ಸೂಕ್ತ ನೆಲೆ ಇಲ್ಲ । ವಿಷ ಜಂತುಗಳ ಮಧ್ಯೆ ನಿತ್ಯ ಬದುಕಿನ ಸೆಣಸಾಟ
ಪಟ್ಟಣದ ಕಾಯಕ ನಗರದಲ್ಲಿ ತಾತ್ಕಾಲಿಕ ಶೆಡ್ ಹಾಕಿಕೊಂಡು ಬದುಕಿನ ಬಂಡಿ ನೂಕುತ್ತಿರುವ ಅಲೆಮಾರಿ ಜನಾಂಗಕ್ಕೆ ನೆಲೆ ಇಲ್ಲದೇ ನಿತ್ಯ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ.
ಹೌದು, ಪಟ್ಟಣದ ಹಳೆ ಸಂತೆ ಮಾರುಕಟ್ಟೆ ಪ್ರದೇಶದಲ್ಲಿಬುಡ್ಗ ಜಂಗಮ, ಸಿಂಧೋಳಿ, ಕುಂಚಿ ಕೊರವರು, ಚನ್ನದಾಸ ಸೇರಿದಂತೆ 44 ಕುಟುಂಬಗಳು ತಾತ್ಕಾಲಿಕ ಶೆಡ್ ಹಾಕಿಕೊಂಡು ಜೀವನ ಸಾಗಿಸುತ್ತಿದ್ದರು. ಈ ಸಂತೆ ಮಾರುಕಟ್ಟೆ ಜಾಗದಲ್ಲಿ ನೆಮ್ಮದಿ ಊರು ಎಂಬ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿ ಮಾಡಬೇಕಿದೆ ಎಂದು ಈ ಅಲೆಮಾರಿ ಜನಾಂಗದವರ ತಾತ್ಕಾಲಿಕ ಶೆಡ್ ತೆರವು ಮಾಡಿಸಿದ್ದರು. ಆಗ ಕಾಯಕ ನಗರದಲ್ಲಿದ್ದ ಖಾಲಿ ನಿವೇಶನಗಳಿಗೆ ಸ್ಥಳಾಂತರ ಮಾಡಲಾಗಿತ್ತು.ಕಾಯಕ ನಗರದಲ್ಲಿ ಕೈಗಾರಿಕೆ ಇಲಾಖೆಯಿಂದ ರಸ್ತೆ, ಚರಂಡಿ, ವಿದ್ಯುತ್ ಸೇರಿದಂತೆ ಇನ್ನಿತರ ಮೂಲಭೂತ ಸೌಲಭ್ಯಗಳನ್ನು ಕೆಲ ಭಾಗಗಳಲ್ಲಿ ಮಾತ್ರ ಮಾಡಿದ್ದಾರೆ. ಸುತ್ತಲೂ ಗಿಡ ಗಂಟೆಗಳ ಪಕ್ಕದಲ್ಲಿ ಬಟ್ಟೆ ಮತ್ತು ತಗಡುಗಳಿಂದ ಅಲೆಮಾರಿಗಳು ಟೆಂಟ್ ಹಾಕಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಮಳೆಗಾಲದಲ್ಲಿ ನಿತ್ಯ ವಿಷ ಜಂತುಗಳ ಮಧ್ಯೆಯೇ ಸಣ್ಣ ಮಕ್ಕಳನ್ನು ಕಟ್ಟಿಕೊಂಡು ಗೇಣು ಜಾಗದಲ್ಲಿ ವಾಸವಾಗಿದ್ದಾರೆ. ಅನೇಕ ಸಲ ವಿಷಗಳನ್ನು ಕಚ್ಚಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈಗ ಕಾಯಕ ನಗರದಲ್ಲಿರುವ ನಿವೇಶನಗಳು ಬೇರೆ ಜನಾಂಗಕ್ಕೆ ಹಂಚಿಕೆಯಾಗಿ ತಾವು ನಿವೇಶನ ಖಾಲಿ ಮಾಡಬೇಕೆಂದು ಅನೇಕ ಸಲ ಅಧಿಕಾರಿಗಳು ಎಚ್ಚರಿಕೆ ನೀಡುತ್ತಾ ಬಂದಿರುವ ಹಿನ್ನೆಲೆ ಅಲೆಮಾರಿಗಳ ಬದುಕು ಅತಂತ್ರವಾಗಿದೆ.
ಪ.ಜಾ, ಪ.ಪಂ, ಅಲೆಮಾರಿ ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಸೋಮವಾರ ಪಟ್ಟಣಕ್ಕೆ ಭೇಟಿ ನೀಡುತ್ತಿದ್ದಾರೆ. ಆ ಸಂದರ್ಭದಲ್ಲಿ ಇವರ ಅಹವಾಲು ಸ್ವೀಕರಿಸಿ, ಇವರಿಗೆ ಸೂಕ್ತ ಸೂರು ನೀಡುತ್ತಾರೆಂಬ ನಿರೀಕ್ಷೆಯಲ್ಲಿ ಅಲೆಮಾರಿಗಳಿದ್ದಾರೆ.