ಕೃಷಿ, ತೋಟಗಾರಿಕಾ ಮೇಳದಲ್ಲಿ ಜನ ಜಂಗುಳಿ

KannadaprabhaNewsNetwork |  
Published : Nov 09, 2025, 01:45 AM IST
ಪೋಟೋ: 08ಎಸ್‌ಎಂಜಿಕೆಪಿ5ಶಿವಮೊಗ್ಗದ ನವುಲೆಯಲ್ಲಿರುವ ಕೃಷಿ ವಿವಿ ಆವರಣದಲ್ಲಿ ಆಯೋಜಿಸಿರುವ ಕೃಷಿ ಮೇಳದಲ್ಲಿ ಶನಿವಾರ ವಿವಿಧ ಮಳಿಗೆಯಲ್ಲಿ ಖರೀದಿಗೆ ಮುಗಿಬಿದ್ದಿದ್ದ ಜನ.  | Kannada Prabha

ಸಾರಾಂಶ

ನವುಲೆಯ ಕೃಷಿ ಮತ್ತು ತೋಟಗಾರಿಕೆ ವಿದ್ಯಾವಿದ್ಯಾಲಯದಲ್ಲಿ ಆಯೋಜಿಸಿರುವ ಕೃಷಿ ಮತ್ತು ತೋಟಗಾರಿಕೆ ಮೇಳದ ಎರಡನೇ ದಿನವಾದ ಶನಿವಾರ ರೈತರು ಸೇರಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ವ್ಯವಸಾಯ ಕ್ಷೇತ್ರದಲ್ಲಿ ಆಗಿರುವ ಹೊಸ ಆವಿಷ್ಕಾರ, ನವೀನ ತಂತ್ರಜ್ಞಾನ ಹಾಗೂ ವಿವಿಧ ಬೆಳೆಗಳು, ಪುಷ್ಪಗಳ ಕುರಿತು ಮಾಹಿತಿ ಪಡೆದು ಪುಳಕಿತರಾದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನವುಲೆಯ ಕೃಷಿ ಮತ್ತು ತೋಟಗಾರಿಕೆ ವಿದ್ಯಾವಿದ್ಯಾಲಯದಲ್ಲಿ ಆಯೋಜಿಸಿರುವ ಕೃಷಿ ಮತ್ತು ತೋಟಗಾರಿಕೆ ಮೇಳದ ಎರಡನೇ ದಿನವಾದ ಶನಿವಾರ ರೈತರು ಸೇರಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ವ್ಯವಸಾಯ ಕ್ಷೇತ್ರದಲ್ಲಿ ಆಗಿರುವ ಹೊಸ ಆವಿಷ್ಕಾರ, ನವೀನ ತಂತ್ರಜ್ಞಾನ ಹಾಗೂ ವಿವಿಧ ಬೆಳೆಗಳು, ಪುಷ್ಪಗಳ ಕುರಿತು ಮಾಹಿತಿ ಪಡೆದು ಪುಳಕಿತರಾದರು.

ಕೃಷಿ ಮೇಳದಲ್ಲಿ ಸುಮಾರು 225 ಹೈಟೆಕ್ ಮಳಿಗೆಗಳು, 150 ಎಕಾನಮಿ ಮಳಿಗೆಗಳು, 25 ಯಂತ್ರೋಪಕರಣ ಮಳಿಗೆಗಳು, 40 ಆಹಾರ ಮಳಿಗೆಗಳು ಒಟ್ಟಾರೆಯಾಗಿ ಸುಮಾರು 450 ಮಳಿಗೆಗಳಲ್ಲಿ ಕೃಷಿ ಮತ್ತು ತೋಟಗಾರಿಕಾ ಸಂಬಂಧಿತ ತಾಂತ್ರಿಕ ಮಾಹಿತಿಗಳು ಯಂತ್ರೋಪಕರಣಗಳ ಪ್ರದರ್ಶನ ಸಾರ್ವಜನಿಕರ ಗಮನ ಸೆಳೆಯಿತು.

ಮೇಳದ ಮೊದಲ ದಿನವಾದ ಶುಕ್ರವಾರ 50 ಸಾವಿರಕ್ಕೂ ಹೆಚ್ಚು ಸಾರ್ವಜನಿಕರು, ರೈತರು ಹಾಗೂ ವಿವಿಧ ಕೃಷಿ ಕಾಲೇಜುಗಳ ವಿದ್ಯಾರ್ಥಿಗಳು, ಉಪನ್ಯಾಸಕರು ಈ ಮೇಳದಲ್ಲಿ ಭಾಗವಹಿಸಿ ಮಾಹಿತಿ ಪಡೆದರೆ, ಎರಡನೇ ದಿನವಾದ ಶನಿವಾರ 70 ಸಾವಿರಕ್ಕೂ ಸರ್ಕಾರದ ವಿವಿಧ ಇಲಾಖೆಗಳ ಮಳಿಗೆಗಳು ಕೂಡ ಗಮನ ಸೆಳೆದಿವೆ.

ಸರ್ಕಾರದ ವಿವಿಧ ಇಲಾಖೆಗಳು ಪ್ರದರ್ಶಿಸಿದ್ದ ಮಳಿಗೆಗಳು ಜನರಿಂದ ತುಂಬಿದ್ದವು. ಅಲ್ಲಿ ವಿವಿಧ ವಿಷಯಗಳ ಬಗ್ಗೆ ಪ್ರದರ್ಶಿಸಿದ್ದ ತಂತ್ರಜ್ಞಾನ ಹಾಗೂ ಕೃಷಿಗೆ ಪೂರಕವಾದ ಉತ್ಪನ್ನ, ಉಪಕರಣಗಳನ್ನು ಜನರು ಕುತೂಹಲದಿಂದ ವೀಕ್ಷಿಸಿದರು. ಪ್ರಮುಖವಾಗಿ ಕಾನೂನು ಸೇವಾ ಪ್ರಾಧಿಕಾರದಿಂದ ಉಚಿತ ಕಾನೂನು ಸಲಹೆ-ಸೂಚನೆ ಹಾಗೂ ಅರಿವು ಮೂಡಿಸುವ ಮಳಿಗೆ ಮತ್ತು ಮಕ್ಕಳ ರಕ್ಷಣಾ ಘಟಕದಿಂದ ಮಕ್ಕಳ ಹಕ್ಕುಗಳು ಮತ್ತು ಪರಿತ್ಯಕ್ತ ಮಕ್ಕಳಿಗೆ ಸರ್ಕಾರದ ಸಹಾಯಹಸ್ತದ ಅರಿವು ನೀಡುವ ಮಳಿಗೆ ಅಲ್ಲದೆ ಕೃಷಿಯಲ್ಲಿ ನೂತನ ಆವಿಷ್ಕಾರದ ಯಂತ್ರೋಪಕರಣ ಹಾಗೂ ಔಷಧಿ ಮಳಿಗೆಗಳು, ಅಣಬೆ ಕೃಷಿ, ತೆಂಗು, ಬಾಳೆ, ಅಡಿಕೆ, ಭತ್ತ ಮುಂತಾದ ಬೆಳೆಗಳ ಹಾಗೂ ವಿವಿಧ ಸಂಶೋಧನಾ ತಳಿಗಳ ಮಾದರಿಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳ ಬಗ್ಗೆ ಮತ್ತು ಮಾರುಕಟ್ಟೆಯ ಬಗ್ಗೆ ಉಪನ್ಯಾಸವನ್ನು ಏರ್ಪಡಿಸಲಾಗಿತ್ತು. ಸಾಧನೆಗೈದ ಪ್ರಗತಿಪರ ರೈತರನ್ನು ವೇದಿಕೆಯಲ್ಲಿ ಅಭಿನಂದಿಸಲಾಯಿತು.

ನ.10ರ ವರೆಗೆ ನಡೆಯುವ ಈ ಕೃಷಿಮೇಳದಲ್ಲಿ 2ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದ್ದು, ಕೃಷಿಕರು ಇದರ ಪ್ರಯೋಜನ ಪಡೆಯುವಂತೆ ಆಯೋಜಕರು ವಿನಂತಿಸಿದ್ದಾರೆ.

ದತ್ತು ಪ್ರಕ್ರಿಯೆಯನ್ನು ಪ್ರೋತ್ಸಾಹಿಸಲು ಸ್ಟಾಲ್ ಅಳವಡಿಕೆ

ಶಿವಮೊಗ್ಗ : ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ ನ.7 ರಿಂದ 10ರ ವರೆಗೆ ಶಿವಮೊಗ್ಗ ಜಿಲ್ಲೆಯ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿರುವ ಕೃಷಿ ಮತ್ತು ತೋಟಗಾರಿಕಾ ಮೇಳದಲ್ಲಿ ರಾಷ್ಟ್ರೀಯ ದತ್ತು ಮಾಸಾಚರಣೆ ಪ್ರಯುಕ್ತ ಸಾರ್ವಜನಿಕರಿಗೆ ದತ್ತು ಪ್ರಕ್ರಿಯೆಯನ್ನು ಪ್ರೋತ್ಸಾಹಿಸಲು ಮತ್ತು ಪರಿತ್ಯಕ್ತ ಮಕ್ಕಳು ಕಂಡು ಬಂದಲ್ಲಿ 1098 ಮಾಹಿತಿ ನೀಡಲು ಸ್ಟಾಲ್ ಅಳವಡಿಸಲಾಗಿದೆ.

ಪ್ರತಿಯೊಂದು ಮಗುವೂ ಒಂದು ಕುಟುಂಬ ಅಥವಾ ಕುಟುಂಬದಂತಹ ವಾತಾವರಣಕ್ಕೆ ಅರ್ಹವಾಗಿದೆ ಎಂಬ ನಂಬಿಕೆಯಲ್ಲಿ ನೆಲೆಗೊಂಡಿರುವ ಈ ವರ್ಷದ ಅಭಿಯಾನವು, ವಿಶೇಷ ಅಗತ್ಯವಿರುವ ಮಕ್ಕಳ ಸಾಂಸ್ಥಿಕವಲ್ಲದ ಪುನರ್ವಸತಿಯನ್ನು ಉತ್ತೇಜಿಸುವಲ್ಲಿ ಎಲ್ಲರೂ ಸಹಯೋಗದಿಂದ ಕೆಲಸ ಮಾಡಲು ಕರೆ ನೀಡುತ್ತದೆ.

ಈ ಮಕ್ಕಳು ಪ್ರೀತಿ, ಆರೈಕೆ ಮತ್ತು ಬೆಳವಣಿಗೆಯ ಅವಕಾಶಗಳಿಗೆ ಕಡಿಮೆ ಅರ್ಹರಲ್ಲ. ಒಂದು ಕುಟುಂಬವು ಮಗುವಿನ ಸಮಗ್ರ ಬೆಳವಣಿಗೆಗೆ ಅತ್ಯಂತ ಅನುಕೂಲಕರವಾದ ಪೋಷಣೆಯ ವಾತಾವರಣವನ್ನು ಒದಗಿಸುತ್ತದೆ ಮತ್ತು ಇದು ವಿಶೇಷ ಅಗತ್ಯವಿರುವ ಮಕ್ಕಳು ಸೇರಿದಂತೆ ಎಲ್ಲಾ ಮಕ್ಕಳಿಗೆ ಅವಶ್ಯಕವಾಗಿದೆ ಹಾಗೂ ಹೆಚ್ಚು ಅಂತರ್ಗತ, ಸಹಾನುಭೂತಿ ಮತ್ತು ಸ್ಪಂದಿಸುವ ಈ ದತ್ತು ಪರಿಸರ ವ್ಯವಸ್ಥೆಯನ್ನು ಕಾನೂನು ರೀತಿಯಲ್ಲಿ ಭದ್ರಪಡಿಸಲು ತಿಳಿಸಲಾಗಿದೆ.

PREV

Recommended Stories

ವಂದೇ ಮಾತರಂ ಭಾರತ ಮಾತೆಯ ಪ್ರೇರಣಾ ಶಕ್ತಿ: ಸಂಸದ ಗದ್ದಿಗೌಡರ
10, 11, ರಂದು ರಾಜ್ಯ ಟ್ರ್ಯಾಕ್‌ ಸೈಕ್ಲಿಂಗ್‌ ತಂಡಗಳ ಆಯ್ಕೆ