ಯೋಧರನ್ನು ಗೌರವಿಸುವ ಸಂಸ್ಕಾರ ಬೆಳೆಸಿಕೊಳ್ಳಿ

KannadaprabhaNewsNetwork |  
Published : Jul 28, 2026, 01:45 AM IST
27ಎಚ್ಎಸ್ಎನ್9 :  | Kannada Prabha

ಸಾರಾಂಶ

ಕೆಂಚಟ್ಟಹಳ್ಳಿಯ ದೊಡ್ಡಗೇಣಿಗೆರೆ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿರುವ ಕೇಂದ್ರೀಯ ಅರೆಸೇನಾ ಪಡೆಗಳ ಮಾಜಿ ಯೋಧರ ಭವನದಲ್ಲಿ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶನಿವಾರ ಆಯೋಜಿಸಿದ್ದ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ೮೮ನೇ ಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಪೊಲೀಸ್ ಧ್ವಜಾರೋಹಣದೊಂದಿಗೆ ಉದ್ಘಾಟಿಸಿ ಅವರು ಮಾತನಾಡಿ, ದೇಶದ ಗಡಿಯಲ್ಲಿ ಹಾಗೂ ಆಂತರಿಕ ಭದ್ರತಾ ಕಾರ್ಯಾಚರಣೆಯಲ್ಲಿ ತೊಡಗಿರುವ ಯೋಧರ ಸೇವೆ ಅತ್ಯಂತ ಕಠಿಣವಾದದ್ದು. ತಮ್ಮ ಮಕ್ಕಳನ್ನು ಕೆಲ ವರ್ಷಗಳ ಕಾಲ ಹಾಸ್ಟೆಲ್‌ಗೆ ಕಳುಹಿಸುವುದಕ್ಕೂ ಪೋಷಕರು ಭಾವನಾತ್ಮಕವಾಗುತ್ತಾರೆ. ಆದರೆ ದೇಶ ಸೇವೆಗಾಗಿ ಮಕ್ಕಳನ್ನು ಸೇನೆಗೆ ಕಳುಹಿಸುವ ಪೋಷಕರ ತ್ಯಾಗ ಮತ್ತು ಮನೋಬಲವನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ದೇಶದ ಭದ್ರತೆ ಮತ್ತು ಆಂತರಿಕ ಶಾಂತಿಯನ್ನು ಕಾಪಾಡುವಲ್ಲಿ ಯೋಧರ ಸೇವೆ ಅನನ್ಯವಾಗಿದ್ದು, ಅವರ ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಸಮಾಜದ ಪ್ರತಿಯೊಬ್ಬರೂ ಯೋಧರಿಗೆ ಗೌರವ ಸಲ್ಲಿಸುವ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು ಎಂದು ಹಾಸನ ಮಹಾನಗರ ಪಾಲಿಕೆಯ ಇಂಜಿನಿಯರ್ ಕವಿತಾ ಹೇಳಿದರು.

ನಗರದ ಹೊರವಲಯದ ಕೆಂಚಟ್ಟಹಳ್ಳಿಯ ದೊಡ್ಡಗೇಣಿಗೆರೆ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿರುವ ಕೇಂದ್ರೀಯ ಅರೆಸೇನಾ ಪಡೆಗಳ ಮಾಜಿ ಯೋಧರ ಭವನದಲ್ಲಿ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶನಿವಾರ ಆಯೋಜಿಸಿದ್ದ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ೮೮ನೇ ಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಪೊಲೀಸ್ ಧ್ವಜಾರೋಹಣದೊಂದಿಗೆ ಉದ್ಘಾಟಿಸಿ ಅವರು ಮಾತನಾಡಿ, ದೇಶದ ಗಡಿಯಲ್ಲಿ ಹಾಗೂ ಆಂತರಿಕ ಭದ್ರತಾ ಕಾರ್ಯಾಚರಣೆಯಲ್ಲಿ ತೊಡಗಿರುವ ಯೋಧರ ಸೇವೆ ಅತ್ಯಂತ ಕಠಿಣವಾದದ್ದು. ತಮ್ಮ ಮಕ್ಕಳನ್ನು ಕೆಲ ವರ್ಷಗಳ ಕಾಲ ಹಾಸ್ಟೆಲ್‌ಗೆ ಕಳುಹಿಸುವುದಕ್ಕೂ ಪೋಷಕರು ಭಾವನಾತ್ಮಕವಾಗುತ್ತಾರೆ. ಆದರೆ ದೇಶ ಸೇವೆಗಾಗಿ ಮಕ್ಕಳನ್ನು ಸೇನೆಗೆ ಕಳುಹಿಸುವ ಪೋಷಕರ ತ್ಯಾಗ ಮತ್ತು ಮನೋಬಲವನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು ಎಂದರು.

ಶಾಲಾ ಶಿಕ್ಷಣದಲ್ಲೇ ಮಕ್ಕಳಿಗೆ ಸೈನಿಕರ ಸೇವೆ, ಶಿಸ್ತು ಮತ್ತು ದೇಶಭಕ್ತಿಯ ಕುರಿತು ಪ್ರಾಯೋಗಿಕ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ರೂಪಿಸಬೇಕು. ಇದರಿಂದ ಮುಂದಿನ ಪೀಳಿಗೆಯಲ್ಲಿ ರಾಷ್ಟ್ರಸೇವೆಯ ಮನೋಭಾವ ಬೆಳೆಯಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಸರ್ಕಾರಿ ಕಚೇರಿಗಳಲ್ಲಿ ಯೋಧರು ಮತ್ತು ಮಾಜಿ ಯೋಧರಿಗೆ ಅಗತ್ಯ ಗೌರವ ಹಾಗೂ ಸ್ಪಂದನೆ ದೊರೆಯಬೇಕು. ತಮ್ಮ ಹಕ್ಕುಗಳಿಗಾಗಿ ಅವರು ಒಗ್ಗಟ್ಟಿನಿಂದ ಧ್ವನಿ ಎತ್ತಬೇಕಾದ ಅಗತ್ಯವಿದೆ ಎಂದು ತಿಳಿಸಿದರು. ದೇಶಸೇವೆಯಲ್ಲಿ ಯೋಧರಷ್ಟೇ ಅವರ ಕುಟುಂಬದವರ ತ್ಯಾಗವೂ ಮಹತ್ತರವಾಗಿದ್ದು, ಸೇನೆಯಲ್ಲಿ ಮಹಿಳೆಯರೂ ಧೈರ್ಯದಿಂದ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು. ಸರ್ಕಾರಿ ಸೇವೆಯಲ್ಲಿ ಅನೇಕ ಸವಾಲುಗಳು ಮತ್ತು ಅವಮಾನಗಳನ್ನು ಎದುರಿಸಬೇಕಾಗುತ್ತದೆ. ಆದರೂ ತಮ್ಮ ವೃತ್ತಿಯನ್ನು ಪ್ರೀತಿಸಿ ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಇತರರ ಜೀವನವನ್ನು ಅನುಕರಿಸುವ ಬದಲು ಸಮಾಜ ಮತ್ತು ರಾಷ್ಟ್ರಕ್ಕೆ ಕೊಡುಗೆ ನೀಡುವ ಮನಸ್ಸು ಇರಬೇಕು ಎಂದು ತಮ್ಮ ಜೀವನದ ಅನುಭವಗಳನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ಸಿಆರ್‌ಪಿಎಫ್ ಅಧ್ಯಕ್ಷ ಎಚ್. ಕುಮಾರ್‌ ಹಾಗೂ ಉಪಾಧ್ಯಕ್ಷ ಎಂ.ಜಿ. ರಮೇಶ್ ಮಾತನಾಡಿ, ಬ್ರಿಟಿಷರ ಕಾಲದಲ್ಲಿ ಆರಂಭವಾದ ಈ ಪಡೆ ಇಂದು ವಿಶ್ವದ ಅತಿದೊಡ್ಡ ಅರೆಸೇನಾ ಪಡೆಗಳಲ್ಲಿ ಒಂದಾಗಿ ಬೆಳೆದಿದೆ ಎಂದು ಹೇಳಿದರು. ದೇಶದ ಆಂತರಿಕ ಭದ್ರತೆ, ಭಯೋತ್ಪಾದನೆ, ನಕ್ಸಲ್ವಾದ ನಿಗ್ರಹ, ಕೋಮು ಗಲಭೆ ನಿಯಂತ್ರಣ, ಪ್ರಕೃತಿ ವಿಕೋಪದ ಸಂದರ್ಭಗಳಲ್ಲಿ ರಕ್ಷಣಾ ಕಾರ್ಯಾಚರಣೆ ಹಾಗೂ ಚುನಾವಣೆಗಳ ಯಶಸ್ವಿ ನಿರ್ವಹಣೆಯಲ್ಲಿ ಸಿಆರ್‌ಪಿಎಫ್ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ವಿವರಿಸಿದರು. ಯುದ್ಧದ ಸಮಯದಲ್ಲಿ ಸೇನೆಯೊಂದಿಗೆ ಹೆಗಲಿಗೆ ಹೆಗಲು ನೀಡಿ ಕಾರ್ಯನಿರ್ವಹಿಸುವ ಈ ಪಡೆ, ಶಾಂತಿಯ ಸಮಯದಲ್ಲೂ ದೇಶದ ಏಕತೆ ಮತ್ತು ಅಖಂಡತೆಯನ್ನು ಕಾಪಾಡುವಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿದೆ. ಆದರೆ ನಿವೃತ್ತ ಅರೆಸೇನಾ ಯೋಧರಿಗೆ ರಾಜ್ಯ ಸರ್ಕಾರದಿಂದ ಸಿಗಬೇಕಾದ ಉದ್ಯೋಗ ಹಾಗೂ ಕಲ್ಯಾಣ ಸೌಲಭ್ಯಗಳು ಇನ್ನೂ ಸಮರ್ಪಕವಾಗಿ ದೊರೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಸೇನೆ ನಿವೃತ್ತ ಯೋಧರಿಗೆ ದೊರೆಯುವ ಅನೇಕ ಸೌಲಭ್ಯಗಳು ಕೇಂದ್ರೀಯ ಅರೆಸೇನಾ ಪಡೆಗಳ ನಿವೃತ್ತ ಯೋಧರಿಗೆ ಲಭ್ಯವಾಗದಿರುವುದು ತಾರತಮ್ಯವಾಗಿದೆ. ಈ ಅಸಮಾನತೆಯನ್ನು ನಿವಾರಿಸಿ ಸಮಾನ ಸೌಲಭ್ಯಗಳನ್ನು ಕಲ್ಪಿಸುವಂತೆ ಸರ್ಕಾರಕ್ಕೆ ಹಲವು ವರ್ಷಗಳಿಂದ ಮನವಿ ಸಲ್ಲಿಸುತ್ತಿದ್ದರೂ ಸೂಕ್ತ ಸ್ಪಂದನೆ ಸಿಕ್ಕಿಲ್ಲ ಎಂದು ಅವರು ಹೇಳಿದರು.

ಈ ವೇಳೆ ಯೋಧರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಮತ್ತು ಮೃತರಾದ ಕುಟುಂಬದವರನ್ನ ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಸಿಆರ್‌ಪಿಎಫ್ ಗೌರವಾಧ್ಯಕ್ಷ ನವಾಬ್ ಖಾನ್, ಸಿಎಪಿಎಫ್ ಅಧ್ಯಕ್ಷ ಪಿ.ವಿ. ನಾಗೇಶ್, ಉಪಾಧ್ಯಕ್ಷ ನಾಗಪ್ಪ, ಮಾಜಿ ಅಧ್ಯಕ್ಷ ಹನುಮಂತಪ್ಪ, ತಾಲೂಕು ಅಧ್ಯಕ್ಷ ಎಂ. ಎನ್. ದಿನೇಶ್, ನಂಜುಂಡೇಗೌಡ ಸೇರಿದಂತೆ ಹಲವು ಮಾಜಿ ಯೋಧರು, ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

30 ವಿದ್ಯಾರ್ಥಿಗಳ ಸಾವಿಗೆ ಸಚಿವ ಶಾ ನೇರ ಹೊಣೆ
ನಿರಂತರ ಪರಿಶ್ರಮದಿಂದ ಸಾಧನೆ ಸಾಧ್ಯ: ಬಿ.ಸಿ.ಪಾಟೀಲ್