ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಮಕ್ಕಳಿಗೆ ಅಂಕವೇ ಪ್ರಧಾನವಾಗಿ ಅಂಕದ ಮೇಲೆ ಮಕ್ಕಳನ್ನು ಉತ್ತೇಜಿಸುವ ಕೆಲಸವಾಗದೆ ಲೋಕದ ಜ್ಞಾನಕ್ಕೆ ವಿಶೇಷ ಒತ್ತು ನೀಡುವ ಕೆಲಸ ಅವಶ್ಯವಿದೆ ಎಂದು ಜಿಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಕೊಡಗಹಳ್ಳಿ ವಿ.ಮಂಜೇಗೌಡ ತಿಳಿಸಿದರು.ಸಮೀಪದ ಬೆಡದಹಳ್ಳಿಯ ಶ್ರೀಪಂಚಭೂತೇಶ್ವರ ಮಠ ಏರ್ಪಡಿಸಿದ್ದ ಸಂಸ್ಕಾರ ಜ್ಞಾನ ಶಿಬಿರ ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಉತ್ತಮ ಸಂಸ್ಕಾರ, ಸೇವಾ ಮನೋಭಾವ, ಮಾನವೀಯ ಮೌಲ್ಯಗಳನ್ನು ಬಾಲ್ಯದಿಂದಲೇ ನೀಡಬೇಕಿದೆ. ಮಕ್ಕಳನ್ನು ಮೊಬೈಲ್ ಫೋನ್ ಪ್ರಪಂಚದಿಂದ ಹೊರಕ್ಕೆ ಕರೆ ತರುವುದು ಅಗತ್ಯವಾಗಿದೆ ಎಂದರು.
ಮಕ್ಕಳಿಗೆ ಯೋಗ, ಧ್ಯಾನ, ಸಂಸ್ಕೃತ ನೀತಿ ಬೋಧನೆ, ವಚನಗಳ ಮಹತ್ವ, ರಾಮಾಯಣ ಮಹಾಭಾರತ ಗ್ರಂಥಗಳ ಸಾರ ತಿಳಿಸುವುದು ಅವಶ್ಯವಿದೆ. ಮಕ್ಕಳಿಗೆ ಸಮಗ್ರ ವ್ಯಕ್ತಿತ್ವ ರೂಪಿಸಿ ಮಕ್ಕಳ ಆಸಕ್ತಿ, ಕಲಿಕೆಗೆ ಪೂರಕವಾಗಿ ಮಾರ್ಗದರ್ಶನ ನೀಡುವ ಶಿಬಿರ ಅವಶ್ಯವಿದೆ ಎಂದರು.ಬೆಡದಹಳ್ಳಿ ಪಂಚಭೂತೇಶ್ವರ ಮಠದ ಪೀಠಾಧಿಪತಿ ಶ್ರೀರುದ್ರಮುನಿ ಸ್ವಾಮೀಜಿ ಮಾತನಾಡಿ, ಮಕ್ಕಳ ಕಲಿಕೆ ಹಾಗೂ ಆಸಕ್ತಿಗೆ ಪೂರಕವಾಗಿ ಸಂಪನ್ಮೂಲ ವ್ಯಕ್ತಿಗಳಿಂದ ಜ್ಞಾನ ಬೋಧನೆಯನ್ನು ಮಠದಿಂದ ಮಾಡಲಾಗುತ್ತಿದೆ. ಜ್ಞಾನದ ಸುಧೆ ಮಕ್ಕಳಿಗೆ ಮೃಷ್ಟಾನ್ನವಾಗಿ ಉಣಬಡಿಸಿ ಉತ್ತಮ ಸಮಾಜ ಕಟ್ಟಲು ಪ್ರೇರಕರಾಗುವ ಕೆಲಸ ಸದಾ ಮಾಡುವುದಾಗಿ ನುಡಿದರು.
ಮನ್ಮುಲ್ ನಿರ್ದೇಶಕ ಡಾಲುರವಿ ಶಿಬಿರದ ಮಕ್ಕಳಿಗೆ ಶಿಬಿರದ ಕಿಟ್ ಹಾಗೂ ಪುಸ್ತಕ ವಿತರಿಸಿದರು. ಮಠದ ಟ್ರಸ್ಟ್ ಕಾರ್ಯದರ್ಶಿ ಕಾಂತರಾಜು, ಭಾರತ ಸೇವಾ ದಳದ ಜಿಲ್ಲಾ ಸಂಘಟಕ ಗಣೇಶ್, ಮಹಿಳಾ ಹೋರಾಟಗಾರ್ತಿ ಗೋವಿಂದನಹಳ್ಳಿ ಮಣಿ, ಮೈಸೂರಿನ ವಿಜಯ, ಪುರಸಭೆ ಮಾಜಿ ಸದಸ್ಯ ಕೆ.ಆರ್.ನೀಲಕಂಠ, ಸಮಾಜ ಸೇವಕ ಭಾರತೀಪುರ ಪುಟ್ಟಣ್ಣ ಎಸ್.ಗೌಡ, ಯೋಗಗುರು ಅಲ್ಲಮಪ್ರಭು, ಸಂಸ್ಕೃತ ವಿದ್ವಾಂಸರಾದ ಕಿರಣ್, ಸ್ಫೂರ್ತಿ, ಮುಖ್ಯಶಿಕ್ಷಕ ಅಣ್ಣೇಗೌಡ, ರವಿ ಮತ್ತಿತರರು ಇದ್ದರು.ಶ್ರೀಪಟ್ಟಲದಮ್ಮ ದೇವಿಯ ಅದ್ಧೂರಿ ರಥೋತ್ಸವ
ದೇವಲಾಪುರ:ಗ್ರಾಮದೇವತೆ ಶ್ರೀಪಟ್ಟಲದಮ್ಮ ದೇವಿ ರಥೋತ್ಸವ ಭಕ್ತ ಸಾಗರದ ನಡುವೆ ಅದ್ಧೂರಿಯಾಗಿ ಜರುಗಿತು.
ನಾಗಮಂಗಲ ತಾಲೂಕು ದೇವಲಾಪುರ ಗ್ರಾಮದ ಶಕ್ತಿ ದೇವತೆ ಶ್ರೀಪಟ್ಟಲದಮ್ಮ ದೇವಿಯನ್ನ ಪ್ರತಿ ಮನೆಮನೆಗೂ ಮಡಲಕ್ಕಿ ಕಟ್ಟಿ ಊರಿನ ಪ್ರತಿ ಬೀದಿಗಳಿಗೂ ಸಾಗಿ ಸಂಜೆ ಉತ್ಸವ ಮೂರ್ತಿಯನ್ನು ರಥೋತ್ಸವದ ಮೇಲೆ ಇರಿಸಿ ಜನಸಾಗರದ ನಡುವೆ ಸಡಗರದೊಂದಿಗೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.ಅಮ್ಮನ ಮೆರವಣಿಗೆ ವೇಳೆ ಭಕ್ತಾದಿಗಳು ಮಜ್ಜಿಗೆ ಪಾನಕ ಹೆಸರು ಬೇಳೆ ನೀಡಿದರು. ದೇವಲಾಪುರ ದೇವತೆಗಳ ಅದ್ಧೂರಿ ಮೆರವಣಿಗೆಯೊಂದಿಗೆ ಶ್ರೀಪಟ್ಟಲದಮ್ಮ ದೇವಿಯನ್ನು ಭಕ್ತ ಸಾಗರದ ನಡುವೆ ರಥೋತ್ಸವ ಬೀದಿಗೆ ತಂದು ವಿವಿಧ ಪೂಜಾ ಕಾರ್ಯಗಳನ್ನು ನೆರವೇರಿಸಿದ ಜನಸಾಗರದ ನಡುವೆ ರಥೋತ್ಸವ ನಡೆಸಲಾಯಿತು.