ಗೋಕರ್ಣ: ಭಾಷೆ ಅಳಿದರೆ ಸಂಸ್ಕೃತಿ- ಸಂಸ್ಕಾರವೂ ನಾಶವಾಗುತ್ತದೆ. ನಮ್ಮ ಭಾಷೆಯ ಮಧ್ಯದಲ್ಲಿ ಬೇರೆ ಭಾಷೆಯ ಕಲಬೆರಕೆ ಬೇಡ; ಆಂಗ್ಲ ಪದಗಳನ್ನು ಬಳಸದೇ ಕನ್ನಡ ಮಾತನಾಡುವುದೇ ನಮಗೆ ಕಷ್ಟವಾಗುತ್ತಿದೆ ಎನ್ನುವುದು ನಾಚಿಕೆಗೇಡು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ರಾಘವೇಶ್ವರ ಭಾರತೀ ಶ್ರೀ ನುಡಿದರು.
ಭಾಷೆಯನ್ನು ಉಳಿಸಿಕೊಳ್ಳಲು ಇಚ್ಛಾಶಕ್ತಿ ಅಗತ್ಯ. ನಮ್ಮಿಂದ ಪರಕೀಯ ಶಬ್ದಗಳು ಬರಬಾರದು ಎಂಬ ಪಣ ತೊಡೋಣ. ಪ್ರತಿದಿನ ಆ ಸಂಕಲ್ಪ ಸಾಕಾರಕ್ಕೆ ಪ್ರಯತ್ನ ಅಗತ್ಯ ಎಂದು ಅಭಿಪ್ರಾಯಟ್ಟರು. ಸರ್ಕಾರ, ಸಂಘ ಸಂಸ್ಥೆಗಳು ಕನ್ನಡ ಉಳಿಸುತ್ತವೆ ಎಂಬ ಭ್ರಮೆಯಿಂದ ಹೊರಬಂದು, ನಮ್ಮ ಮುಂದಿನ ಪೀಳಿಗೆಗೆ ಶುದ್ಧ ಭಾಷೆ ಉಳಿಸಲು ಪ್ರಯತ್ನ ಮಾಡೊಣ ಎಂದರು.
ಯಕ್ಷಗಾನ, ತಾಳಮದ್ದಳೆಯಲ್ಲಿ ಇಂದಿಗೂ ಕನ್ನಡದ ಶುದ್ಧತೆ ಉಳಿದುಕೊಂಡಿದೆ. ಕನ್ನಡ ಉಳಿದುಕೊಳ್ಳಲು ಈ ಕಲಾಪ್ರಕಾರಗಳು ಕೊಡುಗೆ ನೀಡಿವೆ ಎಂದು ಶ್ಲಾಘಿಸಿದರು.ನಮ್ಮತನ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹವ್ಯಕ ಮಹಾಸಭೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.
ತನ್ನ ವಸ್ತುವನ್ನು ಪ್ರೀತಿಸುವುದು ಸಹಜ; ಇನ್ನೊಬ್ಬರದ್ದನ್ನು ತನ್ನದು ಎಂದು ಭಾವಿಸುವುದು ಪಾಪ. ನಮ್ಮದಲ್ಲದ್ದು ನಮ್ಮ ಜೀವನವನ್ನು ವ್ಯಾಪಿಸುತ್ತಿದೆ ಎಂದರು.
ಕನ್ನಡ ಬೇರೆ ಭಾಷೆಗಳ ಪದ ಬಳಸಿಕೊಳ್ಳುವಾಗ ಕನ್ನಡೀಕರಿಸಿಕೊಂಡು ಬಳಕೆ ಮಾಡಿಕೊಳ್ಳುತ್ತಾ ಬಂದಿದೆ ಎಂದು ಸಮರ್ಥಿಸಿಕೊಂಡರು.
ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಜಿ.ಎಲ್. ಹೆಗಡೆ, ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ.ಗಿರಿಧರ ಕಜೆ ಭಾಗವಹಿಸಿದ್ದರು. ಡಾ.ಪಾದೇಕಲ್ ವಿಷ್ಣು ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕನ್ನಡ ಉಳಿಸುವ ದೃಷ್ಟಿಯಿಂದಲೇ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾಗಿದ್ದಾಗ ಕನ್ನಡ ವಿಶ್ವವಿದ್ಯಾನಿಲಯ ಸ್ಥಾಪಿಸಿದರು. ಇದು ಅವರ ದೂರದರ್ಶಿತ್ವಕ್ಕೆ ಉದಾಹರಣೆ. ಸಾವಿರಾರು ಭಾಷೆಗಳ ಮಧ್ಯೆ ಕನ್ನಡ ವಿಶ್ವದ ಅತ್ಯಂತ ೩೦ ಪ್ರಾಚೀನ ಭಾಷೆಗಳ ಪೈಕಿ ಒಂದು ಎನ್ನುವುದು ನಮ್ಮ ಹೆಮ್ಮೆ. ಬೇರೆ ಭಾಷೆಯನ್ನು ತಿರಸ್ಕರಿಸುವುದು ಬೇಡ; ಆದರೆ ಪರಕೀಯರಾಗಿ ಇರಲು ಬಯಸುವುದಿಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ.ಗಿರಿಧರ ಕಜೆ ಮಾತನಾಡಿ, ನಾವು ಇತರ ಭಾಷೆಗಳಿಗೆ ಒಗ್ಗಿಕೊಳ್ಳಬೇಕೇ ವಿನಃ ಬಗ್ಗಬಾರದು. ಆಹಾರ, ವಸ್ತ್ರ ಸೇರಿದಂತೆ ನಮಗೆ ಹಿತವೆನಿಸಿದ್ದನ್ನೇ ನಾವು ಬಳಸುತ್ತೇವೆ. ಇದು ಭಾಷೆಯ ವಿಚಾರಕ್ಕೂ ಅನ್ವಯವಾಗಬೇಕು ಎಂದು ಅಭಿಪ್ರಾಯಪಟ್ಟರು.
ಸ್ವಭಾಷಾ ಚಿಂತನೆ ಕೃತಿಯ ಎರಡನೇ ಆವೃತ್ತಿಯನ್ನು ಶ್ರೀಗಳು ಲೋಕಾರ್ಪಣೆಗೊಳಿಸಿದರು. ವಿಜಯಲಕ್ಷ್ಮಿ, ಹವ್ಯಕ ಮಹಾಮಂಡಲ ಅಧ್ಯಕ್ಷ ಹರಿಪ್ರಸಾದ್ ಪೆರಿಯಪ್ಪು, ಚಾತುರ್ಮಾಸ್ಯ ತಂಡದ ಸಂಚಾಲಕ ಮಂಜುನಾಥ ಸುವರ್ಣಗದ್ದೆ, ವಿವಿವಿ ಆಡಳಿತಾಧಿಕಾರಿ ಡಾ.ಟಿ.ಜೆ. ಪ್ರಸನ್ನಕುಮಾರ್, ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಪಿಆರ್‌ಒ ಎಂ.ಎನ್. ಮಹೇಶ ಭಟ್ಟ, ಉಂಡೇಮನೆ ವಿಶ್ವೇಶ್ವರ ಭಟ್, ತೆಕ್ಕೆಕೆರೆ ಸುಬ್ರಹ್ಮಣ ಭಟ್, ವಿವಿವಿ ಸಮಿತಿ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ ಉಪಸ್ಥಿತರಿದ್ದರು. ಗುರುಕುಲ ಶಿಕ್ಷಕ ಲೋಹಿತ್ ಹೆಬ್ಬಾರ್ ನಿರೂಪಿಸಿದರು.