ಕನ್ನಡಪ್ರಭ ವಾರ್ತೆ ಇಂಡಿ
ಧರ್ಮದ ಜತೆಗೆ ದೇಶ ಕಾಪಾಡಬೇಕು, ದೇಶ ಉಳಿದರೇ ಧರ್ಮ ಉಳಿಯುತ್ತದೆ. ಧರ್ಮ ರಕ್ಷಣೆಗೆ ಮುಂದಾದರೆ ಧರ್ಮ ನಮ್ಮನ್ನು ಸಂರಕ್ಷಿಸುತ್ತದೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾದ್ಯ ಶಿವಾಚಾರ್ಯ ಭಗವತ್ಪಾದರು ನುಡಿದರು.ತಾಲೂಕಿನ ಗೋಳಸಾರ ಗ್ರಾಮದಲ್ಲಿ ಸದ್ಗುರು ಚಿನ್ಮಯಮೂರ್ತಿ ತ್ರೀಧರೇಶ್ವರ ಮಹಾಶಿವಯೋಗಿಗಳ 31ನೇ ಪುಣ್ಯಾರಾಧನೆ ನಿಮಿತ್ತ ಶುಕ್ರವಾರ ಹಮ್ಮಿಕೊಂಡ ಧರ್ಮಸಭೆ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಜಾತಿ ಮನೋಭಾವನೆಗೆ ಹೆಚ್ಚು ಒತ್ತು ನೀಡಬಾರದು. ಕೆಳಗೆ ಬಿದ್ದವರನ್ನು, ಬಿಳುತ್ತಿರುವುದನ್ನು ಮೇಲೆ ಎತ್ತುವುದೇ ಧರ್ಮ. ಪ್ರತಿ ಧರ್ಮದವರ ಆಚಾರ, ವಿಚಾರ ಬೇರೆ ಇದ್ದರೂ ಸಹಿತ ಪರಸ್ಪರ ಪ್ರೀತಿ, ಗೌರವ, ಪರೋಪಕಾರದಿಂದ ಬದುಕಬೇಕು. ಎಲ್ಲ ಧರ್ಮಿಯರು ಸಹಿಷ್ಣತೆಯಿಂದ ದೇಶಾಭಿಮಾನ ರೂಢಿಸಿಕೊಂಡು ಭಾರತದ ಏಕತೆ ಕಾಪಾಡಬೇಕು ಎಂದರು.ಧನಾಭಿಮಾನ ಬಿಟ್ಟು ಧರ್ಮಾಭಿಮಾನ ಇಟ್ಟುಕೊಳ್ಳಬೇಕು. ದೇಹಾಭಿಮಾನ ಬಿಟ್ಟು ದೇಶಾಭಿಮಾನ ಬೆಳೆಸಿಕೊಳ್ಳಬೇಕು. ಜಾತಿ ಕತ್ತರಿಸುವ ಕೆಲಸ ಮಾಡಿದರೇ, ಧರ್ಮ ಸೂಜಿಯಂತೆ ಕೂಡಿಸುವ ಕೆಲಸ ಮಾಡುತ್ತದೆ. ರಾಜಕೀಯ ಮುಖಂಡರು ಸಹಿತ ಚುನಾವಣೆಯಲ್ಲಿ ಮಾತ್ರ ಪಕ್ಷ, ಪಂಗಡ ಮಾಡಿಕೊಂಡು, ಚುನಾವಣೆ ಮುಗಿದ ಮೇಲೆ ದೇಶದ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕಾರ್ಯಗಳ ಮೂಲಕ ತನ್ನ ಕೀರ್ತಿಯನ್ನು ಮಹಾರಾಷ್ಟ್ರ, ಕರ್ನಾಟಕ ವಿವಿಧ ಭಾಗಗಳಲ್ಲಿ ಬಾಹುಗಳನ್ನು ಚಾಚಿದ ಗೋಳಸಾರ ಮಠ, ಎಲ್ಲ ಪರಂಪರೆಯನ್ನು ಪ್ರೀತಿಸುವ ಮಠ ಇದಾಗಿದೆ. ಮಠದ ಪೀಠಾಧಿಪತಿ ಅಭಿನವ ಪುಂಡಲಿಂಗ ಶ್ರೀಗಳ ಭಾವನೆಗಳನ್ನು ಗಮನಿಸಿದ್ದೇನೆ. ಅವರ ಪ್ರೀತಿ, ವಾತ್ಸಲ್ಯಗಳಿಂದ ಭಕ್ತ ಸಾಗರವೇ ಹರಿದು ಬಂದಿದೆ. ಗೋಳಸಾರ ಮಠ ಶ್ರೀಶೈಲ ಪೀಠದ ಶಾಖೆ ಅಲ್ಲದಿದ್ದರೂ, ಇದು ಶೈಶೈಲ ಪೀಠದ ಖಾಸಾಮಠ ಎಂದು ಬಣ್ಣಿಸಿದರು.ಶ್ರೀಗಳ ಮಾತು ಮೌನವಾದರೂ ಅವರ ಮಾಡಿದ ಸಮಾಜೋಧಾರ್ಮಿಕ ಕಾರ್ಯಗಳು ಮಾತನಾಡುತ್ತಿವೆ. ಆಡದೇ ಮಾಡುವವರ ಉತ್ತಮರ ಸಾಲಿನಲ್ಲಿ ಅಭಿನವ ಪುಂಡಲಿಂಗ ಶ್ರೀಗಳು ಸೇರುತ್ತಾರೆ. ಶರಣರ ತಪೋಭೂಮಿಯಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳು ಒಳ್ಳೆದಾಗಿಯೇ ನಡೆಯುತ್ತವೆ. ಸಾಮೂಹಿಕ ವಿವಾಹದಲ್ಲಿ ನಡೆಯುವ ಮದುವೆಗಳು ಬಡವರ ಮದುವೆ ಎಂದು ಕೆಲವರು ಮೂಗು ಮುರಿದುಕೊಳ್ಳುತ್ತಾರೆ. ಆದರೆ, ಇದು ನಿಜವಾಗಿ ಭಾಗ್ಯವಂತರ ಮದುವೆ ಎಂದು ತಿಳಿಸಿದರು.ಭಾರತೀಯ ಪರಂಪರೆಯಂತೆ 4 ಆಶ್ರಮಗಳಲ್ಲಿ ಗ್ರಹಸ್ಥಾಶ್ರಮ ಶ್ರೇಷ್ಠವಾದದ್ದು. ಧಾನ, ಧರ್ಮ ಪಾಲಿಸುವುದು ಗ್ರಹಸ್ಥಾಶ್ರಮ. ಎಲ್ಲ ಆಶ್ರಮಗಳು ಗ್ರಹಸ್ಥಾಶ್ರಮವನ್ನು ಅವಲಂಭಿಸಿವೆ. ಜಗತ್ತಿಗೆ ಮಹಾನ್ ಪುರುಷರನ್ನು, ಯೋಗಿ,ಶರಣರನ್ನು, ಜಗದ್ಗುರುಗಳನ್ನು ನಾಡಿಗೆ ನೀಡಿದ್ದು ಗ್ರಹಸ್ಥಾಶ್ರಮ. ಹಿಂತ ಗ್ರಹಸ್ಥಾಶ್ರಮಕ್ಕೆ ಕಾಲಿಡುತ್ತಿರುವ ನವ ಜೋಡಿಗಳು ಉತ್ತಮ ಮೌಲ್ಯ, ಸದ್ವಿಚಾರ, ಸದಾಚಾರದ ಮೂಲಕ ಒಳ್ಳೆಯ ಗುಣಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಸ್ವರ್ಗದ ಹಾದಿಗೆ ಹೋಗಬೇಕು.ದುರ್ಗುಣಗಳನ್ನು ಅಳವಡಿಕೊಂಡು ನರಕಕ್ಕೆ ಹೋಗುವುದು ಬೇಡ. ಸ್ವರ್ಗ,ನರಕ್ಕೆ ಹೋಗುವ ಎಲ್ಲವೂ ನಮ್ಮ ಕೈಯಲ್ಲಿ ಇದೆ ಎಂದರು.ಶಾಸಕ ಯಶವಂತರಾಯಗೌಡ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಂಚಪೀಠಗಳು ಧರ್ಮ ಜಾಗೃತಿ ಮಾಡುವ ಕಾರ್ಯದಲ್ಲಿ ತೊಡಗಿಕೊಂಡಿರುವುದು ಸಂತಸದ ಸಂಗತಿ. ನಮ್ಮ ಪೂರ್ವಾಜ್ಜರು ನಮಗೆ ಸಂಸ್ಕೃತಿ, ಸಂಸ್ಕಾರವನ್ನು ಕೊಟ್ಟಿದ್ದಾರೆ. ಸಂಸ್ಕಾರಯುತ ಬದುಕು ಸಾಗಿಸಬೇಕು ಎಂದರು.ಅಭಿನವ ಪುಂಡಲಿಂಗ ಮಹಾಶಿವಯೋಗಿಗಳು ಸಾನ್ನಿಧ್ಯ ವಹಿಸಿದ್ದರು. ವೃಷಭಲಿಂಗ ಶ್ರೀ, ರಾಚೋಟೇಶ್ವರ ಶ್ರೀ, ಗುರುಪಾದೇಶ್ವರ ಶ್ರೀ, ಅಭಿನವ ಶಿವಲಿಂಗೇಶ್ವರ ಶ್ರೀ, ರೇಣುಕಾ ಶಿವಾಚಾರ್ಯ, ಸೋಮಲಿಂಗ ಮಹಾರಾಜ ಸಾನ್ನಿಧ್ಯ ವಹಿಸಿದ್ದರು.ಕಾಸುಗೌಡ ಬಿರಾದಾರ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಪ್ರೊ.ಯು.ಎನ್.ಕುಂಟೋಜಿ ಮಾತನಾಡಿದರು. ದಯಾಸಾಗರ ಪಾಟೀಲ, ಬಿ.ಡಿ.ಪಾಟೀಲ, ಜಗದೀಶ ಕ್ಷತ್ರಿ, ರಮೇಶ ಗುತ್ತೇದಾರ, ಅಶೋಕ ಕೋಳಿ, ಬಾಬುಸಾಹುಕಾರ ಮೇತ್ರಿ, ಮಲ್ಲಿಕಾರ್ಜುನ ಮದರಿ, ಮನೋಹರ ಮಂದೋಲಿ, ಮಲ್ಲಿಕಾರ್ಜುನ ವಗ್ಗರ, ಗೀತಾ ಗುತ್ತರಗಿಮಠ, ಆನಂದಶಾಸ್ತ್ರಿ, ಹಣಮಂತ ಖಂಡೇಕರ, ಪುಂಡುಸಾಹುಕಾರ ನಿಂಬರಗಿ, ರವಿಕುಮಾರ ಕೆರುಟಗಿ ಇದ್ದರು.
ಈ ಸಂದರ್ಭದಲ್ಲಿ ಜಿ.ಎನ್.ತೆಗ್ಗೆಳ್ಳಿ, ಡಾ.ಶರಣಪ್ಪ ಮೇಡೆದಾರ, ಡಾ.ಮಹೇಂದ್ರ ಕಾಪ್ಸೆ, ರಾಜಶೇಖರ ನಿಂಬರಗಿ, ಕು.ಚಂದ್ರಕಾಂತ ಬಡದಾಳರವರಿಗೆ ತ್ರೀಮೂರ್ತಿ ಕಾರಣ್ಯ ಪ್ರಶಸ್ತಿ ನೀಡಲಾಯಿತು. ಡಾ.ಸೋಮನಾಳ ಯಾಳವಾರ ಬರೆದ ಗುರುಪುಂಡಲಿಂಗ ಲೀಲಾಮೃತ ಪುಸ್ತಕ ಬಿಡುಗಡೆ ಮಾಡಲಾಯಿತು.ಎಂ.ಆರ್.ಪಾಟೀಲ, ಎ.ಪಿ.ಕಾಗವಾಡಕರ, ಜಟ್ಟೆಪ್ಪ ಡೊಂಬಳಿ, ಚನ್ನುಗೌಡ ಪಾಟೀಲ, ಬತ್ತುಸಾಹುಕಾರ ಹಾವಳಗಿ, ಸಂಗಣ್ಣಸಾಹುಕಾರ ನಿಂಬರಗಿ, ಚಂದು ಸೊನ್ನ, ಶಿವಲಿಂಗಪ್ಪ ನಾಗಠಾಣ, ರಾಜಶೇಖರ ಖೇಡಗಿ, ರವೀಂದ್ರ ಆಳೂರ, ಆಲಿಂಗರಾಯ ಕುಮಸಗಿ ಮೊದಲಾದವರು ಕಾರ್ಯಕ್ರಮದಲ್ಲಿ ಇದ್ದರು. 35 ನವ ಜೋಡಿಗಳು ನವ ಜೀವನಕ್ಕೆ ಕಾಲಿಟ್ಟರು. ಶಿಕ್ಷಕ ಆದಪ್ಪ ಪಾಸೋಡಿ ಸ್ವಾಗತಿಸಿದರು. ರವೀಂದ್ರ ಆಳೂರ ನಿರೂಪಿಸಿ, ವಂದಿಸಿದರು. ಶಾಸಕ ಯಶವಂತರಾಯಗೌಡ ಪಾಟೀಲ ಅಪರೂಪದ ರಾಜಕಾರಣಿ. ಶಿಸ್ತು, ಧರ್ಮ ಪರಿಪಾಲನೆ ಬದುಕಿನಲ್ಲಿ ಅಳವಡಿಸಿಕೊಂಡವರು. ರಾಜಕಾರಣಿಗಳಲ್ಲಿಯೇ ವಿಶಿಷ್ಟತೆಯನ್ನು ಮೈಗೂಡಿಸಿಕೊಂಡಿರುವ ಶಾಸಕರಾದ ಯಶವಂತರಾಯಗೌಡರು ನೀತಿವಂತರಾಗಿ, ಸದಾಚಾರಿಗಳಾಗಿ, ಸದಾ ಅಭಿವೃದ್ಧಿಯ ಚಿಂತನೆಯನ್ನು ಇಟ್ಟುಕೊಂಡು, ಜನಸೇವೆ ಮಾಡುತ್ತಿದ್ದಾರೆ. ಭಗವಂತ ಅವರಿಗೆ ಆರೋಗ್ಯಭಾಗ್ಯ ಕರುಣಿಸಲಿ.
-ಡಾ.ಚನ್ನಸಿದ್ಧರಾಮ ಪಂಡಿತಾರಾದ್ಯ ಶಿವಾಚಾರ್ಯ ಭಗವತ್ಪಾದರು, ಶ್ರೀಶೈಲ ಪೀಠದ ಜಗದ್ಗುರು.ಧರ್ಮದ ಚಿಂತನಯೇ ದೇಶ ಕೊಡುಗೆ ನೀಡಿದೆ. ಸಾಮಾಜಿಕ ಕಳಕಳಿಯೊಂದಿಗೆ ಈ ಭಾಗದಲ್ಲಿ ಧರ್ಮ ಜಾಗೃತಿ ಮೂಡಿಸುವ ಕಾರ್ಯ ನಡೆಸುತ್ತಿರುವ ಮಠದ ಕಾರ್ಯ ಅನನ್ಯ. ಸಿದ್ದೇಶ್ವರ ಸ್ವಾಮೀಜಿಯಂತ ಶರಣರು, ಸಂತರು,ಯೋಗಿಗಳು ಹಾಕಿದ ಮಾರ್ಗದಲ್ಲಿ ನಡೆದು ಬದುಕು ಸುಂದರವಾಗಿಸಿಕೊಳ್ಳಬೇಕು. ಪ್ರಪಂಚಕ್ಕೆ ಧರ್ಮ ಜಾಗೃತಿ, ಶಾಂತಿ ದಯಪಾಲಿಸುತ್ತಿರುವ ಪಂಚಪೀಠಗಳ ಕಾರ್ಯ ಸ್ತುತ್ಯಾರ್ಹವಾದದ್ದು. ಗೋಳಸಾರ ಮಠಕ್ಕೆ ಭಕ್ತಸಮೂಹವೇ ಆಸ್ತಿ.
-ಯಶವಂತರಾಯಗೌಡ ಪಾಟೀಲ, ಶಾಸಕರು.