ಮಲಯಾಳಿ ಸಮಾಜದ ಆಚಾರ ವಿಚಾರ ಸಂಸ್ಕೃತಿ ಪರಂಪರೆಯೂ ದೇಶದ ಅಭಿವೃದ್ಧಿಗೆ ಪೂರವಾಗಿದೆ ಎಂದು ಮಾಜಿ ಸಚಿವರು ಹೇಳಿದರು.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಮಲಯಾಳಿ ಸಮಾಜದ ಆಚಾರ ವಿಚಾರ ಸಂಸ್ಕೃತಿ ಪರಂಪರೆಯೂ ದೇಶದ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಮಾಜಿ ಸಚಿವರಾದ ಅಪ್ಪಚ್ಚು ರಂಜನ್ ಹೇಳಿದರು.ಸೋಮವಾರದಂದು ಸುಂಟಿಕೊಪ್ಪ ಮಲಯಾಳಿ ಸಮಾಜದಿಂದ 18ನೇ ವರ್ಷದ ಓಣಂ ಆಚರಣೆ ಪ್ರಯುಕ್ತ ಶ್ರೀ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಆಯೋಜಿತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಎಲ್ಲಾ ಸಮಾಜದವರು ತಮ್ಮ ತಮ್ಮ ಸಮಾಜದ ಸಂಘಟನೆಗಾಗಿ ಆಚಾರ ವಿಚಾರ ಸಂಸ್ಕೃತಿಗಳನ್ನು ಬೆಳೆಸುತ್ತಾ ಸಾಗಿಸುತ್ತಿದ್ದಾರೆ. ಇದರಿಂದ ದೇಶದ ಅಭಿವೃದ್ಧಿಗೆ ಪೂರಕವಾಗುತ್ತಿದ್ದು ಪ್ರತಿ ಸಮಾಜದ ಬೆಳವಣಿಗೆಗೆ ಬಾಂಧವ್ಯ ವೃದ್ಧಿಗೆ ಸಹಕಾರಿಯಾಗುತ್ತಿದೆ. ಇದೇ ರೀತಿಯ ಒಗ್ಗಟ್ಟನ್ನು ಮುಂದಿನ ಪೀಳಿಗೆಗೂ ಮುಂದುವರೆಸಿಕೊಂಡು ಹೋಗಬೇಕೆಂದು ಕರೆ ನೀಡಿದರು.ಮುಖ್ಯ ಅತಿಥಿಯಾಗಿ ಆಗಮಿಸಿದ ಕೊಡಗು ಜಿಲ್ಲಾ ಮಲಯಾಳಿ ಸಮಾಜದ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಎಂ.ವಿಜಯ ಮಾತನಾಡಿ ಸಂಘಟನೆಯಿಂದ ಹಿಂದೂ ಮಲಯಾಳಿ ಸಮಾಜ ಬಲಾಢ್ಯವಾಗಿದೆ ಎಂದು ಇಲ್ಲಿ ನೆರೆದಿರುವ ಸಮಾಜ ಬಾಂಧವರೇ ಸಾಕ್ಷಿಯಾಗಿದ್ದಾರೆ. ಸಮಾಜದ ಒಗ್ಗಟಿಗೆ ಬೆಳವಣಿಗೆಗೆ ಪ್ರತಿಯೊಬ್ಬ ಮಲಯಾಳಿ ಬಾಂಧವರು ಕೈಜೋಡಿಸಬೇಕು. ಅದರಲ್ಲಿ ತಪ್ಪು ಹುಡುಕುವ ಕೆಲಸದಲ್ಲಿ ತಲ್ಲಿನರಾಗಬಾರದು. ಸಮಾಜದ ಕಷ್ಟದಲ್ಲಿರುವ ಪ್ರತಿಯೊಬ್ಬರಿಗೂ ಸಮಾಜದಿಂದ ಆಗುವ ಕಾರ್ಯವನ್ನು ನೀಡುತ್ತಾ ಬರಬೇಕು ಎಂದು ಹೇಳಿದರು. ಕೊಡಗು ಜಿಲ್ಲಾಡಳಿತದ ಕಾನೂನು ಸಲಹೆಗಾರರಾದ ಎ.ಲೋಕೇಶ್ ಕುಮಾರ್ ಮಾತನಾಡಿ, 18 ವರ್ಷದಿಂದ ಪ್ರೀತಿ ಪೂರ್ವಕವಾಗಿ ನನ್ನನ್ನು ಮಲಯಾಳಿ ಸಮಾಜದವರು ಆಹ್ವಾನಿಸುತ್ತಿದ್ದು, ಈ ಸಮಾಜದ ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಾಯ ಸಹಕಾರವನ್ನು ನೀಡುತ್ತೇನೆ. ಸಮಾಜದ ಒಗ್ಗಟಿಗೆ ದೇಶದ ಅಭಿವೃದ್ಧಿಗೆ ಕಲೆ ಸಂಸ್ಕೃತಿಗೆ ಮಲಯಾಳಿ ಸಮಾಜದ ಕೊಡುಗೆ ಅಪಾರವಾದುದು. ಮಲಯಾಳಿ ಸಮಾಜದ ವತಿಯಿಂದ ನಡೆಸಿದ ನೃತ್ಯ ರೂಪ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ ಎಂದು ಪ್ರಶಂಸಿಸಿದರು. ಕೇರಳದ ಮಾವೆಲಿ ತಾಂಬೂರನ್ ಓಣಂ ಆಚರಣೆಯ ಶುಭಾಶಯ ಕೋರಿದರು. ಗ್ರಾ.ಪಂ.ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್ ಮಾತನಾಡಿ, ಮಲಯಾಳಿ ಎಲ್ಲಾ ಕ್ಷೇತ್ರಗಳಲ್ಲೂ ಛಾಪನ್ನು ಮೂಡಿಸಿದ್ದಾರೆ. ಇದಕ್ಕೆ ಮಲಯಾಳಿ ಸಮಾಜದವರ ಸಂಘಟನೆಯೇ ಕಾರಣವಾಗಿದೆ. ಮುಂದಿನ ದಿನಗಳಲ್ಲಿಯೂ ಸಮಾಜ ಬಾಂಧವರು ಸಂಸ್ಕೃತಿ ಅಚಾರ ವಿಚಾರವನ್ನು ಬೆಳೆಸಬೇಕು ಎಂದು ಕರೆ ನೀಡಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಎಂ.ಲತೀಫ್ ಮಾತನಾಡಿ, ಮಲಯಾಳಿ ಸಮುದಾಯ ಭವನ ನಿರ್ಮಿಸಲು 1 ಲಕ್ಷ ರು. ದೇಣಿಗೆ ಹಾಗೂ ಸಮಾರಂಭಕ್ಕೆ ಧನ ಸಹಾಯ ನೀಡುವುದಾಗಿ ಹೇಳಿದರು.ಸಮಾರಂಭದ ಅಧ್ಯಕ್ಷತೆಯನ್ನು ಮಲಯಾಳಿ ಸಮಾಜದ ಅಧ್ಯಕ್ಷ ರಮೇಶ್ ಪಿಳ್ಳೆ ವಹಿಸಿ ಮಾತನಾಡಿದರು. ಸಮಾರಂಭದ ವೇದಿಕೆಯಲ್ಲಿ ಸದಸ್ಯರಾದ ಗ್ರಾ.ಪಂ.ಉಪಾಧ್ಯಕ್ಷೆ ಶಿವಮ್ಮ ಮಹೇಶ್, ಪ್ರಸಾದ್ ಕುಟ್ಟಪ್ಪ, ಶಾಂತಿ, ಮಲಯಾಳಿ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ವಿ.ಶೈಜಾ, ಮಾಜಿ ಅಧ್ಯಕ್ಷರಾದ ಪಿ.ಆರ್.ಸುಕುಮಾರ್, ವಿ.ಎ.ಸಂತೋಷ್, ಪಿ.ಸಿ.ಮೋಹನ್, ಪ್ರಧಾನ ಕಾರ್ಯದರ್ಶಿ ಕೆ.ಎಸ್. ಅನಿಲ್‌ಕುಮಾರ್ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.