ಕನ್ನಡಪ್ರಭ ವಾರ್ತೆ ನಂಜನಗೂಡು
ಇಂದಿನ ಯುವ ಜನತೆ ಶೈಕ್ಷಣಿಕ ಪ್ರಗತಿಯಲ್ಲಿ ಸಾಗುತ್ತಿದ್ದರೂ ಶಿಕ್ಷಣ ಕಲ್ಪನೆಯನ್ನು ಅರ್ಥ ಮಾಡಿಕೊಳ್ಳುವಲ್ಲಿ ಕೊಂಚ ವಿಫಲರಾಗುತ್ತಿದ್ದಾರೆ ಎಂದು ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಸಾಹಿತಿ ಮು.ನಾ. ರಮೇಶ್ ಅಭಿಪ್ರಾಯಪಟ್ಟರು.ಪಟ್ಟಣದ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆಗಳ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗಾಂಧೀಜಿಯವರು ಜಾನ್ ರಸ್ಕಿನ್‌ರವರ ಅನ್‌ಟೂ ದಿಸ್ ಲಾಸ್ಟ್ ಕೃತಿಯಿಂದ ಪ್ರಭಾವಿತರಾಗಿ ಮಹಾತ್ಮಾ ಎಂದು ಕರೆಸಿಕೊಳ್ಳುವಲ್ಲಿ ಯಶಸ್ವಿಯಾದರು. ಅದೇ ರೀತಿಯಲ್ಲಿ ಜ್ಞಾನ, ವಿಜ್ಞಾನ ಹಾಗೂ ತಂತ್ರಜ್ಞಾನ ಯುಗದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ನಿಶ್ಚಿತ ಗುರಿಯೊಂದಿಗೆ ಪಠ್ಯ, ಪಠ್ಯೇತರ, ಕ್ರೀಡೆ, ಸಾಹಿತ್ಯ, ಸಂಗೀತ ಹಾಗೂ ಯೋಗ ಕ್ಷೇತ್ರದಲ್ಲಿ ಸಾಧನೆ ಮಾಡಿ ಪೋಷಕರ ಶ್ರಮವನ್ನರಿತು ಅವರ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಪ್ರಯತ್ನಶೀಲರಾಗಬೇಕೆಂದರು.ಮುಖ್ಯಅತಿಥಿಯಾಗಿ ಖೋ-ಖೋ ವಿಶ್ವಕಪ್ ಆಟಗಾರ್ತಿ ಬಿ. ಚೈತ್ರಾ ಮಾತನಾಡಿ, ಸತತ ಅಭ್ಯಾಸ ಹಾಗೂ ಪರಿಶ್ರಮದಿಂದ ಮಾತ್ರ ಸಾಧಕರು ಸಾಧನೆಯ ಮೆಟ್ಟಿಲನ್ನು ಏರಲು ಸಾಧ್ಯವಾಗುತ್ತದೆ ಎಂದು ಹೇಳುತ್ತಾ, ಗುರು-ಗುರಿ ಕಲ್ಪನೆಯಂತೆ ಮಾರ್ಗದರ್ಶಕರು ಸಕಾಲಿಕ ಸನ್ಮಾರ್ಗವನ್ನು ತೋರಿಸಿದಾಗ ಕಲಿಕಾರ್ಥಿಗಳು ಮೌಲಿಕವಾದ ಅಂಶಗಳನ್ನು ಕಲಿತು ಜಗತ್ತಿನಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಎಸ್. ಹೊನ್ನೇಗೌಡ ಮಾತನಾಡಿ, ಸಾಂಸ್ಕೃತಿಕ ಹಾಗೂ ಕ್ರೀಡಾ ವೇದಿಕೆಗಳು ಕಲ್ಪಿಸಿಕೊಡುವ ವೇದಿಕೆಗಳು ವಿದ್ಯಾರ್ಥಿಗಳಲ್ಲಿ ಹುದುಗಿರುವ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಅವಕಾಶವನ್ನು ಬಳಸಿಕೊಂಡು ಸಾಧಕರಾಗಿ ಹೊರಹೊಮ್ಮಿ ಶಿಕ್ಷಣ ಸಂಸ್ಥೆಗೆ ಕೀರ್ತಿ ಮತ್ತು ಯಶಸ್ಸನ್ನು ತರಲೆಂದು ಹಾರೈಕೆ ನುಡಿಗಳನ್ನಾಡಿದರು.ನಂಜನಗೂಡು ಉಪ ಖಜಾನೆ ಸಹಾಯಕ ನಿರ್ದೇಶಕ ಎಂ. ಶಿವಕುಮಾರ್ ಮಾತನಾಡಿ, ಗುರು ಪರಂಪರೆಯಿಂದ ಲಭ್ಯವಾದ ಸಂಸ್ಕಾರ ಹಾಗೂ ಸಂಸ್ಕೃತಿ, ಕಾಲೇಜಿನ ವಿದ್ಯಾರ್ಥಿಗಳು ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆ ಮಾಡಲು ಸಹಕಾರಿಯಾಗಿದೆ ಎಂದರು.
ಶೈಕ್ಷಣಿಕ ಸಾಲಿನಲ್ಲಿ ನಡೆದ ವಿವಿಧ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರು ಹಾಗೂ ದತ್ತಿ ಪುರಸ್ಕೃತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿಶೇಷವಾಗಿ ಅಂತಿಮ ಬಿ.ಎಸ್ಸಿ ಭೌತಶಾಸ್ತ್ರ ವಿಷಯದಲ್ಲಿ ಅತಿ ಹೆಚ್ಚು ಅಂಕಗಳಿಸಿ ಎರಡು ಚಿನ್ನದ ಪದಕ ಹಾಗೂ ಎರಡು ನಗದು ಬಹುಮಾನಗಳನ್ನು ಪಡೆದು ಕಾಲೇಜಿಗೆ ಕೀರ್ತಿ ತಂದ ಬಿ.ಕೆ. ಭ್ರಮರಾಂಬಿಕೆ ಅವರನ್ನು ಸನ್ಮಾನಿಸಿತು.ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಎನ್. ಶಿವಕುಮಾರ್, ಸಾಂಸ್ಕೃತಿಕ ವೇದಿಕೆ ಸಂಚಾಲಕಿ ಎಂ.ಎನ್. ಜಯಶೀಲ, ಕ್ರೀಡಾ ವೇದಿಕೆ ಸಂಚಾಲಕ ಪಿ.ಎಂ. ವಿಕ್ರಂ, ಕಚೇರಿ ಅಧೀಕ್ಷಕ ಕೆ.ವಿ. ಸುಂದರರಾಜು, ಅಧ್ಯಾಪಕರು-ಅಧ್ಯಾಪಕೇತರರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.