ಸಕಾರಾತ್ಮಕ ಚಿಂತನೆ ಬೆಳೆಸಿಕೊಳ್ಳಿ: ನಟ ಅನಿರುದ್ಧ

KannadaprabhaNewsNetwork |  
Published : Jan 18, 2025, 12:46 AM IST
ತುಮಕೂರು ವಿಶ್ವವಿದ್ಯಾನಿಲಯ ಸಾಂಸ್ಕೃತಿಕ ಚಟುವಟಿಕೆಗಳ ಘಟಕ ಶುಕ್ರವಾರ ಆಯೋಜಿಸಿದ್ದ ಅಂತರ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ ‘ಕಲ್ಪತರು ಉತ್ಸವ’ವನ್ನು ಕುಲಪತಿ ಪ್ರೊ. ಎಂ.ವೆಂಕಟೇಶ್ವರಲು ಉದ್ಘಾಟಿಸಿದರು. ಅನಿರುದ್ಧ ಜಟ್ಕರ್, ಅನುಷಾರಾಯ್, ದೀಪಿಕಾ ದಾಸ್, ನಾಹಿದಾ ಜಮ್‌ಜಮ್, ಪ್ರೊ.ಪ್ರಸನ್ನಕುಮಾರ್‌ಕೆ., ಪ್ರೊ. ಬಸವರಾಜು ಜಿ. ಹಾಗೂ ಡಾ.ದೇವರಾಜ್‌ ಎಸ್.ಇದ್ದಾರೆ. | Kannada Prabha

ಸಾರಾಂಶ

ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಶುಕ್ರವಾರ ಕಲ್ಪತರು ಉತ್ಸವದ ಸಂಭ್ರಮ ಹೆಚ್ಚಿದ್ದು ಹಬ್ಬದ ವಾತಾವರಣ ಮನೆಮಾಡಿತ್ತು. ಸಿನಿಮಾ ತಾರೆಯರಾದ ಅನಿರುದ್ಧ ಜತ್ಕರ್, ಅನುಷಾರಾಯ್ ಹಾಗೂ ದೀಪಿಕಾ ದಾಸ್‌ ಉತ್ಸವದ ಮೆರುಗನ್ನು ಹೆಚ್ಚಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರು

ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಶುಕ್ರವಾರ ಕಲ್ಪತರು ಉತ್ಸವದ ಸಂಭ್ರಮ ಹೆಚ್ಚಿದ್ದು ಹಬ್ಬದ ವಾತಾವರಣ ಮನೆಮಾಡಿತ್ತು. ಸಿನಿಮಾ ತಾರೆಯರಾದ ಅನಿರುದ್ಧ ಜತ್ಕರ್, ಅನುಷಾರಾಯ್ ಹಾಗೂ ದೀಪಿಕಾ ದಾಸ್‌ ಉತ್ಸವದ ಮೆರುಗನ್ನು ಹೆಚ್ಚಿಸಿದರು. ಕಲಾತಂಡಗಳ ಮೆರವಣಿಗೆಯಲ್ಲಿ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಭಾಗವಹಿಸಿ ಸಾಂಪ್ರದಾಯಿಕ ಉಡುಗೆ-ತೊಡುಗೆಗಳೊಂದಿಗೆ ವಿವಿಧ ಕಲಾಪ್ರಕಾರಗಳನ್ನು ಪ್ರತಿನಿಧಿಸಿದರು. ವೀರಗಾಸೆ, ಯಕ್ಷಗಾನ, ಕೋಲಾಟ, ಡೊಳ್ಳುಕುಣಿತ ಹೀಗೆ 20 ಕ್ಕೂ ಹೆಚ್ಚು ವಿದ್ಯಾರ್ಥಿ ಕಲಾತಂಡಗಳು ಭಾಗವಹಿಸಿದ್ದವು. ಮೆರವಣಿಗೆ ತುಮಕೂರು ವಿಶ್ವವಿದ್ಯಾನಿಲಯದಿಂದ ಆರಂಭವಾಗಿ ಶಿವಕುಮಾರ ಸ್ವಾಮೀಜಿ ವೃತದ ಮೂಲಕ ಸಾಗಿತು.ಚಿತ್ರನಟ ಅನಿರುದ್ಧ ಜತ್ಕರ್ ಮಾತನಾಡಿ, ನಮ್ಮ ಚಿಂತನೆಗಳು ಯಾವಾಗಲೂ ಸಕಾರಾತ್ಮಕವಾಗಿರಬೇಕು. ವಿದ್ಯೆಎಂಬುದು ಶಕ್ತಿಯುತವಾದ ಆಯುಧ. ವಿದ್ಯೆಯನ್ನು ಸಕಾರಾತ್ಮಕವಾದ ಕಾರ್ಯಗಳಿಗೆ ಬಳಸಿಕೊಂಡರೆ ಸಮಾಜದಲ್ಲಿರುವ ಕೊಳಕನ್ನು ತೊಳೆಯಬಹುದು. ಶಿಕ್ಷಣ ಕೇವಲ ಉದ್ಯೋಗಕ್ಕೆ ಸೀಮಿತವಾಗಬಾರದು.ಸಾಮಾಜಿಕ ಕಾರ್ಯಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕು ಎಂದರು.

ನಟಿ ಅನುಷಾರಾಯ್ ಮಾತನಾಡಿ ಯಾರೂ ಕದಿಯಲು ಸಾಧ್ಯವಾಗದ ಎರಡು ವಿಷಯಗಳೆಂದರೆ ವಿದ್ಯೆ ಮತ್ತು ಕಲೆ. ಶಿಕ್ಷಣ ಬದುಕಿಗೆ ಬಹಳ ಮುಖ್ಯವಾದ ಅಂಶ. ವಿದ್ಯಾರ್ಥಿ ಬದುಕು ಜೀವನದ ಒಂದು ದೊಡ್ಡಘಟ್ಟ.ಈ ಹಂತದಲ್ಲಿ ನಿಮ್ಮ ಪ್ರತಿಭೆಗಳನ್ನು ನೀವೇ ಗುರುತಿಸಿಕೊಳ್ಳಬೇಕು ಎಂದರು. ಮತ್ತೋರ್ವ ನಟಿ ದೀಪಿಕಾ ದಾಸ್ ಮಾತನಾಡಿ ಶಿಕ್ಷಣದ ಜೊತೆ ಜೊತೆಯಲ್ಲಿ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಬೇಕು. ಸಾಂಸ್ಕೃತಿಕ ನಗರ ಎಂದೇ ಪ್ರಸಿದ್ಧವಾದ ಈ ನಾಡಿನಲ್ಲಿ ಹುಟ್ಟಿ ಬೆಳೆದಿರುವಂತಹ ಪ್ರತಿಭೆಗಳು ಬಹಳ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಶಿಕ್ಷಣವೆಂಬುದು ಕೇವಲ ಅಕ್ಷರ ಕಲಿಕೆಯಲ್ಲಿ ಮಾತ್ರ ಇರುವುದಿಲ್ಲ. ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿಕೊಳ್ಳಲು ವೇದಿಕೆ ಸೃಷ್ಟಿ ಮಾಡುವುದು ಕೂಡ ಶಿಕ್ಷಣ ಸಂಸ್ಥೆಗಳ ಕರ್ತವ್ಯ ಎಂದರು.ಕಾರ್ಯಕ್ರಮದಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ಕುಲಸಚಿವೆ ನಾಹಿದಾ ಜಮ್‌ ಜಮ್, ಪರೀಕ್ಷಾಂಗ ಕುಲಸಚಿವ ಪ್ರೊ.ಪ್ರಸನ್ನಕುಮಾರ್ ಕೆ.ಉಪಸ್ಥಿತರಿದ್ದರು. ಸಾಂಸ್ಕೃತಿಕ ಚಟುವಟಿಕೆಗಳ ಘಟಕದ ಸಂಯೋಜಕ ಡಾ. ದೇವರಾಜು ಎಸ್. ಸ್ವಾಗತಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾ ಘಟಕದ ನಿರ್ದೇಶಕ ಪ್ರೊ. ಬಸವರಾಜು ಜಿ. ವಂದಿಸಿದರು. ಸಹ ಪ್ರಾಧ್ಯಾಪಕ ಡಾ.ಸಿಬಂತಿ ಪದ್ಮನಾಭ ಕೆ. ವಿ. ನಿರೂಪಿಸಿದರು.‘ಕೋರ’ ಹಾಗೂ ‘ಹ್ಯಾಶ್‌ಟ್ಯಾಗ್ ಪಾರುಪಾರ್ವತಿ’ ಚಿತ್ರತಂಡಗಳು ಭಾಗವಹಿಸಿದವು.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ