ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿಯಿಂದ ಮೆರವಣಿಗೆ ಹೊರಟ ವಿವಿಧ ಕಲಾ ಪ್ರಕಾರಗಳ ಕಲಾವಿದರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಜಿಲ್ಲೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹಬ್ಬ, ಜಯಂತಿ, ಸಮ್ಮೇಳನ ಹಾಗೂ ಉತ್ಸವಗಳಲ್ಲಿ ಜಿಲ್ಲೆಯ ಕಲಾವಿದರನ್ನು ಕಡೆಗಣಿಸಿ ಇವೆಂಟ್ಸ್ ಮ್ಯಾನೇಜ್ಮೆಂಟ್‌ಗಳಿಗೆ ಕಾರ್ಯಕ್ರಮಗಳನ್ನು ಒಪ್ಪಿಸುವ ಮೂಲಕ ಅನ್ಯಾಯ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಜಿಲ್ಲೆಯಲ್ಲಿ ನಡೆಯುವ ಎಲ್ಲಾ ರೀತಿಯ ಸರ್ಕಾರಿ ಕಾರ್ಯಕ್ರಮ, ಜಯಂತಿ, ಸಮಾವೇಶ, ಸಮ್ಮೇಳನ, ಉತ್ಸವಗಳಲ್ಲಿ ಸ್ಥಳೀಯ ಕಲಾವಿದರಿಗೆ ಮೊದಲ ಆದ್ಯತೆ ನೀಡಬೇಕು. ಕಲಾವಿದರಿಂದ ಅರ್ಜಿ ಆಹ್ವಾನಿಸುವ ಬದಲು ಕಲಾವಿದರು, ಕಲಾತಂಡಗಳ ಪಟ್ಟಿ ಮಾಡಿ ಎಲ್ಲರಿಗೂ ಸಮಾನಾಂತರವಾಗಿ ಕಾರ್ಯಕ್ರಮ ನೀಡಬೇಕು. ಸಂಭಾವನೆ ವಿಚಾರದಲ್ಲಿ ಶೋಷಣೆ ತಪ್ಪಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿವಿಧ ಕಲಾ ಪ್ರಕಾರಗಳಿಗೆ ನೀಡುತ್ತಿರುವ ಸಂಭಾವನೆ ಕ್ರಮ ಅನುಸರಿಸಿ ಸಂಭಾವನೆ ನೀಡಬೇಕು. ಕಾರ್ಯಕ್ರಮ ನಡೆದ 15 ದಿನದ ಒಳಗಾಗಿ ಸಂಭಾವನೆ ನೀಡಬೇಕು. ಕಲಾ ಪ್ರದರ್ಶನದ ವೇಳೆ ಕಲಾವಿದರಿಗೆ ಕುಡಿಯುವ ನೀರು, ಊಟ, ವಸತಿ ವ್ಯವಸ್ಥೆ ಮಾಡುವಂತೆ ಆಗ್ರಹಿಸಿದರು.
ಕಲಾವಿದರಾದ ಸಂತೆ ಕಸಲಗೆರೆ ಬಸವರಾಜು, ಹನಿಯಂಬಾಡಿ ಶೇಖರ್, ಎಚ್.ಪಿ.ವೈರಮುಡಿ, ತಗ್ಗಹಳ್ಳಿ ವೆಂಕಟೇಶ್, ಸಿ.ಕುಮಾರಿ, ಲಂಕೇಶ್, ಕಾರಸವಾಡಿ ಮಹದೇವ, ಕೃಷ್ಣೇಗೌಡ, ಸುರೇಶ್, ಬೂದನೂರು ಸ್ವಾಮಿ ಭಾಗವಹಿಸಿದ್ದರು.