ನಗರದಲ್ಲಿ ಮುಂದುವರಿದ ಫೂಟ್‌ಪಾತ್ ಒತ್ತುವರಿ ತೆರವು

KannadaprabhaNewsNetwork |  
Published : Jul 28, 2026, 01:45 AM IST
27ಎಚ್ಎಸ್ಎನ್7 :  | Kannada Prabha

ಸಾರಾಂಶ

ಬಿ.ಎಂ. ರಸ್ತೆ ಉದ್ದಕ್ಕೂ ಫೂಟ್‌ಪಾತ್ ಮೇಲೆ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಗೂಡಂಗಡಿಗಳು, ತಾತ್ಕಾಲಿಕ ವ್ಯಾಪಾರ ಮಳಿಗೆಗಳು, ಸಾರ್ವಜನಿಕ ಸಂಚಾರಕ್ಕೆ ಅಡ್ಡಿಯಾಗಿದ್ದ ವಿವಿಧ ವಸ್ತುಗಳು ಹಾಗೂ ರಾಜಕೀಯ ಪಕ್ಷಗಳ ಕಟೌಟ್‌ಗಳನ್ನು ಜೆಸಿಬಿ ಯಂತ್ರದ ಮೂಲಕ ತೆರವುಗೊಳಿಸಲಾಯಿತು. ಸೋಮವಾರ ಬೆಳಗ್ಗಿನಿಂದಲೇ ಕಾರ್ಯಾಚರಣೆಗೆ ಇಳಿದ ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ, ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ರಸ್ತೆ ಬದಿಯ ಒತ್ತುವರಿಗಳನ್ನು ತೆರವುಗೊಳಿಸಿದರು. ಕಾರ್ಯಾಚರಣೆ ವೇಳೆ ಕೆಲ ವ್ಯಾಪಾರಿಗಳು ಅಸಮಾಧಾನ ವ್ಯಕ್ತಪಡಿಸಿದರೂ, ಅಧಿಕಾರಿಗಳು ನಿಯಮಾನುಸಾರ ಕ್ರಮ ಮುಂದುವರಿಸಿದರು. ಇದರಿಂದ ಕೆಲಕಾಲ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾದರೂ, ಯಾವುದೇ ಅಹಿತಕರ ಘಟನೆ ಸಂಭವಿಸಲಿಲ್ಲ.

ಕನ್ನಡಪ್ರಭ ವಾರ್ತೆ ಹಾಸನ

ನಗರದ ರಸ್ತೆ ಹಾಗೂ ಫೂಟ್‌ಪಾತ್‌ಗಳನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸುವ ಉದ್ದೇಶದಿಂದ ಹಾಸನ ಮಹಾನಗರ ಪಾಲಿಕೆ ಕೈಗೊಂಡಿರುವ ಒತ್ತುವರಿ ತೆರವು ಕಾರ್ಯಾಚರಣೆ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.

ಕಳೆದ ಒಂದು ತಿಂಗಳಿನಿಂದ ನಗರದ ವಿವಿಧ ಭಾಗಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಈ ಕಾರ್ಯಾಚರಣೆ ಸೋಮವಾರವೂ ಮುಂದುವರಿದಿದ್ದು, ನಗರದ ಪ್ರಮುಖ ವಾಣಿಜ್ಯ ಪ್ರದೇಶವಾದ ಬಿ.ಎಂ. ರಸ್ತೆ ಉದ್ದಕ್ಕೂ ಫೂಟ್‌ಪಾತ್ ಮೇಲೆ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಗೂಡಂಗಡಿಗಳು, ತಾತ್ಕಾಲಿಕ ವ್ಯಾಪಾರ ಮಳಿಗೆಗಳು, ಸಾರ್ವಜನಿಕ ಸಂಚಾರಕ್ಕೆ ಅಡ್ಡಿಯಾಗಿದ್ದ ವಿವಿಧ ವಸ್ತುಗಳು ಹಾಗೂ ರಾಜಕೀಯ ಪಕ್ಷಗಳ ಕಟೌಟ್‌ಗಳನ್ನು ಜೆಸಿಬಿ ಯಂತ್ರದ ಮೂಲಕ ತೆರವುಗೊಳಿಸಲಾಯಿತು. ಸೋಮವಾರ ಬೆಳಗ್ಗಿನಿಂದಲೇ ಕಾರ್ಯಾಚರಣೆಗೆ ಇಳಿದ ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ, ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ರಸ್ತೆ ಬದಿಯ ಒತ್ತುವರಿಗಳನ್ನು ತೆರವುಗೊಳಿಸಿದರು. ಕಾರ್ಯಾಚರಣೆ ವೇಳೆ ಕೆಲ ವ್ಯಾಪಾರಿಗಳು ಅಸಮಾಧಾನ ವ್ಯಕ್ತಪಡಿಸಿದರೂ, ಅಧಿಕಾರಿಗಳು ನಿಯಮಾನುಸಾರ ಕ್ರಮ ಮುಂದುವರಿಸಿದರು. ಇದರಿಂದ ಕೆಲಕಾಲ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾದರೂ, ಯಾವುದೇ ಅಹಿತಕರ ಘಟನೆ ಸಂಭವಿಸಲಿಲ್ಲ.

ಮಹಾನಗರ ಪಾಲಿಕೆ ಸೂಪರ್‌ವೈಸರ್‌ ಪರಶುರಾಮು ಮಾಧ್ಯಮದೊಂದಿಗೆ ಮಾತನಾಡಿ, ಸುಪ್ರೀಂಕೋರ್ಟ್‌ ಆದೇಶದ ಅನ್ವಯ ಸಾರ್ವಜನಿಕ ರಸ್ತೆ ಹಾಗೂ ಫುಟ್‌ಪಾತ್‌ಗಳ ಮೇಲಿನ ಎಲ್ಲ ರೀತಿಯ ಅನಧಿಕೃತ ಒತ್ತುವರಿಗಳನ್ನು ತೆರವುಗೊಳಿಸಲಾಗುತ್ತಿದೆ. ಪಾದಚಾರಿಗಳಿಗೆ ಮೀಸಲಾದ ಫುಟ್‌ಪಾತ್‌ಗಳನ್ನು ವ್ಯಾಪಾರಕ್ಕಾಗಿ ಬಳಸುವುದರಿಂದ ಜನರು ರಸ್ತೆಯಲ್ಲೇ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದರಿಂದ ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತಿದ್ದು, ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಕಟ್ಟುನಿಟ್ಟಿನ ಕ್ರಮ ಅನಿವಾರ್ಯವಾಗಿದೆ ಎಂದು ತಿಳಿಸಿದರು. ಕಳೆದ ೧೫ ದಿನಗಳ ಹಿಂದೆಯೇ ಫೂಟ್‌ಪಾತ್ ಆಕ್ರಮಿಸಿಕೊಂಡಿದ್ದ ಗೂಡಂಗಡಿ ಹಾಗೂ ಅಂಗಡಿ ಮಾಲೀಕರಿಗೆ ಸ್ವಯಂಪ್ರೇರಿತವಾಗಿ ಒತ್ತುವರಿ ತೆರವುಗೊಳಿಸಿಕೊಳ್ಳುವಂತೆ ಸೂಚಿಸಲಾಗಿತ್ತು. ಸೂಚನೆ ನೀಡಿದರೂ ತೆರವುಗೊಳಿಸದ ಕಾರಣ ಇದೀಗ ಜೆಸಿಬಿ ಯಂತ್ರಗಳ ಮೂಲಕ ಪಾಲಿಕೆ ಸಿಬ್ಬಂದಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಅವರು ವಿವರಿಸಿದರು.

ಕಾರ್ಯಾಚರಣೆ ಕೇವಲ ಸಣ್ಣ ವ್ಯಾಪಾರಿಗಳಿಗಷ್ಟೇ ಸೀಮಿತವಾಗಿಲ್ಲ. ನಗರದ ಕೆಲವು ಪ್ರಮುಖ ವಾಣಿಜ್ಯ ಸಂಸ್ಥೆಗಳ ನಾಮಫಲಕಗಳು ಹಾಗೂ ಜಾಹೀರಾತು ಫಲಕಗಳೂ ಫೂಟ್‌ಪಾತ್ ವ್ಯಾಪ್ತಿಗೆ ಅತಿಕ್ರಮಣ ಮಾಡಿರುವುದು ಕಂಡುಬಂದಿದೆ. ಭೀಮಾ ಜ್ಯುವೆಲ್ಲರ್ಸ್, ಹಾಸನ್‌ ಕ್ಲಬ್ ಸೇರಿದಂತೆ ಹಲವು ದೊಡ್ಡ ಸಂಸ್ಥೆಗಳಿಗೂ ನಿಯಮ ಉಲ್ಲಂಘನೆಯ ಬಗ್ಗೆ ಈಗಾಗಲೇ ಮಾಹಿತಿ ನೀಡಲಾಗಿದ್ದು, ಅವುಗಳ ಅನಧಿಕೃತ ನಾಮಫಲಕಗಳನ್ನು ಸಹ ಶೀಘ್ರದಲ್ಲೇ ತೆರವುಗೊಳಿಸಲಾಗುವುದು ಎಂದು ಹೇಳಿದರು. ಈ ಕಾರ್ಯಾಚರಣೆಯಲ್ಲಿ ಯಾವುದೇ ಜನಪ್ರತಿನಿಧಿ, ರಾಜಕೀಯ ಮುಖಂಡ ಅಥವಾ ಪ್ರಭಾವಿ ವ್ಯಕ್ತಿಯ ಒತ್ತಡಕ್ಕೆ ಮಣಿಯುವುದಿಲ್ಲ. ಸಾರ್ವಜನಿಕ ಹಿತಾಸಕ್ತಿ ಹಾಗೂ ಕಾನೂನು ಪಾಲನೆಯೇ ನಮ್ಮ ಆದ್ಯತೆ. ಎಲ್ಲರಿಗೂ ಒಂದೇ ನಿಯಮ ಅನ್ವಯವಾಗಲಿದೆ ಎಂದು ಅವರು ಸ್ಪಷ್ಟಪಡಿಸಿದರು. ನಗರದ ಪ್ರಮುಖ ರಸ್ತೆಗಳಲ್ಲಿನ ಒತ್ತುವರಿಯಿಂದ ವಾಹನ ಸಂಚಾರ ದಟ್ಟಣೆ, ಪಾದಚಾರಿಗಳ ಓಡಾಟಕ್ಕೆ ತೊಂದರೆ, ತುರ್ತು ಸೇವೆಗಳ ವಾಹನಗಳ ಸಂಚಾರಕ್ಕೆ ಅಡ್ಡಿ ಸೇರಿದಂತೆ ಹಲವು ಸಮಸ್ಯೆಗಳು ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಈ ಕಾರ್ಯಾಚರಣೆಯನ್ನು ಮುಂದಿನ ದಿನಗಳಲ್ಲಿಯೂ ಮುಂದುವರಿಸಲು ನಿರ್ಧರಿಸಿದೆ. ಸಾರ್ವಜನಿಕ ಸ್ಥಳಗಳನ್ನು ಅತಿಕ್ರಮಿಸದೆ ನಿಯಮಾನುಸಾರ ವ್ಯಾಪಾರ ನಡೆಸುವಂತೆ ಪಾಲಿಕೆ ಅಧಿಕಾರಿಗಳು ವ್ಯಾಪಾರಿಗಳಿಗೆ ಮನವಿ ಮಾಡಿದ್ದು, ನಿಯಮ ಉಲ್ಲಂಘನೆ ಕಂಡುಬಂದರೆ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

30 ವಿದ್ಯಾರ್ಥಿಗಳ ಸಾವಿಗೆ ಸಚಿವ ಶಾ ನೇರ ಹೊಣೆ
ನಿರಂತರ ಪರಿಶ್ರಮದಿಂದ ಸಾಧನೆ ಸಾಧ್ಯ: ಬಿ.ಸಿ.ಪಾಟೀಲ್