ಆಲೂರು: ಮಕ್ಕಳಲ್ಲಿ ಉತ್ತಮ ಸಂಸ್ಕಾರ ಮುಖ್ಯವಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ. ಜೆ. ಕೃಷ್ಣೇಗೌಡ ಅಭಿಪ್ರಾಯಪಟ್ಟರು.
ಜಿಲ್ಲಾ ಕಾರ್ಯದರ್ಶಿ ಸುರೇಶ್ ಗುರೂಜಿ ಮಾತನಾಡಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಾಗತಿಕ ಸಂಸ್ಥೆಯಾಗಿದ್ದು ಸುಮಾರು ೨೦೦ ಕ್ಕೂ ಹೆಚ್ಚಿನ ರಾಷ್ಟ್ರಗಳಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆಗಾಗಿ ಹಗಲಿರುಳು ಶ್ರಮಿಸುತ್ತಿದೆ. ಇಡೀ ಭಾರತದಲ್ಲಿ ಕರ್ನಾಟಕ ಸ್ಕೌಟ್ಸ್ ಗೈಡ್ಸ್ ಸಂಸ್ಥೆ ಮುಂಚೂಣಿಯಲ್ಲಿದ್ದರೆ ಕರ್ನಾಟಕದ ಮೈಸೂರು ವಿಭಾಗ ಮಟ್ಟದಲ್ಲಿ ಸತತ ಏಳು ವರ್ಷಗಳಿಂದ ಹಾಸನ ಮುಂಚೂಣಿ ಸ್ಥಾನದಲ್ಲಿದೆ. ನಮ್ಮ ಜಿಲ್ಲೆಯ ಸಮಾಜಮುಖಿ ಕಾರ್ಯಗಳು, ಶೈಕ್ಷಣಿಕ ಚಟವಟಿಕೆಗಳು, ವಿವಿಧ ತರಬೇತಿ ಶಿಬಿರಗಳು, ಮಕ್ಕಳ ನಿರಂತರ ಕಾರ್ಯ ಚಟವಟಿಕೆಗಳು ಈ ಯಶಸ್ಸಿಗೆ ಕಾರಣ. ಬೇಡನ್ ಪೊವೆಲ್ ಜನ್ಮ ದಿನವನ್ನು ಜಾಗತಿಕ ಚಿಂತಕರ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.ವಿಶ್ವೇಶ್ವರ ಐಟಿಐ ಸಂಸ್ಥೆಯ ಪ್ರಾಂಶುಪಾಲ ನಾಗಭೂಷಣ್ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ಯಾವುದೇ ಶಿಕ್ಷಣ ಸಂಸ್ಥೆಯ ಶೋಭೆಯನ್ನು ಹೆಚ್ಚಿಸುತ್ತದೆ. ಮಕ್ಕಳಲ್ಲಿ ಶಿಸ್ತು, ಸಹಾಕಾರ, ಸೇವಾ ಮನೋಭಾವವನ್ನು ಬೆಳೆಸುವುದರ ಮೂಲಕ ಉತ್ತಮ ನಾಗರೀಕರನ್ನಾಗಿ ರೂಪಿಸುತ್ತದೆ. ಮುಂಬರುವ ದಿನಗಳಲ್ಲಿ ಇಡೀ ಶಾಲಾ ಮಕ್ಕಳೆಲ್ಲರನ್ನೂ ಸ್ಕೌಟ್ಸ್ ಮತ್ತು ಗೈಡ್ಸ್ ಮಾಡಿಸಬೇಕೆಂಬುದು ನಮ್ಮ ಮಹಾದಾಸೆ ಎಂದರು.
ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಎಚ್.ಎಂ. ಪ್ರಿಯಾಂಕ, ಭೈರಾಪುರದ ಎಸ್. ವಿ. ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ಗಿರೀಶ್, ತಾಲೂಕು ಕಾರ್ಯದರ್ಶಿ ಕೊಟ್ರೇಶ್ ಎಸ್. ಉಪ್ಪಾರ್, ಶಿಕ್ಷಣ ಸಂಯೋಜಕ ತಿಮ್ಮಶೆಟ್ಟಿ, ತಾಲೂಕು ಉಪಾಧ್ಯಕ್ಷೆ ಸಿ.ಎಸ್.ಪೂರ್ಣಿಮಾ, ತಾಲೂಕು ಖಜಾಂಚಿ ಬಿ.ಎಸ್. ಹಿಮ, ಸ್ಕೌಟ್ ಮಾಸ್ಟರ್ ರಾಮಚಂದ್ರ ಮಾತನಾಡಿದರು. ಸುರೇಶ್ ಗುರೂಜಿ, ಕೊಟ್ರೇಶ್ ಎಸ್. ಉಪ್ಪಾರ್, ಬಿ.ಎಸ್. ಹಿಮ, ದೇವರಾಜು, ರೋಸಿ, ರಾಮಚಂದ್ರ, ಕಾವ್ಯ, ಎಂ. ಎಲ್. ಎಲಿಜೆಬೆತ್, ವೆಂಕಟರಂಗಯ್ಯ ಇದ್ದರು.