ನವೆಂಬರ್‌ 9-10ಕ್ಕೆ ಸಾಂಸ್ಕೃತಿಕ ಸಂಗಮ ಕಾರ್ಯಕ್ರಮ

KannadaprabhaNewsNetwork |  
Published : Nov 06, 2024, 01:17 AM IST
ಟಿ.ಎಸ್‌.ನಾಗಾಭರಣ | Kannada Prabha

ಸಾರಾಂಶ

ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ ಮತ್ತು ಬೆಂಗಳೂರು ಇಂಟರ್‌ನ್ಯಾಷನಲ್‌ ಸೆಂಟರ್‌ ವತಿಯಿಂದ ನ.9-10ರಂದು ಬೆಂಗಳೂರು ಇಂಟರ್‌ನ್ಯಾಷನಲ್‌ ಸೆಂಟರ್‌ನಲ್ಲಿ ಕರ್ನಾಟಕದ ವೈವಿಧ್ಯತೆ ಸಂಭ್ರಮಿಸುವ ಸಾಂಸ್ಕೃತಿಕ ಸಂಗಮ - ‘ಕೃಷ್ಣೆಯಿಂದ ಕಾವೇರಿವರೆಗೆ’ ಕಾರ್ಯಕ್ರಮ ಆಯೋಜಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ ಮತ್ತು ಬೆಂಗಳೂರು ಇಂಟರ್‌ನ್ಯಾಷನಲ್‌ ಸೆಂಟರ್‌ ವತಿಯಿಂದ ನ.9-10ರಂದು ಬೆಂಗಳೂರು ಇಂಟರ್‌ನ್ಯಾಷನಲ್‌ ಸೆಂಟರ್‌ನಲ್ಲಿ ಕರ್ನಾಟಕದ ವೈವಿಧ್ಯತೆ ಸಂಭ್ರಮಿಸುವ ಸಾಂಸ್ಕೃತಿಕ ಸಂಗಮ - ‘ಕೃಷ್ಣೆಯಿಂದ ಕಾವೇರಿವರೆಗೆ’ ಕಾರ್ಯಕ್ರಮ ಆಯೋಜಿಸಲಾಗಿದೆ.

ಈ ಸಾಂಸ್ಕೃತಿಕ ಸಂಗಮದಲ್ಲಿ ಚಲನಚಿತ್ರ ನಿರ್ದೇಶಕ ಟಿ.ಎಸ್‌.ನಾಗಾಭರಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಧರಣಿದೇವಿ ಮಾಲಗತ್ತಿ ಅವರು ಜಾನಪದ ಪ್ರಕಾರಗಳ ಮೆರವಣಿಗೆ ಉದ್ಘಾಟಿಸುವರು. ನುರಿತ ಕುಶಲಕರ್ಮಿಗಳು ಸ್ಥಳೀಯ ಕುಶಲಕಲೆಗಳ ಪ್ರಾವೀಣ್ಯತೆ ಪ್ರದರ್ಶಿಸುವರು. ಈ ಹಬ್ಬದಲ್ಲಿ ಜನರು, ಭಿತ್ತಿಚಿತ್ರ ಕಲೆ, ಧಾರವಾಡದ ಕಸೂತಿ ಕಲೆ, ಸಿದ್ಧಿ ಸಮುದಾಯದ ಕಾವಂಡಿ ರಜಾಯಿಯ ಸಂಪ್ರದಾಯ ಕಲೆಯನ್ನು ಹತ್ತಿರದಿಂದ ನೋಡಿ ಮಾಹಿತಿ ಪಡೆಯಬಹುದು.

ಖ್ಯಾತ ಗಾಯಕ ಡಾ। ನಾಗರಾಜ ರಾವ್ ಹವಾಲ್ದಾರ್‌ ಅವರು ಹಿಂದೂಸ್ತಾನಿ ಸಂಗೀತದ ವಿಕಸನ ಪರಿಶೋಧಿಸಲಿದ್ದಾರೆ. ಗಾಯಕಿ ಚಿತ್ರಾ ಶ್ರೀಕೃಷ್ಣ ಕರ್ನಾಟಕ ಶಾಸ್ತ್ರೀಯ ಸಂಗೀತದ ಮೂಲಕ ಗಮನ ಸೆಳೆಯಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ಪ್ರದರ್ಶನ ಕಲೆಗಳು, ಸಮಕಾಲೀನ ಅಭಿವ್ಯಕ್ತಿಗಳು, ಶೈಕ್ಷಣಿಕ ಚರ್ಚೆಗಳು ಮತ್ತು ಪ್ರಾಯೋಗಿಕ ಕಾರ್ಯಾಗಾರಗಳು, ಯಕ್ಷಗಾನ ಪ್ರದರ್ಶನ, ಧಾರವಾಡದ ಗೊಂಬೆಮನೆ ಪ್ರಸ್ತುತಿ, ಅದ್ಭುತ ‘ರಾಮಾಯಣ’ ತೊಗಲು ಬೊಂಬೆಯಾಟ ಸೇರಿದಂತೆ ಸುಮಾರು 20ಕ್ಕೂ ಹೆಚ್ಚಿನ ಪ್ರದರ್ಶನಗಳನ್ನು ಪ್ರಸ್ತುತಿಪಡಿಸಲಾಗುತ್ತಿದೆ.

ಪ್ರೊ.ಬಸವರಾಜ ಕಲ್ಗುಡಿ ಅಧ್ಯಕ್ಷತೆಯಲ್ಲಿ ಚರ್ಚಾಗೋಷ್ಠಿ ನಡೆಯಲಿದೆ. ಶಿಕ್ಷಕರು ಮತ್ತು ಶಿಕ್ಷಣದ ಗುಣಮಟ್ಟ ಕುರಿತ ಆರು ಪುಸ್ತಕಗಳು ಬಿಡುಗಡೆಗೊಳ್ಳಲಿವೆ. ರಾಜೇಂದ್ರ ಚೆನ್ನಿ ಅವರ ಪುಸ್ತಕ ಸ್ಟೇಟ್‌ ಮ್ಯಾಟರ್ಸ್‌ ಕುರಿತ ಚರ್ಚೆ ನಡೆಯಲಿದೆ.

ಈ ಹಬ್ಬದಲ್ಲಿ ಕರ್ನಾಟಕದ ವಿವಿಧೆಡೆಯ ತಿನಿಸುಗಳು ಸ್ವಾದ ಉಣಬಡಿಸಲಿವೆ. ಸೋನು ವೇಣುಗೋಪಾಲ್‌ ಅವರ ಸ್ಟ್ಯಾಂಡ್‌ಅಪ್‌ ಕಾಮೆಡಿ, ಎಂ.ಡಿ.ಪಲ್ಲವಿ ಮತ್ತು ಬ್ರೂಸ್‌ ಲೀ ಮಣಿ ನೇತೃತ್ವದಲ್ಲಿ ‘ಕಾಯಕ’ ಜುಗಲ್ಬಂದಿ ಸಂಗೀತ ಇರಲಿದೆ.

ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ. ನೋಂದಣಿ ಮತ್ತು ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್‌: www.bangaloreinternationalcentre.org ಸಂಪರ್ಕಿಸಬಹುದು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ