ಪಾವಗಡ: ಪಟ್ಟಣದ ಶ್ರೀ ಮಾರುತಿ ಟಾಕೀಸ್‌ಗೆ ಪ್ರತಿ ದಿನ ನಾಲ್ಕು ಪ್ರದರ್ಶನದಂತೆ ತೆರೆ ಕಾಣುತ್ತಿರುವ ನೂತನ ಕನ್ನಡ ಪ್ರೇಮದ ಊರಲ್ಲಿ ಚಿತ್ರಕ್ಕೆ ಕಳೆದ 8 ದಿನಗಳಿಂದ ಗ್ರಾಮೀಣ ಹಾಗೂ ನಗರದ ಪ್ರೇಕ್ಷಕರು ಕಿಕ್ಕಿರಿದು ಬರುತ್ತಿದ್ದು, ಬಹುದಿನಗಳ ನಂತರ ಚಿತ್ರಮಂದಿರದಲ್ಲಿ ತುಂಬಿದ ಪ್ರದರ್ಶನ ಕಾಣುತ್ತಿದ್ದು ಹಬ್ಬದ ವಾತಾವರಣವೇ ನಿರ್ಮಾಣವಾಗಿದೆ.
ರಾಜ್ಯಾದ್ಯಂತ ಈಗ ಸೂಪರ್ ಹಿಟ್ ಆಗಿರುವ ಈ ಚಿತ್ರ ಕಳೆದ ಸೆ.25 ಬಿಡುಗಡೆಯಾಗಿದ್ದು, ಚಿತ್ರದ ನಾಯಕ ನಟ ಶ್ರೀರಾಮ್, ನಾಯಕಿಯರಾದ ರಮಿಕಾ ಶಿವು ಮತ್ತು ತಪಸ್ವಿನಿ ಪೂಣಚ್ಚ ಅಭಿನಯ ಸೇರಿದಂತೆ ರಂಗಾಯಣ ರಘು, ಗೋವಿಂದೇ ಗೌಡರ ಮುಖ್ಯ ಪಾತ್ರ ಜನಮನ ಸೆಳೆದಿದೆ. ಸಂಗೀತ ಸುನಾದ್ ಗೌತಮ್ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಮನೋಜ್ ಕುಮಾರ್ (ಅಕ್ಷಿ ಖ್ಯಾತಿ) ಚಿತ್ರದ ನಿರ್ದೇಶಕರಾಗಿ, ಮಮತಾ ದೇವೇಂದ್ರ ಎಂ., ಪ್ರಶಾಂತ್ ಡಿ.ಎಸ್., ರಮೇಶ ಎನ್.ವೆನಿಲ್ಲಾ ನಿರ್ಮಾಣದಲ್ಲಿ ಚಿತ್ರ ಮೂಡಿಬಂದಿದೆ. ಅ.2ರಿಂದ ಇಲ್ಲಿನ ಮಾರುತಿ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುತ್ತಿದ್ದು, ಕಳೆದ ಎಂಟು ದಿನಗಳಿಂದ ಜನ ಸಾಗರವೇ ಹರಿದುಬರುತ್ತಿದ್ದು, ಹಸಿರು ಹೊಲ, ರೈತನ ಬದುಕು, ತಂದೆ- ಮಗನ ಬಾಂಧವ್ಯದ ಕೌಟುಂಬಿಕ ಕಥೆಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.