ಸಿಎಸ್ಆರ್ ಅನುದಾನ ಶಾಲಾ ಕಟ್ಟಡ ನಿರ್ಮಾಣಕ್ಕೆ ಬಳಕೆಯಾಗಲಿ

KannadaprabhaNewsNetwork | Published : Aug 29, 2024 12:54 AM

ಸಾರಾಂಶ

ಇಂಡಸ್ಟ್ರಿ ಕಂಪನಿಯವರೇ ತಮಗೆ ಇಷ್ಟವಾದ ಶಾಲೆಯನ್ನು ಆಯ್ಕೆ ಮಾಡಿಕೊಂಡು ತಮ್ಮದೆ ಶೈಲಿಯಲ್ಲಿ ಕಟ್ಟಡ ನಿರ್ಮಿಸಿ ಅಭಿವೃದ್ಧಿಗೆ ಮುಂದಾಗಬೇಕು

ಗದಗ: ಜಿಲ್ಲೆಯಲ್ಲಿರುವ ಉದ್ದಿಮೆಗಳು ಹಾಗೂ ಕೈಗಾರಿಕಾ ಸಂಸ್ಥೆಗಳು ತಮ್ಮ ಸಿ.ಎಸ್.ಆರ್. ಅನುದಾನವನ್ನು ಸ್ಥಳೀಯ ಸರ್ಕಾರಿ ಶಾಲಾ ಕಟ್ಟಡಕ್ಕೆ ಬಳಕೆ ಮಾಡಬೇಕು. ಈ ಮೂಲಕ ಶೈಕ್ಷಣಿಕ ಕ್ರಾಂತಿಗೆ ಉದ್ದಿಮೆದಾರರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.

ನಗರದ ಜಿಲ್ಲಾಡಳಿತ ಭವನದ ಸಭಾ ಭವನದಲ್ಲಿ ಬುಧವಾರ ಜಿಲ್ಲೆಯ ಉದ್ದಿಮೆಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಿಎಸ್‌ಆರ್ ಅನುದಾನವನ್ನು ಸ್ಥಳೀಯ ಶಾಲೆಗಳಿಗೆ ನೀಡಬಹುದು. ಇಲ್ಲವೇ ತಾವೇ ಸಿಎಸ್‌ಆರ್ ಅನುದಾನದಿಂದ ಇಲಾಖೆ ಗುರುತಿಸಿದ ನಿವೇಶನದಲ್ಲಿ ಶಾಲಾ ಕೊಠಡಿ ಕಟ್ಟಡ ನಿರ್ಮಾಣ ಮಾಡಬಹುದು. ಆ ಮೂಲಕ ತಾವು ನೀಡಿದ ಕೊಡುಗೆ ಶಾಶ್ವತವಾಗಿರಲಿದೆ. ಅನುದಾನ ನೀಡುವುದರಿಂದ ಕಂಪನಿಯ ಬ್ರ್ಯಾಂಡಿಂಗ್ ಮಾಡಲು ಸಹಕಾರಿಯಾಗುತ್ತದೆ. ಇಲ್ಲಿಯ ಮೂಲಭೂತ ಸೌಕರ್ಯಗಳನ್ನು ಬಳಸಿ ಇಂಡಸ್ಟ್ರೀಗಳು ನಡೆಯುತ್ತವೆ. ಹಾಗಾಗಿ, ಸಿಎಸ್ಆರ್ ಅನುದಾನವನ್ನು ಇಲ್ಲಿಯೇ ಸ್ಥಳೀಯವಾಗಿ ಬಳಕೆ ಮಾಡಿ ಎಂದು ತಿಳಿಸಿದರು.

ಸಿ.ಎಸ್.ಆರ್‌. ಅನುದಾನ ನೀಡಲು ಕಂಪನಿಗಳು ಮುಕ್ತವಾಗಿದ್ದು, ಸ್ವತಃ ಇಂಡಸ್ಟ್ರಿ ಕಂಪನಿಯವರೇ ತಮಗೆ ಇಷ್ಟವಾದ ಶಾಲೆಯನ್ನು ಆಯ್ಕೆ ಮಾಡಿಕೊಂಡು ತಮ್ಮದೆ ಶೈಲಿಯಲ್ಲಿ ಕಟ್ಟಡ ನಿರ್ಮಿಸಿ ಅಭಿವೃದ್ಧಿಗೆ ಮುಂದಾಗಬೇಕು. ಸರ್ಕಾರ ನಿರಂತರವಾಗಿ ಉದ್ಯಮಗಳ ಅಭಿವೃದ್ಧಿಗೆ ಮತ್ತು ಸ್ಥಾಪನೆಗೆ ಅಗತ್ಯ ಸಹಕಾರ ನೀಡುತ್ತ ಬಂದಿದೆ. ಪ್ರಮುಖ ಉತ್ತಮ ಕಾರ್ಯಗಳೊಂದಿಗೆ ಸಾಗುತ್ತಿರುತ್ತದೆ. ಕೈಗಾರಿಕೆಗಳ ಸ್ಥಾಪನೆಗೆ ಮತ್ತು ಚಾಲನೆಗೆ ಸರ್ಕಾರ ಪ್ರೋತ್ಸಾಹ ನೀಡುತ್ತದೆ. ಹಾಗೆಯೇ ಕೈಗಾರಿಕೆಗಳು ತಮ್ಮ ಸಿಎಸ್ಆರ್ ಅನುದಾನ ಮೂಲಕ ಸಹಕಾರ ನೀಡಬೇಕು.

ಈಗಾಗಲೇ ಎಲ್ಲ ಇಂಡಸ್ಟ್ರಿಗಳು ತಮ್ಮ ಸಿ.ಎಸ್.ಆರ್. ಅನುದಾನದ ಮೂಲಕ ಸಾಮಾಜಿಕ ಕಾರ್ಯ ಮಾಡಿದ್ದಿರಿ. ಅದರ ಜೊತೆ ಇನ್ನಷ್ಟು ಉತ್ತಮ ಕಾರ್ಯವಾಗಲಿ ಎಂದು ತಿಳಿಸಿದರು.

ಜಿಪಂ ಸಿಇಒ ಭರತ್‌ ಎಸ್. ಮಾತನಾಡಿ, ಪ್ರತಿ ಇಂಡಸ್ಟ್ರಿಯ ಶೇ. 2ರಷ್ಟು ಸಿಎಸ್ಆರ್ ಅನುದಾನವನ್ನು ಸ್ಥಳೀಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಕಟ್ಟಡ ನಿರ್ಮಾಣಕ್ಕೆ ಮತ್ತು ಒಳ್ಳೆಯ ಗುಣಮಟ್ಟದ ಶಿಕ್ಷಣಕ್ಕೆ ನೀಡುವಂತೆ ಕೋರಿದರು.

ಈ ವೇಳೆ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಶಿವಪುತ್ರಪ್ಪ ಎಚ್., ಉಪನಿರ್ದೇಶಕ ವಿನಾಯಕ ಜೋಶಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಕ ಜಿ.ಎಲ್. ಬಾರಟಕ್ಕೆ, ಲೀಡ್ ಬ್ಯಾಂಕ್ ಮ್ಯಾನೇಜರ್ ಸಂತೋಷ್ ಸೇರಿದಂತೆ ಉದ್ದಿಮೆದಾರರು ಇದ್ದರು.

Share this article