ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಕ್ಯಾತನಹಳ್ಳಿಯಲ್ಲಿರುವ ಸ್ಟ್ಯಾನ್ಫೋರ್ಡ್ ಪಬ್ಲಿಕ್ ಶಾಲೆಯಲ್ಲಿ ಚಿಂತನ-ಮಂಥನ, ಪ್ರೇರಣಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಮಕ್ಕಳು ವಿದ್ಯಾವಂತರಾಗುವುದರ ಜೊತೆಗೆ ಸಂಸ್ಕಾರವಂತರೂ ಆಗಬೇಕು. ಸಂಸ್ಕಾರವಿಲ್ಲದ ಶಿಕ್ಷಣ ಯಾವುದೇ ಪ್ರಯೋಜನವಿಲ್ಲ ಎಂದರು.
ಮಕ್ಕಳು ಯಾವ ರೀತಿ ಕಲಿಕೆಯಲ್ಲಿ ತೊಡಗಿದ್ದಾರೆ ಎಂಬುದನ್ನು ಪೋಷಕರು ಸೂಕ್ಷ್ಮವಾಗಿ ಗಮನಿಸಬೇಕು. ಓದುವುದಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಇತರೆ ಮಕ್ಕಳೊಂದಿಗೆ ಹೋಲಿಕೆ ಮಾಡದೆ ಅವರಷ್ಟಕ್ಕೇ ಓದುವುದಕ್ಕೆ ಮುಕ್ತವಾಗಿ ಬಿಡಬೇಕು. ಯಾವುದೇ ಕಾರಣಕ್ಕೂ ಮಕ್ಕಳ ಮೇಲೆ ಒತ್ತಡ ಹೇರಬಾರದು. ಇದರಿಂದ ಅವರು ಮಾನಸಿಕ ಖಿನ್ನತೆಗೆ ಒಳಗಾಗುವ ಅಪಾಯವಿದೆ ಎಂದು ಎಚ್ಚರಿಕೆ ನೀಡಿದರು.ಚಿಕ್ಕ ವಯಸ್ಸಿನಲ್ಲೇ ಮಕ್ಕಳಲ್ಲಿ ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ಮಕ್ಕಳಲ್ಲಿ ಬೆಳೆಸಬೇಕು. ಧೈರ್ಯ, ಆತ್ಮವಿಶ್ವಾಸವನ್ನು ಹೆಚ್ಚಿಸುವುದರೊಂದಿಗೆ ಸ್ವಾಭಿಮಾನಿಗಳನ್ನಾಗಿ ಅವರ ಬದುಕನ್ನು ರೂಪಿಸುವ ಅಗತ್ಯವಿದೆ. ಇದರಿಂದ ಮಕ್ಕಳು ಎಂದಿಗೂ ಹಾದಿ ತಪ್ಪುವುದಿಲ್ಲ ಎಂದು ವಿವರಿಸಿದರು.
ಪರೀಕ್ಷಾ ಸಮಯದಲ್ಲಿ ಮಕ್ಕಳು ಒತ್ತಡಗಳಿಗೆ ಒಳಗಾಗಬಾರದು. ಭಯಪಡಬಾರದು. ಅಂದಿನ ಪಾಠಗಳನ್ನು ಅಂದೇ ಓದಿ ಕರಗತ ಮಾಡಿಕೊಂಡರೆ ಪರೀಕ್ಷೆ ಎದುರಿಸುವುದಕ್ಕೆ ಸುಲಭವಾಗಲಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯ ವೇಳಾಪಟ್ಟಿ ಪ್ರಕಟವಾಗಿರುವುದರಿಂದ ಮೊಬೈಲ್, ಟೀವಿ ನೋಡುವುದರಿಂದ ವಿದ್ಯಾರ್ಥಿಗಳು ದೂರ ಉಳಿಯಬೇಕು. ಈಗಿನಿಂದಲೇ ಕಲಿಕೆಯ ವೇಳಾಪಟ್ಟಿ ಹಾಕಿಕೊಂಡು ಅದರಂತೆ ಕಲಿಕೆಯಲ್ಲಿ ತೊಡಗಬೇಕು ಎಂದು ಸಲಹೆ ನೀಡಿದರು.
ನಾಲ್ಕೈದು ವರ್ಷಗಳ ಹಿಂದಿನ ಪ್ರಶ್ನೆಪತ್ರಿಕೆಗಳನ್ನು ಪರಾಮರ್ಶೆ ಮಾಡಬೇಕು. ಕಷ್ಟದ ವಿಷಯಗಳಿದ್ದರೆ ಅದಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕೊಡಬೇಕು. ವಿಷಯಗಳು ಅರ್ಥವಾಗದಿದ್ದರೆ ಶಿಕ್ಷಕರಿಂದ ಕೇಳಿ ಮನನ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳೇ ವಿಷಯವಾರು ಒಂದಷ್ಟು ಪ್ರಶ್ನೆಗಳನ್ನು ಹಾಕಿಕೊಂಡು ಉತ್ತರ ಬರೆದು ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವಂತೆ ತಿಳಿಸಿದರು.ಕಾರ್ಯಕ್ರಮದಲ್ಲಿ ಶ್ರೀ ದುರ್ಗಾ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಕೆ.ಎನ್.ವಾಸುದೇವ, ಉಪಾಧ್ಯಕ್ಷ ಕೆ.ಕೃಷ್ಣೇಗೌಡ, ಕಾರ್ಯದರ್ಶಿ ಕೆ.ವಿ.ಚೇತನ್, ಖಜಾಂಚಿ ಡಾ.ಕೆ.ಸೌಮ್ಯ ಹಾಜರಿದ್ದರು.