21ರಂದು ಸಿಎನ್‌ಸಿಯಿಂದ ವಿಚಾರ ಸಂಕಿರಣ

KannadaprabhaNewsNetwork |  
Published : Mar 17, 2026, 02:45 AM IST
 | Kannada Prabha

ಸಾರಾಂಶ

ವಿಶ್ವ ಜನಾಂಗೀಯ ತಾರತಮ್ಯ ನಿರ್ಮೂಲನಾ ದಿನವಾದ ಮಾ. 21ರಂದು ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ಸಂಘಟನೆ ವತಿಯಿಂದ ಮಡಿಕೇರಿ ಹೊರ ವಲಯದ ಕ್ಯಾಪಿಟಲ್ ವಿಲೇಜ್ ನಲ್ಲಿ ವಿಚಾರ ಸಂಕಿರಣ ನಡೆಯಲಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ವಿಶ್ವ ಜನಾಂಗೀಯ ತಾರತಮ್ಯ ನಿರ್ಮೂಲನಾ ದಿನವಾದ ಮಾ. 21ರಂದು ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ಸಂಘಟನೆ ವತಿಯಿಂದ ಮಡಿಕೇರಿ ಹೊರ ವಲಯದ ಕ್ಯಾಪಿಟಲ್ ವಿಲೇಜ್ ನಲ್ಲಿ ವಿಚಾರ ಸಂಕಿರಣ ನಡೆಯಲಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ ತಿಳಿಸಿದ್ದಾರೆ.

ಆದಿಮಸಂಜಾತ ಏಕ-ಜನಾಂಗೀಯ ಪ್ರಕೃತಿ ಆರಾಧಕ ಆನಿಮಿಸ್ಟಿಕ್ ಕೊಡವರಿಗಾಗಿ ಸಂವಿಧಾನದಡಿ ‘ಭೂ-ರಾಜಕೀಯ ಸ್ವಾಯತ್ತತೆ’ ಮತ್ತು ‘ವಿಶೇಷ ಸ್ಥಾನಮಾನ’ಕ್ಕಾಗಿ ಶನಿವಾರ ಬೆಳಗ್ಗೆ 10 ಗಂಟೆಗೆ ಹಮ್ಮಿಕೊಂಡಿರುವ ‘ಕೊಡವ ಕ್ವೆಸ್ಟ್’ ವಿಚಾರ ಸಂಕಿರಣದಲ್ಲಿ ಶಾಸನ ರೂಪಿಸುವವರು, ನ್ಯಾಯವಾದಿಗಳು ಹಾಗೂ ಶಿಕ್ಷಣ ತಜ್ಞರು ಹಕ್ಕೊತ್ತಾಯದ ಕುರಿತು ಚರ್ಚೆ ನಡೆಸಲಿದ್ದಾರೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಾರತದ ಈಶಾನ್ಯ ರಾಜ್ಯಗಳಿಗೆ 244 ಮತ್ತು 371ನೇ ವಿಧಿಗಳಡಿ ನೀಡಲಾಗಿರುವ ಮಾದರಿಯಲ್ಲೇ, ಅಲ್ಪಸಂಖ್ಯಾತ ಸೂಕ್ಷ್ಮ ಕೊಡವ ಜನಾಂಗದ ಭೂಮಿ, ಎಸ್‌ಟಿ ಜನಾಂಗೀಯ ವರ್ಗೀಕರಣ, ಕೊಡವರ ಧಾರ್ಮಿಕ ಸಂಸ್ಕಾರವಾದ ಸಾಂಪ್ರದಾಯಿಕ ಬಂದೂಕು ಹಕ್ಕು, ಭಾಷೆ, ಸಾಂಸ್ಕೃತಿಕ ಪರಂಪರೆ, ಸಾಂಪ್ರದಾಯಿಕ ಕಾನೂನು ಹಾಗೂ ಆರ್ಥಿಕ ಮತ್ತು ರಾಜಕೀಯ ಸ್ವಾತಂತ್ರ‍್ಯಕ್ಕಾಗಿ ಕಳೆದ 36 ವರ್ಷಗಳಿಂದ ಕೊಡವ ಜನಾಂಗದ ಅಪ್ರತಿಮ ಧ್ವನಿಯಾಗಿ ಸಿಎನ್‌ಸಿ ಶಾಂತಿಯುತ ಮತ್ತು ನಿರಂತರವಾಗಿ ಸಂವಿಧಾನಬದ್ಧವಾಗಿ ಹೋರಾಟವನ್ನು ನಡೆಸುತ್ತಾ ಬಂದಿದೆ.

ಇದೀಗ ಕೊಡವರ ಹಕ್ಕುಗಳು, ಸ್ವಯಂ ಆಡಳಿತ ಮತ್ತು ಸ್ವಾಯತ್ತತೆಯನ್ನು ಎತ್ತಿ ತೋರಿಸುವ ಉದ್ದೇಶದಿಂದ ಸಿಎನ್‌ಸಿ ಆಯೋಜಿಸಿರುವ ಈ ವಿಚಾರ ಸಂಕಿರಣವು ಒಂದು ಮಹತ್ವದ ಹೆಜ್ಜೆಯಾಗಿದೆ. ರಾಷ್ಟ್ರೀಯ ಜನಗಣತಿಯಲ್ಲಿ ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಂನ್ನು ಕೋರುವ ಮೂಲಕ, ಸಾಂವಿಧಾನಿಕ ಹಕ್ಕುಗಳಿಗೆ ಬಲವಾದ ಅಡಿಪಾಯವನ್ನು ಸ್ಥಾಪಿಸುವ ಗುರಿ ಸಿಎನ್‌ಸಿ ಹೊಂದಿದೆ.

ಸಂವಿಧಾನದ 244 ಮತ್ತು 371ನೇ ವಿಧಿಗಳೊಂದಿಗಿನ ಹೋಲಿಕೆಯು ಗಮನಾರ್ಹವಾಗಿದೆ. ಭಾರತದ ಈಶಾನ್ಯ ರಾಜ್ಯಗಳಂತೆಯೇ ಮಾನ್ಯತೆ ಮತ್ತು ಸ್ವಾಯತ್ತತೆಯನ್ನು ಪಡೆಯುವ ಆಶಯ ನಮ್ಮದಾಗಿದೆ. ವಿಚಾರಣ ಸಂಕಿರಣ ಮೂಲಕ ವಿಶ್ವ ಜನಾಂಗೀಯ ತಾರತಮ್ಯ ನಿರ್ಮೂಲನಾ ದಿನವನ್ನು ಅರ್ಥಪೂರ್ಣಗೊಳಿಸಲಾಗುವುದು ಎಂದು ಎನ್.ಯು. ನಾಚಪ್ಪ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಾನಪದ ಕಲೆಗಳಿಗೆ ಪ್ರಕೃತಿ ನಿಕಟ ಸಂಬಂಧ: ಟಿ.ಪಿ. ರಮೇಶ್
ಮೂಡುಬಿದಿರೆ ಇನ್ಸ್‌ಪೆಕ್ಟರ್ ಪ್ರಕರಣ: ಪೀಡಿತೆಯರಿದ್ದರೆ ದೂರು ನೀಡಲು ಸಲಹೆ