ಕನ್ನಡಪ್ರಭ ವಾರ್ತೆ ಸೊರಬ
ಸಂಸ್ಕೃತಿ, ಪರಂಪರೆ ಹಾಗೂ ಇತಿಹಾಸದಲ್ಲಿ ಶ್ರೀಮಂತವಾದ ಕನ್ನಡ ಭಾಷೆಯನ್ನು ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ತಹಸೀಲ್ದಾರ್ ಮಂಜುಳಾ ಬಿ. ಹೆಗಡಾಳ್ ಹೇಳಿದರು.ಶನಿವಾರ ಪಟ್ಟಣದ ಡಾ. ರಾಜ್‌ಕುಮಾರ್ ರಂಗಮಂದಿರದಲ್ಲಿ ತಾಲೂಕು ಆಡಳಿತ, ತಾಪಂ, ಪುರಸಭೆ, ವಿವಿಧ ಇಲಾಖೆಗಳು ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಹಮ್ಮಿಕೊಂಡ ೭೦ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕನ್ನಡ ಕೇವಲ ಭಾಷೆಯಾಗಿರದೇ ನಮ್ಮ ಹೆಮ್ಮೆ ಮತ್ತು ಅಸ್ಮಿತೆಯಾಗಿದ್ದು, ನಾಡಿನ ಸಂಪತ್ತನ್ನು ರಕ್ಷಿಸುವ ಹೊಣೆ ಎಲ್ಲರದ್ದಾಗಿದೆ. ಕರ್ನಾಟಕ ರಾಜ್ಯವೆಂದು ಪುನರ್ ನಾಮಕರಣಗೊಂಡು ೫೧ ವರ್ಷಗಳು ತುಂಬಿದ್ದು, ಕನ್ನಡವನ್ನು ಮತ್ತಷ್ಟು ಜನಪ್ರಿಯಗೊಳಿಸಿ, ವ್ಯವಹಾರಿಕ ಭಾಷೆಯಾಗಿ ಬಳಸಬೇಕು. ಕನ್ನಡವನ್ನು ಬೆಳೆಸುವ ಜೊತೆಗೆ ಬಲಿಷ್ಠಗೊಳಿಸೋಣ ಎಂದರು.ನಾಡ ಧ್ವಜಾರೋಹಣ ನೆರವೇರಿಸಿದ ಕಸಾಪ ತಾಲೂಕು ಅಧ್ಯಕ್ಷ ಎನ್. ಷಣ್ಮುಖಾಚಾರ್ ಮಾತನಾಡಿ, ಕನ್ನಡದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಪ್ರತಿಯೊಬ್ಬರಲ್ಲೂ ಕನ್ನಡಾಭಿಮಾನ ಬೆಳೆಯುವಂತಾಗಬೇಕು. ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ನಾಡಿನಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು. ಹೊರ ರಾಜ್ಯದಿಂದ ಉದ್ಯೋಗ ಮತ್ತಿತರ ಕಾರಣಗಳಿಂದ ರಾಜ್ಯಕ್ಕೆ ಆಗಮಿಸಿದವರಿಗೂ ಸಹ ಕನ್ನಡ ಕಲಿಸಬೇಕು ಎಂದು ತಿಳಿಸಿದರು.
ಪಟ್ಟಣದ ಶ್ರೀ ರಂಗನಾಥ ದೇವಸ್ಥಾನದಿಂದ ಮುಖ್ಯರಸ್ತೆ ಮಾರ್ಗವಾಗಿ ಡಾ. ರಾಜ್‌ಕುಮಾರ್ ರಂಗಮಂದಿರದವರೆಗೆ ಭುವನೇಶ್ವರಿ ದೇವಿಯ ಭಾವಚಿತ್ರದೊಂದಿಗೆ ವಿವಿಧ ಶಾಲಾ ಮಕ್ಕಳಿಂದ ಮೆರವಣಿಗೆ ನಡೆಸಲಾಯಿತು. ಮಕ್ಕಳ ಛದ್ಮವೇಷ ಹಾಗೂ ಡೊಳ್ಳು ಕುಣಿತ ಮೆರವಣಿಗೆಗೆ ಮೆರುಗು ತಂದಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಮತ್ತು ಕನ್ನಡ ಭಾಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಮಕ್ಕಳಿಗೆ ಸನ್ಮಾನಿಸಲಾಯಿತು. ನಂತರ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಪುರಸಭೆ ಅಧ್ಯಕ್ಷ ಪ್ರಭು ಮೇಸ್ತೀ, ಪುರಸಭಾ ಸದಸ್ಯರಾದ ಎಂ.ಡಿ. ಉಮೇಶ್, ಅನ್ಸರ್ ಅಹಮದ್, ನಾಮಿನಿ ಸದಸ್ಯರಾದ ಶಿವಪ್ಪ, ಸುಜಾಯತ್‌ವುಲ್ಲಾ, ಗ್ಯಾರಂಟಿ ಅನುಷ್ಠಾನ ಯೋಜನೆ ತಾಲೂಕು ಅಧ್ಯಕ್ಷ ಜಯಶೀಲಗೌಡ, ಬಿಇಒ ಆರ್. ಪುಷ್ಪಾ, ನೌಕರರ ಸಂಘದ ತಾಲೂಕು ಅಧ್ಯಕ್ಷ ಎಸ್. ಮಂಜುನಾಥ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಜಿ. ಕುಮಾರ್, ಕರವೇ ಟೌನ್ ಅಧ್ಯಕ್ಷ ಜಿ. ಕೆರಿಯಪ್ಪ, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಿ.ಎಸ್. ಶಂಕರ್ ಶೇಟ್, ಎಚ್.ವಿ. ಚಂದನ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.