾಸ್ ಬರಲಾಗದೇ ಗಂಟೆಗಟ್ಟಲೇ ರೋಡ್‌ನಲ್ಲಿಯೇ ಕಾಲ ಕಳೆಯುವಂತಾಯಿತು. ಗಂಟೆಗಟ್ಟಲೇ ಕಾದು-ಕಾದು ಕೆಲವರು ನಂದಿಬೆಟ್ಟಕ್ಕೆ ಹೋದರೆ ಬಹುತೇಕರು ಅಯ್ಯೋ ಸಾಕಪ್ಪ ಸಾಕು ನಂದಿಬೆಟ್ಟದ ಸಹವಾಸ ಅಂತ ವಾಪಾಸ್ಸಾದರು.
ಬೆಂಗಳೂರು ಸೇರಿ ರಾಜ್ಯದ ವಿವಿಧ ಮೂಲೆಗಳಿಂದ ನಂದಿಗಿರಿಧಾಮದ ಪ್ರಕೃತಿ ಸೌಂದರ್ಯಕ್ಕೆ ಮನಸೋತ ಪ್ರವಾಸಿಗರು ಬೆಳಗ್ಗೆ 5 ಗಂಟೆಯಿಂದಲೇ ಲಗ್ಗೆಯಿಟ್ಟಿದ್ದು ಬೆಳಗ್ಗೆ 6 ಗಂಟೆಗೆಯೇ ಪಾರ್ಕಿಂಗ್ ಫುಲ್ ಆಗಿತ್ತು. ಪ್ರವಾಸಿಗರು ಏಕಕಾಲದಲ್ಲಿ ಆಗಮಿಸಿದ ಹಿನ್ನೆಲೆ ಟಿಕೆಟ್ ಕೌಂಟರ್ ನಿಂದ ನಂದಿ ಸರ್ಕಲ್ ವರೆಗೂ ಕಿಲೋ ಮೀಟರ್‌ಗಟ್ಟಲೆ ಟ್ರಾಫಿಕ್ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸಾಲುಗಟ್ಟಿ ನಿಂತ ವಾಹನಗಳುಕಾರು ಹಾಗೂ ಬೈಕ್‌ಗಳಲ್ಲಿ ಸಾವಿರಾರು ಮಂದಿ ಪ್ರವಾಸಿಗರು ನಂದಿಬೆಟ್ಟಕ್ಕೆ ಆಗಮಿಸಿದ್ದರು. ಆದರೆ ನೀರಿಕ್ಷೆಗೂ ಮೀರಿ ನಂದಿಬೆಟ್ಟಕ್ಕೆ ಪ್ರವಾಸಿಗರು ಬಂದ ಕಾರಣ ನಂದಿಬೆಟ್ಟದ ಚೆಕ್ ಪೋಸ್ಟ್‌ನಿಂದ ನಂದಿಬೆಟ್ಟದ ಕ್ರಾಸ್, ಹೆಗಡಿಹಳ್ಳಿ, ಕಣಿವೆಪುರ ಗ್ರಾಮದವದರೆಗೂ ಕಿಲೋಮೀಟರ್ ಗಟ್ಟಲೇ ವಾಹನಗಳು ನಿಂತಲ್ಲೇ ನಿಂತು ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದರಿಂದ ಬೆಳ್ಳಂಬೆಳಗ್ಗೆ ನಂದಿಬೆಟ್ಟಕ್ಕೆ ಹೋಗಿ ಸೂರ್ಯೋದಯ ನೋಡಬೇಕು ಅಂತ ಬಂದ ಪ್ರವಾಸಿಗರಿಗೆ ನಿರಾಸೆಯಾಯಿತು. ನಂದಿಬೆಟ್ಟದ ಮೇಲ್ಭಾಗದಲ್ಲಿ ಪಾರ್ಕಿಂಗ್ ಸಮಸ್ಯೆ ಇರುವ ಕಾರಣ ಮೊದಲು ಬಂದ 300 ನಾಲ್ಕು ಚಕ್ರ ವಾಹನ ಹಾಗೂ 100 ಬೈಕ್‌ಗಳಿಗಷ್ಟೇ ನಂದಿಬೆಟ್ಟದ ಮೇಲ್ಭಾಗಕ್ಕೆ ತೆರಳಲು ಅವಕಾಶ ನೀಡಲಾಗುತ್ತದೆ. ಮೇಲಿಂದ ಒಂದು ವಾಹನ ವಾಪಾಸ್ ಬಂದರೆ ಮತ್ತೊಂದು ವಾಹನವನ್ನು ಮೇಲ್ಭಾಗಕ್ಕೆ ಬಿಡಲಾಗುತ್ತದೆ. ಹೀಗಾಗಿ ಸೀಮಿತ 300 ವಾಹನಗಳನ್ನು ಮೀರಿ ನೂರಾರು ಕಾರುಗಳ ಬಂದ ಕಾರಣ ನಿಂತಲ್ಲೇ ಕಾರುಗಳು ನಿಲ್ಲುವಂತಾಯಿತು.
ಈ ವರ್ಷ ಜನವರಿಂದ ಜೂನ್‌ವರೆಗೂ ಒಟ್ಟು 11,49,682 ಮಂದಿ ಭೇಟಿ ನೀಡಿದ್ದು, ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ನೀಡಿರುವ ಅಂಕಿ ಅಂಶಗಳ ಪ್ರಕಾರ ಈ ವರ್ಷಾಂತ್ಯಕ್ಕೆ ನಂದಿಗರಿಧಾಮಕ್ಕೆ ಪ್ರವಾಸಿಗರ ಭೇಟಿ 23 ಲಕ್ಷದಷ್ಟು ದಾಟುವ ಸಾಧ್ಯತೆ ಇದೆ.