ಹಲಗೂರು: ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೆ ಭಾಷಾಭಿಮಾನ, ದೇಶಾಭಿಮಾನ ಬೆಳೆಸಿದರೆ ಅವರು ಸಮಾಜದಲ್ಲಿ ಸತ್ಪ್ರಜೆಯಾಗುತ್ತಾರೆ ಎಂದು ಬೆಂಗಳೂರಿನ ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿಶ್ಚಲಾನಂದನಾಥಸ್ವಾಮೀಜಿ ತಿಳಿಸಿದರು.
ಅಶ್ವಿನ್ ದಂಪತಿ ಮತ್ತು ಕುಟುಂಬದವರು ಬಹಳ ಕಷ್ಟಪಟ್ಟು ಶಿಕ್ಷಣ ಸಂಸ್ಥೆಯನ್ನು ತೆರೆದು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಆಧುನಿಕ ರೀತಿಯ ಗುಣಮಟ್ಟದ ನೈತಿಕ ಶಿಕ್ಷಣ ನೀಡಬೇಕೆಂಬ ದೃಷ್ಟಿಯಲ್ಲಿ 5ನೇ ತರಗತಿಯವರೆಗೆ ಶಾಲೆಯನ್ನು ಪ್ರಾರಂಭಿಸಿ ಲೋಕಾರ್ಪಣೆ ಮಾಡಿದ್ದಾರೆ ಎಂದರು.
ಕೇವಲ ಅಂಕಗಳೇ ಮುಖ್ಯ ಎಂಬ ಭಾವನೆಯನ್ನು ತೊಡೆದು ಹಾಕಿ ಸುಸಂಸ್ಕೃತ ಮೌಲ್ಯಯುತವಾದ ಶಿಕ್ಷಣವನ್ನು ನೀಡುವಂತಹ ಸಂಸ್ಥೆ ಇದಾಗಲಿ. ಮಕ್ಕಳು ಶಾಲೆಗೆ ಬರುವ ಉದ್ದೇಶ , ಭಯ ಭಕ್ತಿಯನ್ನು ವೃದ್ಧಿಸಿಕೊಂಡು ಸಹೃದಯತೆಯೊಂದಿಗೆ ಅತ್ಯುತ್ತಮ ಮೌಲ್ಯಗಳನ್ನು ಉಳಿಸಿ ಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಇಂದು ಸಮಾಜದಲ್ಲಿ ಶಿಕ್ಷಣ ನೀಡುವುದು ಪೈಪೋಟಿಯುತವಾಗಿದೆ .ಆದರೂ ಧೈರ್ಯ ಮಾಡಿ ಈ ಭಾಗದಲ್ಲಿ ವಿದ್ಯಾಧಾರೆ ಸ್ಕೂಲನ್ನು ತೆರೆದಿರುವ ಅಶ್ವಿನ್ ಅವರಿಗೆ ದೇವರು ಯಶಸ್ಸನ್ನು ನೀಡಲಿ ಎಂದು ಹಾರೈಸುತ್ತೇನೆ ಎಂದು ತಿಳಿಸಿದರು.